ಬೃಹತ್ ಮೈಸೂರು ಮಹಾನಗರ ಪಾಲಿಕೆ ಪ್ರಕ್ರಿಯೆಗೆ ಮತ್ತೆ ಚಾಲನೆ
ಮೈಸೂರು

ಬೃಹತ್ ಮೈಸೂರು ಮಹಾನಗರ ಪಾಲಿಕೆ ಪ್ರಕ್ರಿಯೆಗೆ ಮತ್ತೆ ಚಾಲನೆ

September 9, 2020

ಮೈಸೂರು, ಸೆ.8(ಎಸ್‍ಬಿಡಿ)-ಬಹು ನಿರೀಕ್ಷಿತ `ಬೃಹತ್ ಮೈಸೂರು ಮಹಾ ನಗರ ಪಾಲಿಕೆ’ ರಚನೆ ಆಶಯ ಸಾಕಾರಗೊಳ್ಳುವ ಕಾಲ ಸನ್ನಿಹಿತವಾದಂತಿದೆ.

ಬೆಂಗಳೂರು ನಂತರ ದಲ್ಲಿ ಮೈಸೂರು ಅತ್ಯಂತ ವೇಗವಾಗಿ ಬೆಳೆಯು ತ್ತಿರುವ ನಗರವಾಗಿದೆ. ಅಭಿವೃದ್ಧಿ ದೃಷ್ಟಿಯಿಂದ ಮೈಸೂರು ನಗರ ಪಾಲಿಕೆ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿ, ಬೃಹತ್ ಮಹಾನಗರ ಪಾಲಿಕೆಯನ್ನಾಗಿ ಉನ್ನತೀಕರಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆದಿದೆ.

ಮೈಸೂರು ದಸರಾ ಉನ್ನತ ಸಭೆ ನಂತರ ಬೆಂಗ ಳೂರು ವಿಕಾಸಸೌಧದಲ್ಲಿರುವ ಸಹಕಾರ ಸಚಿವರ ಕಚೇರಿ ಕೊಠಡಿ ಸಂಖ್ಯೆ 38ರ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆ ಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳ ಉಪಸ್ಥಿತಿಯಲ್ಲಿ ಈ ಬಗ್ಗೆ ಮಹತ್ವದ ಸಭೆ ನಡೆದಿದೆ. ಮೈಸೂರು ನಗರಕ್ಕೆ ಹೊಂದಿಕೊಂಡಂತಿರುವ ಹಾಗೂ ಸಮೀಪದಲ್ಲಿರುವ ಅಭಿವೃದ್ಧಿ ಹೊಂದಿರುವ ಹಲವು ಗ್ರಾಮಗಳನ್ನು ನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿ ಕೊಳ್ಳುವ ಸಂಬಂಧ ಚರ್ಚೆ ನಡೆಸಲಾಗಿದೆ. ಈಗಾ ಗಲೇ ಗ್ರಾಮ ಪಂಚಾಯ್ತಿ
ಚುನಾವಣೆ ಘೋಷಣೆಯಾಗಿದೆ. ಆದರೆ ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಳ್ಳಲು ಪ್ರಸ್ತಾಪಿಸಲಾಗಿ ರುವ ಗ್ರಾಮಗಳಲ್ಲಿ ಚುನಾವಣೆ ನಡೆಸದೆ, ತಕ್ಷಣ ಆ ಗ್ರಾಮಗಳನ್ನು ಮೈಸೂರು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುವ ಪ್ರಕ್ರಿಯೆ ನಡೆಸಲು ಚಿಂತನೆ ನಡೆಸಲಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಶೀಘ್ರ ಕ್ರಮ ವಹಿಸಲು ತೀರ್ಮಾನಿಸಲಾಗಿದೆ.

ಮಾಜಿ ಸಚಿವರೂ ಆದ ಹಿರಿಯ ಶಾಸಕ ಜಿ.ಟಿ.ದೇವೇಗೌಡರು, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್, ನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಬೃಹತ್ ನಗರ ಪಾಲಿಕೆ ಆಶಯಕ್ಕೆ ಸ್ಥಳೀಯ ಜನಪ್ರತಿನಿಧಿಗಳೆಲ್ಲರೂ ಒತ್ತಾಸೆಯಾಗಿರುವುದರಿಂದ ಶೀಘ್ರದಲ್ಲೇ ಈ ಕಾರ್ಯ ಸಾಕಾರಗೊಳ್ಳುವ ನಿರೀಕ್ಷೆಯಿದೆ.

ಮನವಿ ಸಲ್ಲಿಸಿದ್ದ ಸಿಂಹ: ವಿ.ಸೋಮಣ್ಣನವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ರಾಗಿದ್ದ ಸಂದರ್ಭದಲ್ಲೇ ಸಂಸದ ಪ್ರತಾಪ್ ಸಿಂಹ ಈ ಸಂಬಂಧ ಅವರಿಗೆ ಪತ್ರ ಬರೆದು, ಮನವಿ ಮಾಡಿದ್ದರು. ಮೈಸೂರು ನಗರ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ನಗರದ ಅಂಚಿನಲ್ಲಿರುವ ಆಲನಹಳ್ಳಿ, ಹಂಚ್ಯಾ, ಕಡಕೊಳ, ರಮ್ಮನಹಳ್ಳಿ, ಹೊಸಹುಂಡಿ, ದೇವಲಾಪುರ, ಶ್ರೀರಾಮಪುರ, ಜಯಪುರ, ಬೋಗಾದಿ, ಹೂಟಗಳ್ಳಿ, ಹಿನಕಲ್, ಕೂರ್ಗಳ್ಳಿ, ಇಲವಾಲ, ಬೆಲವತ್ತ, ಸಿದ್ಧಲಿಂಗಪುರ, ಲಲಿತಾದ್ರಿಪುರ ಅಭಿವೃದ್ಧಿ ಹೊಂದಿರುವ ಗ್ರಾಮಗಳಾಗಿದ್ದು, ಇಲ್ಲೆಲ್ಲಾ ಬಡಾವಣೆಗಳು, ಕೈಗಾರಿಕೋದ್ಯಮ ಬೆಳೆದಿದೆ. ಇದರೊಂದಿಗೆ ಅಲ್ಲಿನ ಜನಸಂಖ್ಯೆ, ಗ್ರಾಪಂ ಆದಾಯದಲ್ಲೂ ಗಣನೀಯ ಏರಿಕೆಯಾಗಿದೆ. ಮತ್ತಷ್ಟು ಮೂಲ ಸೌಕರ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈ ಗ್ರಾಮಗಳನ್ನು ಕರ್ನಾಟಕ ಪೌರಾಡಳಿತ ಕಾಯ್ದೆಯನ್ವಯ ಮೈಸೂರು ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಳ್ಳಲು ಕ್ರಮ ವಹಿಸುವಂತೆ ನಿರ್ದೇಶನ ನೀಡಬೇಕೆಂದು ಪ್ರಸಕ್ತ ವರ್ಷದ ಫೆಬ್ರವರಿ 17ರಂದು ಪತ್ರ ಬರೆದು, ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »