ಮಂಡ್ಯ,sಸೆ.8(ನಾಗಯ್ಯ)-ಡ್ರಗ್ಸ್ ದಂಧೆ ವಿಚಾರದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ನಟಿ ರಾಗಿಣಿಗೆ ಬಿಜೆಪಿ ಬೆಂಬಲವಿದ್ದಿದ್ದರೆ ಅವರು ಬಂಧಿತರಾಗುತ್ತಿರಲಿಲ್ಲ. ಡ್ರಗ್ಸ್ ಮಾಫಿಯಾವನ್ನು ಬುಡಸಮೇತ ಕಿತ್ತು ಹಾಕುವುದೇ ನಮ್ಮ ಸರ್ಕಾರದ ಗುರಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ದಂಧೆ ವಿಚಾರದಲ್ಲಿ ಸರ್ಕಾರ ಹಿಟ್ ಅಂಡ್ ರನ್ ಮಾಡಲ್ಲ. ಈ ಮಾಫಿಯಾದಲ್ಲಿ ಬಿಜೆಪಿ ಮುಖಂಡರಿದ್ದರೂ ಅವರಿಗೂ ನಮ್ಮ ಸಹಕಾರ ಇಲ್ಲ. ಡ್ರಗ್ಸ್ ದಂಧೆಯನ್ನು ಬುಡಸಮೇತ ಕೀಳುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು. ಡ್ರಗ್ಸ್ ದಂಧೆ ಬರೀ ಕರ್ನಾ ಟಕಕ್ಕೇ ಸೀಮಿತವಾಗಿಲ್ಲ. ಇಡೀ ದೇಶ ವನ್ನೇ ಬೆಚ್ಚಿ ಬೀಳಿಸಿದೆ. ರಾಜ್ಯದಲ್ಲೂ ಈ ದಂಧೆ ನಡೀತಾ ಇದೆ. ಯಾವ ಸರ್ಕಾ ರವೂ ಇದರ ಬಗ್ಗೆ ದಿಟ್ಟ ಕ್ರಮ ಕೈಗೊಂಡಿರಲಿಲ್ಲ. ಆದರೆ ಬಿಎಎಸ್‍ವೈ ನೇತೃತ್ವದ ಬಿಜೆಪಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಬಿಎಸ್‍ವೈ ಪರ ಬ್ಯಾಟ್ ಬೀಸಿದರು. ಡ್ರಗ್ಸ್ ದಂಧೆ ಬಗ್ಗೆ ಕಠಿಣವಾದ ಕ್ರಮವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಭಾರತೀಯ ಜನತಾ ಪಾರ್ಟಿ ಇದನ್ನು ಸ್ವಾಗತಿಸುತ್ತದೆ. ಯುವಪೀಳಿಗೆಯನ್ನು ಅಡ್ಡ ದಾರಿಗೆ ಕೊಂಡೊಯ್ಯುವ ಡ್ರಗ್ಸ್ ಮಾಫಿಯಾವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಮುಖಂಡ ಶಿವಣ್ಣ ಮತ್ತಿತರರಿದ್ದರು.