ಸೆ.19ರಂದು ಶ್ವಾನಗಳಿಗೆ  ಉಚಿತ ಲಸಿಕೆ ಕಾರ್ಯಕ್ರಮ
ಮೈಸೂರು

ಸೆ.19ರಂದು ಶ್ವಾನಗಳಿಗೆ ಉಚಿತ ಲಸಿಕೆ ಕಾರ್ಯಕ್ರಮ

September 17, 2021

ಶ್ವಾನ ಸಂತತಿ ಉಳಿಸಲು ಬಿ.ವಿ.ಮಂಜುನಾಥ್ ಮನವಿ
ಮೈಸೂರು,ಸೆ.16(ಆರ್‍ಕೆಬಿ)-ಕೊರೊನಾ ಮಹಾಮಾರಿಯ ಹಾವಳಿಯಿಂದ ಶ್ವಾನ ಗಳಿಗೆ ಸರಿಯಾದ ಪ್ರಮಾಣದಲ್ಲಿ ಲಸಿಕೆಗಳ ಪೂರೈಕೆಯಾಗದೇ ಇರು ವುದನ್ನು ಮನಗಂಡು ಮೈಸೂರು ಬ್ರೀಡರ್ಸ್ ವೆಲ್‍ಫೇರ್ ಅಸೋಸಿ ಯೇಷನ್ ವತಿಯಿಂದ ಸೆ.19ರ ಭಾನುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಚಾಮುಂಡಿ ಪುರಂ ಪಶು ಆಸ್ಪತ್ರೆ ಆವರಣದಲ್ಲಿ ಶ್ವಾನಗಳಿಗೆ ಲಸಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಅಸೋಸಿಯೇಷನ್‍ನ ಗೌರವಾಧ್ಯಕ್ಷ ಬಿ.ಪಿ.ಮಂಜುನಾಥ್ ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಾಮಾಣಿಕತೆ, ಪ್ರೀತಿ, ಶಿಸ್ತಿಗೆ ಹೆಸರಾದ ಶ್ವಾನಗಳು ಕುಟುಂಬ ಸದಸ್ಯರೆಲ್ಲರ ಅಚ್ಚುಮೆಚ್ಚಿನ ಪ್ರಾಣಿ. ಖಿನ್ನತೆ ಹಾಗೂ ಒತ್ತಡ ಹೊಂದಿರುವವರು ಶ್ವಾನಗಳ ಪ್ರೀತಿ, ಅಕ್ಕರೆಯಿಂದ ಪರಿಹಾರ ಕಂಡುಕೊಳ್ಳುತ್ತಾರೆ ಎಂದು ಹಲವು ಅಧ್ಯಯನಗಳಲ್ಲಿ ತಜ್ಞರು ಅಭಿಪ್ರಾಯ ದಾಖಲಿಸಿದ್ದಾರೆ. ನಮ್ಮ ಬಳಿ ಒಂದು ಶ್ವಾನವಿದ್ದರೆ ನಾವು ಯಾವತ್ತಿಗೂ ಒಂಟಿ ಎಂಬ ಭಾವನೆ ಬರುವು ದಿಲ್ಲ. ಶ್ವಾನ ಉತ್ತಮ ಗೆಳೆಯನು ಹೌದು, ವೈದ್ಯನು ಹೌದು. ನಂಬಿಕಸ್ಥ ಸೇವಕ, ಕಾವಲು ಗಾರನೂ ಹೌದು. ನಮ್ಮ ಮನೆಯನ್ನು ಕಾಯುವ ಪಾತ್ರವನ್ನೂ ನಿಭಾಯಿಸುತ್ತದೆ ಎಂದರು.

ಇಂತಹ ಶ್ವಾನಗಳಿಗೆ ಸೃಷ್ಟಿಯ ನಿಯಮಗಳಿಗೆ ವಿರುದ್ಧವಾಗಿ ಭ್ರೂಣಕ್ಕೆ ಕತ್ತರಿ ಇಡುವ ಮೂಲಕ ಅವುಗಳ ಸಂತತಿಗೆ ಕಡಿವಾಣ ಹಾಕಲಾಗುತ್ತಿದೆ. ಇನ್ನೊಂದೆಡೆ ವಿಷವಿಟ್ಟು ಕೊಲ್ಲುವ ನೀಚ ಕೃತ್ಯಗಳು ನಡೆಯುತ್ತಿವೆ. ಹಾಗಾಗಿ ದೇಶದ ಹೆಸರಾಂತ ಶ್ವಾನ ತಳಿಗಳು ಇಂದು ಅವನತಿಯ ಅಂಚಿನಲ್ಲಿವೆ. ಇವುಗಳನ್ನು ಉಳಿಸಿ, ಬೆಳೆಸಬೇಕಾದ ಹೊಣೆಗಾರಿಕೆ ನಮ್ಮದಾಗಿದೆ. ಜೀವಿಸುವ ಹಕ್ಕು ಕೇವಲ ಮನುಷ್ಯನಿಗಷ್ಟೇ ಅಲ್ಲ ಎಂಬುದನ್ನು ಸಾರಿ ಹೇಳಬೇಕಾಗಿದೆ. ಈ ನಿಟ್ಟಿನಲ್ಲಿ ಪಶು ಸಂಗೋಪನಾ ಇಲಾಖೆ ಸಹಯೋಗದಲ್ಲಿ ಸೆ.19ರಂದು ಏರ್ಪಡಿಸಿರುವ `ಶ್ವಾನಗಳಿಗೆ ಉಚಿತ ಲಸಿಕೆ’ ಕಾರ್ಯಕ್ರಮಕ್ಕೆ ನಿಮ್ಮ ಶ್ವಾನಗಳನ್ನು ಕರೆತಂದು ಲಸಿಕೆ ಕೊಡಿಸುವಂತೆ ಮನವಿ ಮಾಡಿದರು. ಗೋಷ್ಠಿಯಲ್ಲಿ ಅಸೋಸಿಯೇಷನ್ ಅಧ್ಯಕ್ಷ ಕುಮಾರ್, ಉಪಾಧ್ಯಕ್ಷ ಮಣಿಕಂಠ, ಕಾರ್ಯದರ್ಶಿ ಗಣೇಶ್‍ರಾಜ್ ಉಪಸ್ಥಿತರಿದ್ದರು.

Translate »