ತಾಳೆ ಬೆಳೆಯುವ ರೈತರಿಗೆ  ನಾನಾ ಸಹಾಯಧನ
ಮೈಸೂರು

ತಾಳೆ ಬೆಳೆಯುವ ರೈತರಿಗೆ ನಾನಾ ಸಹಾಯಧನ

January 25, 2022

ಮೈಸೂರು,ಜ.24(ಆರ್‍ಕೆಬಿ)- ತಾಳೆ ಎಣ್ಣೆಗೆ ಭಾರೀ ಬೇಡಿಕೆ ಇದೆ. ರೈತರು ತಾಳೆ ಬೇಸಾಯ ಕೈಗೊಳ್ಳುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆಯಿಂದ ತಾಳೆ ಬೆಳೆ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ.

ಭಾರತದ ಖಾದ್ಯ ತೈಲದ ವಾರ್ಷಿಕ ಬೇಡಿಕೆ 236 ಲಕ್ಷ ಟನ್‍ಗಳಿದ್ದು, ಪ್ರಸ್ತುತ ಉತ್ಪಾದನೆ ಕೇವಲ 70-80 ಲಕ್ಷ ಟನ್ ಗಳಿದೆ. ಉಳಿದ ಖಾದ್ಯ ತೈಲದ ಬೇಡಿಕೆ ಯನ್ನು ಸರಿದೂಗಿಸಲು ಪ್ರತೀ ವರ್ಷ ಸುಮಾರು 150 ಲಕ್ಷ ಟನ್ ಖಾದ್ಯ ತೈಲ ವನ್ನು ಹೊರದೇಶಗಳಿಂದ ಆಮದು ಮಾಡಿ ಕೊಳ್ಳಲಾಗುತ್ತಿದ್ದು, ಇದರ ಮೌಲ್ಯ ವಾರ್ಷಿಕ ರೂ.77000 ಕೋಟಿಗಳಷ್ಟಾಗುತ್ತದೆ.

ಖಾದ್ಯ ತೈಲದ ಉತ್ಪಾದನೆಯಲ್ಲಿ ಸ್ವಾವ ಲಂಬನೆಯನ್ನು ಸಾಧಿಸುವ ನಿಟ್ಟಿನಲ್ಲಿ ತಾಳೆ ಬೆಳೆ ಬೇಸಾಯ ಪ್ರಮುಖ ಪಾತ್ರ ವಹಿಸಲಿದೆ. ಇತರೆ ಸಾಂಪ್ರದಾಯಿಕ ಎಣ್ಣೆ ಕಾಳುಗಳಿಗೆ ಹೋಲಿಸಿದರೆ ತಾಳೆ ಬೆಳೆ ಪ್ರತಿ ಹೆಕ್ಟೇರ್‍ಗೆ ಅತ್ಯಧಿಕ ಖಾದ್ಯ ತೈಲ ನೀಡುವಂತಹ ಬೆಳೆ. ಪ್ರತಿ ಹೆಕ್ಟೇರ್‍ಗೆ 4-5 ಟನ್ ಖಾದ್ಯ ತೈಲ ಪಡೆಯ ಬಹುದಾಗಿದೆ. ಅಲ್ಲದೆ ಪೌಷ್ಟಿಕಾಂಶದ ದೃಷ್ಟಿಯಿಂದಲೂ ತಾಳೆ ಎಣ್ಣೆಯು ವಿಟ ಮಿನ್ ಎ ಮತ್ತು ಇ ಸತ್ವವನ್ನು ಹೇರಳ ವಾಗಿ ಹೊಂದಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರವು ತಾಳೆ ಬೇಸಾಯವನ್ನು ರೈತರ ಜಮೀನಿನಲ್ಲಿ ಪ್ರೋತ್ಸಾಹಿಸುತ್ತಿದೆ. ಇಂದು ಈ ಬೆಳೆಯು ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾಗಿ ಹೊರಹೊಮ್ಮುತ್ತಿದೆ. ತಜ್ಞರ ಸಮೀಕ್ಷೆ ಪ್ರಕಾರ ಭಾರತ ದೇಶದಲ್ಲಿ ಸುಮಾರು 10.10 ಲಕ್ಷ ಹೆಕ್ಟೇರ್‍ಗಳಲ್ಲಿ ಮತ್ತು ರಾಜ್ಯದಲ್ಲಿ 2.6 ಲಕ್ಷ ಹೆಕ್ಟೇರ್ ಪ್ರದೇಶವು ತಾಳೆ ಬೆಳೆ ಯನ್ನು ಬೆಳೆಯಲು ಸೂಕ್ತವಾಗಿದೆ.

ತಾಳೆ ಬೆಳೆಗಾರರಿಗೆ ಹಲವು ಸೌಲಭ್ಯ: ತಾಳೆ ಬೆಳೆಗಾರರಿಗೆ ಇಲಾಖೆಯಿಂದ ಹಲವು ಸೌಲಭ್ಯ ದೊರೆಯುತ್ತಿದ್ದು, ತಾಳೆ ಬೆಳೆಯ ವಿಸ್ತರಣೆ ಕಾರ್ಯಕ್ರಮದಡಿ, 9x9x9 ಮೀಟರ್ ಅಂತರದಲ್ಲಿ ತ್ರಿಕೋನ ವಿನ್ಯಾಸ ದಲ್ಲಿ ತಾಳೆ ಸಸಿಗಳ ಪ್ರದೇಶ ವಿಸ್ತರಣೆ ಕೈಗೊಂಡರೆ ಪ್ರತಿ ಹೆಕ್ಞೇರ್‍ಗೆ ರೂ.20, 000 ಸಹಾಯ ಧನ ದೊರೆಯಲಿದೆ.

ಮೊದಲ ನಾಲ್ಕು ವರ್ಷಗಳ ನಿರ್ವ ಹಣೆ ಮಾಡಿದರೆ ನಾಲ್ಕು ವರ್ಷಗಳಲ್ಲಿ ವಿಸ್ತರಣೆ ಕೈಗೊಂಡು ಈಗಾಗಲೇ ಅಭಿವೃದ್ದಿ ಪಡಿಸಿರುವ ತಾಳೆ ತೋಟಗಳಿಗೆ ಪ್ರತಿ ಹೆಕ್ಟೇರ್‍ಗೆ ರೂ.10,500 ಸಹಾಯಧನ ವನ್ನು ರಾಸಾಯನಿಕ ಹಾಗೂ ಸಾವಯವ ಗೊಬ್ಬರದ ರೂಪದಲ್ಲಿ ಸರ್ಕಾರಿ ಅನುಮೋ ದಿತ ಖಾಸಗಿ ಪಾಲುದಾರ ಸಂಸ್ಥೆಯವರ ಸಹಯೋಗದೊಂದಿಗೆ ವಿತರಿಸಲಾಗುವುದು.

ಡೀಸೆಲ್, ವಿದ್ಯುತ್ ಚಾಲಿತ ಪಂಪ್ ಸೆಟ್‍ಗೆ ಸಹಾಯಧನ: ತಾಳೆ ತೋಟಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಿಕೊಳ್ಳಲು ತಾಳೆ ಬೆಳೆ ಗಾರರು, ಹೊಸದಾಗಿ ಡೀಸೆಲ್ ಹಾಗೂ ವಿದ್ಯುತ್ ಚಾಲಿತ ಪಂಪ್‍ಸೆಟ್ ಖರೀದಿಸಿ ದ್ದರೆ, ಸಾಮಾನ್ಯ ವರ್ಗಕ್ಕೆ ಸೇರಿದ ಫಲಾ ನುಭವಿಗಳಿಗೆ ಒಟ್ಟು ಘಟಕದ ವೆಚ್ಚಕ್ಕೆ ಶೇ. 50ರಂತೆ ಅಥವಾ ಗರಿಷ್ಠ ರೂ.22,500 ಸಹಾಯಧನ, ಪರಿಶಿಷ್ಟ ಜಾತಿ, ಪಂಗಡ, ಅತೀ ಸಣ್ಣ ಮತ್ತು ಸಣ್ಣ ರೈತರಿಗೆ ಪ್ರತಿ ಘಟಕಕ್ಕೆ ರೂ.27 ಸಾವಿರ ಸಹಾಯ ಧನ ನೀಡಲಾಗುವುದು.

ಕೊಳವೆ ಬಾವಿ ಕೊರೆಯಲು ಸಹಾಯ ಧನ: ಕನಿಷ್ಟ ಒಂದು ಹೆಕ್ಟೇರ್ ಪ್ರದೇಶದಲ್ಲಿ ಇಳುವರಿ ನೀಡುತ್ತಿರುವ ತಾಳೆ ತೋಟದಲ್ಲಿ ಹೊಸದಾಗಿ ಕೊರೆಸಿದ ಕೊಳವೆ ಬಾವಿಗೆ ಒಟ್ಟು ಘಟಕ ವೆಚ್ಚದ ಶೇ.50ರಂತೆ ಅಥವಾ ಗರಿಷ್ಟ ರೂ.50 ಸಾವಿರ ಸಹಾಯ ಧನವಿದೆ. 12 ವರ್ಷ ಮೇಲ್ಪಟ್ಟ ಅಥವಾ 20 ಅಡಿ ಮತ್ತು ಅದಕ್ಕಿಂತ ಎತ್ತರವಿರುವ ತಾಳೆ ಮರಗಳಿಂದ ತಾಳೆ ಹಣ್ಣುಗಳನ್ನು ಕಟಾವು ಮಾಡಲು ಪ್ರತಿ ಮೆಟ್ರಿಕ್ ಟನ್‍ಗೆ ರೂ.ಒಂದು ಸಾವಿರದಂತೆ ಪ್ರತಿ ಫಲಾನುಭವಿಗೆ ಗರಿಷ್ಟ 4 ಹೆಕ್ಟೇರ್‍ವರೆಗೆ ಸಹಾಯ ಧನವಿದೆ.

ತಾಳೆ ಹಣ್ಣು ಕಟಾವು ಮಾಡುವ ಯಂತ್ರ ಖರೀದಿಗೆ ಯೋಜನೆಯ ಮಾರ್ಗ ಸೂಚಿ ಪ್ರಕಾರ ಸಹಾಯಧನವಿದೆ. ತಾಳೆ ತೋಟಗಳಲ್ಲಿ ಕಟಾವು ಮಾಡಿದ ತಾಳೆ ಹಣ್ಣುಗಳನ್ನು ಸರ್ಕಾರಿ ಅನುಮೋ ದಿತ ಸಂಸ್ಥೆಗಳು ಖರೀದಿಸಲು ಬೈಬ್ಯಾಕ್ ಒಪ್ಪಂದ ಮಾಡಿಕೊಂಡಿರುವ ಪ್ರಕಾರ, ಪ್ರತಿ ವರ್ಷ ತಾಳೆ ಹಣ್ಣುಗಳ ಖಚಿತ ಬೆಂಬಲ ಬೆಲೆ ಹಾಗೂ ಪ್ರತಿ ಮಾಹೆಗೆ ತಾಳೆ ಹಣ್ಣು ಖರೀದಿ ದರವನ್ನು ಸರ್ಕಾರ ನಿಗದಿಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದಿನ ಸಾಲಿನಲ್ಲಿ ಕಟಾವು ಮಾಡಿದ ತಾಳೆ ಹಣ್ಣುಗಳಿಗೆ ಖಚಿತ ಬೆಂಬಲ ಬೆಲೆಗೂ ಹಾಗೂ ಖರೀದಿ ದರಕ್ಕೂ ಇರುವ ವ್ಯತ್ಯಾಸದ ಮೊತ್ತವನ್ನು ಅನು ದಾನ ಲಭ್ಯತೆ ಆಧರಿಸಿ ರೈತರಿಗೆ ಸಹಾಯಧನ ನೀಡಲಾಗುವುದು.

Translate »