ಕೊಳ್ಳೇಗಾಲ,ಮೇ.5- ಕೋವಿಡ್ ರೋಗಿಗಳಿಗೆ ಅನುಕೂಲವಾಗುವಂತೆ ವಾಹನ ಸೇವೆಯೊಂದನ್ನು ಒದಗಿಸುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಮಾನವೀಯ ಕೆಲಸ ಮಾಡಿದೆ. ಕೋವಿಡ್ ರೋಗಿಗಳ ಅನುಕೂಲಕ್ಕಾಗಿ ಧರ್ಮಸ್ಥಳ ಸಂಸ್ಥೆ ಸರ್ಕಾರಿ ಆಸ್ಪತ್ರೆಗೆ ವಾಹನವೊಂದನ್ನು ಕೊಡುಗೆಯಾಗಿ ನೀಡಿದ ಹಿನ್ನೆಲೆ ಆ ವಾಹನದ ಕೀಯನ್ನು ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ರಾಜಶೇಖರ್ ಅವರಿಗೆ ಶಾಸಕ ಎನ್.ಮಹೇಶ್ ಬುಧವಾರ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ಜನತಾ ಕಪ್ರ್ಯೂ ಹಿನ್ನೆಲೆ ಬಸ್ ಸಂಚಾರ ಸ್ಥಗಿತವಾಗಿರುವ ಪ್ರಸ್ತುತ ಸಂದರ್ಭದಲ್ಲಿ ಧರ್ಮಸ್ಥಳ ಸಂಸ್ಥೆಯ ಈ ಕೊಡುಗೆ ಕೋವಿಡ್ ರೋಗಿಗಳಿಗೆ ಮರಳು ಗಾಡಿನಲ್ಲಿ ಓಯಸಿಸ್ ಸಿಕ್ಕಿದಂತಾಗಿದೆ. ನಿಜಕ್ಕೂ ಧರ್ಮಸ್ಥಳದ ಈ ಮಾನವೀಯ ಸೇವೆ ಶ್ಲಾಘನೀಯ ಎಂದರು. ರಾಜ್ಯಾದ್ಯಂತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಲವು ಜನಪರ ಕಾರ್ಯ ಮಾಡುತ್ತಿದ್ದು, ಆರೋಗ್ಯ ಸೇವೆ ನಿಟ್ಟಿನಲ್ಲಿ ಇಂದು ವಾಹನ ಕೊಡುಗೆ ನೀಡಿರುವುದು ಹೆಮ್ಮೆಯ ಸಂಗತಿ. ಅಂತಹ ಮಾನವೀಯ ಕೆಲಸಕ್ಕೆ ಮುಂದಾದ ಧರ್ಮಸ್ಥಳದ ಧರ್ಮಾ ಧಿಕಾರಿಗೆ ನಾನು ಭಕ್ತಿಪೂರ್ವಕ ವಂದನೆ ಸಲ್ಲಿಸುವೆ ಎಂದರು. ಈ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಯೋಜನಾಧಿಕಾರಿ ಪುರಷೋತ್ತಮ್, ಜಿಲ್ಲಾ ನಿರ್ದೇಶಕಿ ಲೀಲಾವತಿ, ಮುಖಂಡರಾದ ಜಗದೀಶ್ ಶಂಕನಪುರ, ಮಲ್ಲಿಕ್ ಇದ್ದರು