ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಭರವಸೆ ಹುಸಿ
News

ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಭರವಸೆ ಹುಸಿ

May 1, 2021

ಸೂಕ್ತ ಸಮಯದಲ್ಲಿ ಹಣ ನೀಡಿ ಕಾಯ್ದಿರಿಸದ ಕಾರಣ ಲಸಿಕೆ ಅಲಭ್ಯ

ಬೆಂಗಳೂರು, ಏ. 30(ಕೆಎಂಶಿ)- ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ನಾಳೆಯಿಂದಲೇ ಲಸಿಕೆ ಸಿಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಲಸಿಕೆ ಉತ್ಪಾದಿಸುವ ಕಂಪನಿಗಳಿಗೆ ರಾಜ್ಯ ಸರ್ಕಾರ ಸೂಕ್ತ ಸಮಯದಲ್ಲಿ ಬೇಡಿಕೆ ಸಲ್ಲಿಸದಿ ರುವುದು ಮತ್ತು ಹಣ ಪಾವತಿಸದಿರುವುದರಿಂದ ನಿಗದಿತ ಸಮಯಕ್ಕೆ ಲಸಿಕೆಗಳು ದೊರೆಯುತ್ತಿಲ್ಲ.

18 ರಿಂದ 44 ವಯಸ್ಸಿನವರಿಗೆ ಕೇಂದ್ರ ಸರ್ಕಾರ ಉಚಿತ ಲಸಿಕೆಗಳನ್ನು ಪೂರೈಸುತ್ತಿಲ್ಲ. ಆದರೆ ಈ ವರ್ಗಕ್ಕೆ ರಾಜ್ಯ ಸರ್ಕಾರವೇ ಉಚಿತ ಲಸಿಕೆ ನೀಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದ್ದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆದವರಿಗೆ ಮಾತ್ರ ಉಚಿತ ಲಸಿಕೆ ಎಂದು ಹೇಳಿದ್ದರು. ಆದರೆ ಉಚಿತ ಲಸಿಕೆ ಒಂದಷ್ಟು ದಿನ ವಿಳಂಬವಾಗಲಿದೆ. ಇನ್ನು ಲಸಿಕಾ ಕಂಪನಿ ಗಳು ನಾಳೆಯಿಂದ ದುಬಾರಿ ದರದಲ್ಲಿ ಮುಕ್ತ ಮಾರು ಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿವೆ. ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿತ ದರ ಪಾವತಿಸಿ, ಲಸಿಕೆ ಪಡೆದುಕೊಳ್ಳಬಹುದು.

ಇನ್ನು 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಈಗಿನ ನಿಯಮಾವಳಿಯಂತೆ ಉಚಿತ ಹಾಗೂ ಕಡಿಮೆ ದರದಲ್ಲಿ ಲಸಿಕೆ ಲಭ್ಯವಾಗಲಿದೆ. ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ. ಸುಧಾಕರ್, ಕೋವಿಡ್ ಲಸಿಕೆ ಪಡೆಯಲು ನಾಳೆ ಅಧಿಕೃತ ಮಾಹಿತಿ ನೀಡುವವರೆಗೆ ನೋಂದಣಿ ಮಾಡಿಕೊಂಡವರು ಯಾರೂ ಆಸ್ಪತ್ರೆಯ ಬಳಿ ಹೋಗಬಾರದು ಎಂದು ಮನವಿ ಮಾಡಿದ್ದಾರೆ. ಈವರೆಗೆ ರಾಜ್ಯದಲ್ಲಿ 6 ಲಕ್ಷ ಡೋಸ್ ಇದೆ ಎಂಬ ಮಾಹಿತಿ ಇದೆ. ಈಗಾಗಲೇ ನೋಂದಣಿ ಮಾಡಿಕೊಂಡವರು ಯಾರೂ ಆಸ್ಪತ್ರೆಯ ಬಳಿ ಹೋಗಬಾರದು ಎನ್ನುವ ಮೂಲಕ 18 ವರ್ಷ ದಿಂದ 44 ವರ್ಷದವರಿಗೆ ನಾಳೆ ಡೋಸ್ ಸಿಗಲ್ಲ ಎಂದು ಅಧಿಕೃತವಾಗಿ ತಿಳಿಸಿದರು. ಉಚಿತ ವ್ಯಾಕ್ಸಿನ್ ವಿಚಾರದಲ್ಲಿ ಗೊಂದಲ ಬೇಡ. ಡೋಸ್ ವಿಚಾರದಲ್ಲಿ ಕೇಂದ್ರಕ್ಕೆ ಒತ್ತಾಯ ಮಾಡಲು ಸರ್ಕಾರ ಸಿದ್ದವಿದೆ. 18 ವಯಸ್ಸಿನಿಂದ 44 ವರ್ಷದವರೆಗಿನವರು ಕೋವಿಡ್ ಪೋರ್ಟಲ್ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು. ನಮಗೆ ಇನ್ನೂ ಡೆಲಿವರಿ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ.ಅಧಿಕೃತವಾಗಿ ಆ ಕಂಪನಿಗಳು ತಿಳಿಸಿದ ಮೇಲೆ ತಮಗೆ ಮಾಹಿತಿ ನೀಡಲಾಗುವುದು ಎಂದರು. ಹೈದರಾ ಬಾದ್ ಮೂಲದ ಬಯೋಟೆಕ್, ರಷ್ಯಾ ಮೂಲದ ಸ್ಟೂಟ್ನಿಕ್, ರೆಡ್ಡಿ ಲ್ಯಾಬೋರೇಟರಿ ಲಸಿಕೆ ನೀಡಲಿ ರುವ ಸಂಸ್ಥೆಗಳಾಗಿವೆ. ರಾಜ್ಯ ಸರ್ಕಾರ 400 ಕೋಟಿಗೆ 1 ಕೋಟಿ ಡೋಸ್‍ಗೆ ಆರ್ಡರ್ ಮಾಡಿದೆ. 18-44 ವಯೋಮಾನದ ಮೂರೂವರೆ ಕೋಟಿ ಜನ ರಾಜ್ಯದಲ್ಲಿ ಇದ್ದಾರೆ ಎಂಬ ಅಂದಾಜಿದೆ ಎಂದರು.

ರಾಜ್ಯದಲ್ಲಿ ಕಫ್ರ್ಯೂ ಇದ್ದರೂ ಜನರು ಬೇಕಾಬಿಟ್ಟಿ ಓಡಾಟ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ನಿಮ್ಮ ಜವಾಬ್ದಾರಿಯನ್ನು ಪಾಲನೆ ಮಾಡಬೇಕು.ಜನರ ಕಷ್ಟದ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಿವೆ. ಮಾರ್ಗಸೂಚಿಯನ್ನು ನಾವು ಕೊಟ್ಟಿದ್ದೇವೆ.ಜನ ಅದನ್ನು ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.

Translate »