ತಾವಾಗೇ ಕೊರೊನಾ ಅಪ್ಪಿಕೊಳ್ಳುತ್ತಿರುವ ಜನ
ಮೈಸೂರು

ತಾವಾಗೇ ಕೊರೊನಾ ಅಪ್ಪಿಕೊಳ್ಳುತ್ತಿರುವ ಜನ

May 1, 2021

ಮೈಸೂರು, ಏ.30(ಎಂಟಿವೈ)- ರಾಜ್ಯದಲ್ಲಿ ಕೊರೋನಾ 2ನೇ ಅಲೆಯ ಹಾವಳಿ ತೀವ್ರಗೊಂಡಿದ್ದು, ನಿಯಂತ್ರಣ ಕ್ರಮವಾಗಿ ರಾಜ್ಯಾದ್ಯಂತ 14 ದಿನ ಕೋವಿಡ್ ಕಫ್ರ್ಯೂ ಜಾರಿಗೊಳಿಸಿದ್ದರೂ ಜನರು ಮಾತ್ರ ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಸಾಮಾ ಜಿಕ ಅಂತರ ಮರೆತು ಗುಂಪುಗೂಡುತ್ತಿ ದ್ದಾರೆ. ಮೈಸೂರಿನ ಎಂಜಿ ರಸ್ತೆಯ ತರಕಾರಿ ಮಾರುಕಟ್ಟೆ, ಸಂತೇಪೇಟೆ, ಆನೆ ಸಾರೋಟು ರಸ್ತೆ, ಚಿಕ್ಕ ಗಡಿಯಾರದ ಸುತ್ತಲ ಪ್ರದೇಶ ಕೊರೊನಾ ಸೋಂಕು ಹರಡುವ ಹಾಟ್‍ಸ್ಪಾಟ್‍ಗಳಾಗುತ್ತಿವೆ ಎಂಬ ಆತಂಕವಿದೆ. ಸೋಂಕು ಹರಡು ವಿಕೆಯ ಸರಪಳಿ ತುಂಡರಿಸಿ ಜನರನ್ನು ಸೋಂಕಿನಿಂದ ಪಾರು ಮಾಡಲೆಂದೇ ಕೋವಿಡ್ ಕಫ್ರ್ಯೂ ಜಾರಿಗೊಳಿಸಲಾಗಿದೆ. ಆದರೆ, ಹಾಲು, ಹಣ್ಣು, ದಿನಸಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗಾಗಿ ಜನರಿಗೆ ಬೆಳಿಗ್ಗೆ 6ರಿಂದ 10ರವರೆಗೆ ಅವಕಾಶ ನೀಡಲಾಗಿದೆ. ಆದರೆ, ಖರೀದಿ ಸುವವರು, ಮಾರಾಟಗಾರರು ಇಬ್ಬರೂ ಸೋಂಕು ಹರಡುವ ಭಯವಿಲ್ಲದಂತೆ ವರ್ತಿಸುತ್ತಿದ್ದಾರೆ. ಮಾಸ್ಕ್ ಧರಿಸದೆ, ಅಂತರ ಕಾಯ್ದುಕೊಳ್ಳದೆ, ಬದಲಾಗಿ ಗುಂಪು ಗೂಡಿ ಅಪಾಯ ಮೈಮೇಲೆ ಎಳೆದು ಕೊಳ್ಳುತ್ತಿದ್ದಾರೆ. ಜನರ ಬೇಜ ವಾಬ್ದಾರಿ ವರ್ತನೆಯಿಂದ ಅಮಾಯಕರು, ವಯೋ ವೃದ್ಧರು, ಮಕ್ಕಳು, ವಿವಿಧ ಆರೋಗ್ಯ ಸಮಸ್ಯೆ ಯಿಂದ ಬಳಲುವವರು ಕೊರೊನಾ ಸೋಂಕಿಗೆ ತುತ್ತಾಗುವ ಅಪಾಯವಿದೆ. ಇದು ಜಿಲ್ಲಾಡಳಿ ತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಸಂತೇಪೇಟೆ: ಸಂತೇಪೇಟೆಯಲ್ಲಿ ದಿನಸಿ ಮತ್ತಿತರ ಅಗತ್ಯ ವಸ್ತುಗಳ ಖರೀದಿಗೆ ಜನ ನಿತ್ಯ ಬೆಳಿಗ್ಗೆ ಮುಗಿಬೀಳುತ್ತಿದ್ದಾರೆ. ಅಂಗಡಿಗಳ ಒಳ-ಹೊರಗೆ ಗುಂಪಿನಲ್ಲೇ ಇರುತ್ತಾರೆ. ನಗರದ ವಿವಿಧ ಬಡಾವಣೆ ಮಾತ್ರವಲ್ಲದೆ, ತಾಲೂಕಿನ ಗ್ರಾಮಗ ಳಿಂದಲೂ ಅಗತ್ಯ ವಸ್ತು ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂತೇಪೇಟೆಗೆ ಬರುತ್ತಿದ್ದಾರೆ. ಗ್ರಾಮೀಣ ಪ್ರದೇಶ, ಬಡಾ ವಣೆಗಳ ಕಿರಾಣಿ ಅಂಗಡಿ ಮಾಲೀಕರು ಸಗಟು ಮಳಿಗೆಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಗೂಡ್ಸ್ ವಾಹನಗಳಲ್ಲಿ ದೌಡಾಯಿಸುತ್ತಿದ್ದಾರೆ. ಇದರಿಂದ ಸಂತೇಪೇಟೆಯಲ್ಲಿ ಜನಜಂಗುಳಿ ಉಂಟಾಗುತ್ತಿದೆ. ಪರಿಣಾಮ ಸಂತೇಪೇಟೆ ರಸ್ತೆಯಲ್ಲಿ ಬೆಳಿಗ್ಗೆ 7ರಿಂದ 9.30ರವರೆಗೂ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಸಂತೇಪೇಟೆ ರಸ್ತೆಯಲ್ಲಿ ಏಕಮುಖ ಸಂಚಾರದ ವ್ಯವಸ್ಥೆ ಇದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಗೂಡ್ಸ್ ವಾಹನಗಳು ಬಂದಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು. ಬೆಳಿಗ್ಗೆ 9.30ಕ್ಕೆ ಸಂತೆಪೇಟೆಗೆ ಬರುವ ಪೊಲೀಸರು 10 ಗಂಟೆಗೆಲ್ಲಾ ವಹಿವಾಟು ಬಂದ್ ಮಾಡಿಸಿ ಮಳಿಗೆಗಳು ಬಾಗಿಲು ಹಾಕುವಂತೆ ಮಾಡಲು, ಗುಂಪುಗೂಡಿದ್ದ ಜನರನ್ನು ವಾಪಸ್ ಕಳುಹಿಸಲು ಹರಸಾಹಸ ಪಡುವಂತಾಗಿದೆ.

ಚಿಕ್ಕ ಗಡಿಯಾರ ಸುತ್ತ: ದೇವರಾಜ ಮಾರುಕಟ್ಟೆ ಮುಂದಿನ ರಸ್ತೆ, ವಿನೋಬಾ ರಸ್ತೆ ಅಂಗಡಿಗಳಲ್ಲೂ ಅಗತ್ಯ ವಸ್ತುಗಳ ಖರೀದಿ ಜೋರಾಗಿಯೇ ನಡೆಯುತ್ತಿದೆ. ಅಂತರ ಕಾಯ್ದುಕೊಳ್ಳುವಂತೆ ಎಷ್ಟೇ ಹೇಳಿದರೂ ಗ್ರಾಹಕರಿಗೆ ಕೇಳುತ್ತಿಲ್ಲ. ಅಂಗಡಿ ಮುಂದೆ ಹಗ್ಗ ಕಟ್ಟಿ ಸಾಲಾಗಿ ಬರುವಂತೆ ಕೋರುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ.

ಆನೆ ಸಾರೋಟು ರಸ್ತೆ ಜನಜಾತ್ರೆ: ದೇವರಾಜ ಮಾರುಕಟ್ಟೆ ಹಿಂಭಾಗದ ಆನೆ ಸಾರೋಟು ರಸ್ತೆ(ಬೋಟಿ ಬಜಾರ್ ರಸ್ತೆ)ಯಲ್ಲಿ ನಿತ್ಯ ಜನಜಾತ್ರೆಯೇ ನೆರೆಯುತ್ತಿದೆ. ರಸ್ತೆಯ ಎರಡೂ ಬದಿಯ ಹಣ್ಣಿನ ಮಳಿಗೆಗಳಿವೆ. ಹಣ್ಣಿನ ಮಂಡಿಗಳೂ ಇರುವುದರಿಂದ ಹೋಲ್‍ಸೆಲ್ ದರದಲ್ಲಿ ಖರೀದಿಸಬಹುದು ಎಂಬ ಲೆಕ್ಕಾಚಾರದಲ್ಲಿ ಜನರು ಬೆಳಿಗ್ಗೆ 6ರಿಂದಲೇ ಜಮಾವಣೆ ಗೊಳ್ಳುತ್ತಿದ್ದಾರೆ. ತಳ್ಳುವ ಗಾಡಿ ಹಣ್ಣಿನ ವ್ಯಾಪಾರಿಗಳು ಇದೇ ರಸ್ತೆಯಲ್ಲಿ ನಿಂತಿರುತ್ತಾರೆ. ಅಲ್ಲದೆ ಮೀನು, ಕೋಳಿ, ಕುರಿ ಮಾಂಸದ ಅಂಗಡಿಗಳೂ ಇಲ್ಲಿಯೇ ಇರುವುದರಿಂದಲೂ ಜನಜಂಗುಳಿ ಇದೆ. ಇದು ಸೋಂಕು ಹರಡುವಿಕೆಗೆ ಆಹ್ವಾನ ನೀಡುವಂತಾಗಿದೆ.

ಎಂಜಿ ರಸ್ತೆ ಮಾರುಕಟ್ಟೆ: ಮೈಸೂರಿನ ಮಹಾತ್ಮಗಾಂಧಿ ರಸ್ತೆಯ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಬೆಳಿಗ್ಗೆ 6ರಿಂದ 10ರವರೆಗಿನ ಸ್ಥಿತಿ ನೋಡಿದರೆ ಆತಂಕ ಹೆಚ್ಚಿಸುತ್ತದೆ. ಚಿಲ್ಲರೆ ವ್ಯಾಪಾರಿಗಳು, ಗ್ರಾಹಕರು, ಹಣ್ಣು-ತರಕಾರಿಗೆ ಮುಗಿಬೀಳುತ್ತಿದ್ದಾರೆ. ಅಂತರ ಕಾಯ್ದುಕೊಳ್ಳುವಂತೆ, ಮಾಸ್ಕ್ ಧರಿಸುವಂತೆ ಪಾಲಿಕೆ ಸಿಬ್ಬಂದಿ, ಪೊಲೀಸರು ಧ್ವನಿವರ್ಧಕದಲ್ಲಿ ಮನವಿ ಮಾಡುತ್ತಿದರೂ ಜನ ಮಾತ್ರ ಕೇಳುತ್ತಿಲ್ಲ. ಇಲ್ಲಿ ಹಣ್ಣು-ತರಕಾರಿ, ಸೊಪ್ಪು ತಾಜಾ ಸಿಗುತ್ತದೆಂಬ ಕಾರಣದಿಂದ ಸಾವಿರಾರು ಮಂದಿ ವಯೋಭೇದ ಮರೆತು ಎಡತಾಕುತ್ತಿದ್ದಾರೆ. ಈ ಮಾರುಕಟ್ಟೆಯಲ್ಲಿ 400ಕ್ಕೂ ಹೆಚ್ಚು ವ್ಯಾಪಾರಿಗಳಿದ್ದು, ನಿತ್ಯ 5-6 ಸಾವಿರ ಗ್ರಾಹಕರು ಭೇಟಿ ನೀಡುತ್ತಿದ್ದಾರೆ. ಕಿಷ್ಕಿಂದೆಯಂತಿರುವ ಸ್ಥಳದಲ್ಲಿ ಏಕಕಾಲದಲ್ಲಿ ಸಾವಿರಾರು ಮಂದಿ ಸೇರುತ್ತಿರುವುದು, ಅಂತರ ಕಾಯ್ದುಕೊಳ್ಳದಿರುವುದು ಸೋಂಕು ಹರಡುವಿಕೆಯ ಹಾಟ್‍ಸ್ಪಾಟ್ ಆಗಿಸುವ ಅಪಾಯವಿದೆ. ಜನತೆ ಇನ್ನಾದರೂ ಅಂತರ ಕಾಯ್ದುಕೊಂಡು ತರಕಾರಿ, ಅಗತ್ಯ ವಸ್ತು ಖರೀದಿಸುವಂತೆ ಮೈಸೂರು ಮಹಾನಗರ ಪಾಲಿಕೆ ಮನವಿ ಮಾಡಿದೆ.

2 ಗ್ರಾಮಗಳಿಗೂ ಸೋಂಕು ರವಾನೆ ಗ್ರಾಮೀಣ ಪ್ರದೇಶದಿಂದ ಹಣ್ಣು-ತರಕಾರಿ ತರುವ ರೈತರು ಇಲ್ಲಿ ಸೋಂಕಿ ತರ ಸಂಪರ್ಕಕ್ಕೆ ಒಳಗಾಗಿ ತಮ್ಮೂ ರಿಗೂ ಸೋಂಕು ಒಯ್ಯ ಬಹುದೆಂಬ ಆತಂಕವಿತ್ತು. ಇದನ್ನು ನಿಜ ಮಾಡು ವಂತೆ ಮೈಸೂರು ತಾಲೂಕಿನ 2 ಗ್ರಾಮಗಳ ಕೆಲವು ವ್ಯಾಪಾರಿಗಳಿಗೆ ಸೋಂಕು ದೃಢ ಪಟ್ಟಿದೆ. ಇತರೆ ಗ್ರಾಮಗಳಿಗೂ ಸೋಂಕು ಹರಡುವ ಭೀತಿ ಎದುರಾಗಿದೆ.

Translate »