ನ್ಯಾಯ ವಿಜ್ಞಾನ ಪ್ರಯೋಗಾಲಯ ಉನ್ನತಿಗೆ ಆದ್ಯತೆ: ಗೃಹ ಸಚಿವ
News

ನ್ಯಾಯ ವಿಜ್ಞಾನ ಪ್ರಯೋಗಾಲಯ ಉನ್ನತಿಗೆ ಆದ್ಯತೆ: ಗೃಹ ಸಚಿವ

August 26, 2021

ಬೆಂಗಳೂರು, ಆ.25(ಕೆಎಂಶಿ)-ನ್ಯಾಯ ವಿಜ್ಞಾನ ಪ್ರಯೋಗಾಲಯವನ್ನು ಉನ್ನತೀ ಕರಿಸಲು ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ. ಪೊಲೀಸ್ ಪಬ್ಲಿಕ್ ಶಾಲೆಯ ಶಿಶು ವಿಹಾರ, ಆಡಳಿತ ಕಚೇರಿಯ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಚಾರಿ ಫೋರೆನ್ಸಿಕ್ ಪ್ರಯೋಗಾಲಯಗಳಿಗೂ ಕೂಡ ಇಂದು ಚಾಲನೆ ನೀಡಲಾಗಿದೆ ಎಂದರು. ಪೊಲೀಸರ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಪೊಲೀಸ್ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ನಾಗರಿಕರು ನೆಮ್ಮದಿಯ ಬದುಕು ನಡೆಸಲು ಹಗಲಿರುಳು ಪೊಲೀ ಸರು ಎಚ್ಚರವಾಗಿದ್ದು, ರಕ್ಷಣೆ ಮಾಡಬೇಕಾಗಿದೆ. ರಾಷ್ಟ್ರದ ಗಡಿ ಕಾಯುವ ಸೈನಿಕರಿಗೆ ತಮ್ಮ ಶತ್ರುಗಳ ಬಗ್ಗೆ ಅರಿವಿರುತ್ತದೆ. ಆದರೆ, ನಾಡಿನಲ್ಲಿ ಸೇವೆ ಸಲ್ಲಿಸುವ ಪೊಲೀಸರಿಗೆ ಅಂಥ ಮಾಹಿತಿ ಇರುವುದಿಲ್ಲ. ಒಂದು ರೀತಿಯಲ್ಲಿ ಸವಾಲಿನ ಕೆಲಸವನ್ನು ಪೊಲೀಸರು ನಿಭಾಯಿಸಬೇಕಾಗಿದೆ. ಪೊಲೀಸರು ಮತ್ತು ಅವರ ಕುಟುಂಬ ದವರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ರಾಜ್ಯದಲ್ಲಿ ಮಾದಕ ವಸ್ತು ಮೂಲೋತ್ಪಾಟನೆ ಮಾಡಲು ನಿರ್ಧಾರ ಮಾಡಲಾಗಿದೆ. ಯುವಕರು ಮಾದಕ ವಸ್ತುಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು.

Translate »