ಕೇಂದ್ರದ ಎನ್‍ಎಂಪಿ ಗುಲಾಮಗಿರಿ ವ್ಯವಸ್ಥೆಗೆ ಮುನ್ನುಡಿ
ಮೈಸೂರು

ಕೇಂದ್ರದ ಎನ್‍ಎಂಪಿ ಗುಲಾಮಗಿರಿ ವ್ಯವಸ್ಥೆಗೆ ಮುನ್ನುಡಿ

August 26, 2021

ಮೈಸೂರು,ಆ.25(ಪಿಎಂ)-ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 6 ಲಕ್ಷ ಕೋಟಿ ರೂ. ಮೊತ್ತದ ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆ (ಎನ್‍ಎಂಪಿ) ಮೂಲಕ ಖಾಸಗಿ ಯವರಿಗೆ ದೇಶ ಮಾರಲು ಮುಂದಾಗಿದ್ದು, ಆ ಮೂಲಕ ದೇಶದಲ್ಲಿ ಗುಲಾಮಗಿರಿ ವ್ಯವಸ್ಥೆ ಜಾರಿಗೆ ಮುನ್ನುಡಿ ಬರೆದಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಟೀಕಾಪ್ರಹಾರ ನಡೆಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಮೂಲಸೌಕರ್ಯ ಯೋಜನೆಗೆ ಅನುದಾನ ಒದಗಿಸುವ ನೆಪದಲ್ಲಿ ಕೇಂದ್ರ ಸರ್ಕಾರ ದೇಶದ ಸಾರ್ವಜನಿಕ ವಲಯದ ಆಸ್ತಿಯನ್ನು ಮೂರ್ನಾಲ್ಕು ಉದ್ಯಮಿಗಳಿಗೆ ಮಾರುತ್ತಿದೆ. ರೈಲು ನಿಲ್ದಾಣ, ರಸ್ತೆಗಳು, ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆ ಕೊಳವೆ ಮಾರ್ಗ, ವಿದ್ಯುತ್ ವಲಯದ ಯೋಜನೆ ಗಳನ್ನು ಖಾಸಗಿ ವಲಯದ ಕಂಪನಿಗಳಿಗೆ ಲೀಸ್ ಆಧಾರ ದಲ್ಲಿ ವರ್ಗಾಯಿಸಲು ಮುಂದಾಗಿದೆ ಎಂದು ಪುಷ್ಪಾ ಅಮರ್‍ನಾಥ್ ಆಕ್ಷೇಪ ವ್ಯಕ್ತಪಡಿಸಿದರು.

ದೇಶವನ್ನು ಮಾರಲು ಬಿಡುವು ದಿಲ್ಲ ಎಂದು ಹೇಳಿದ್ದ ಪ್ರಧಾನಿ ಮೋದಿ ಅವರು ಈಗ ತಮ್ಮ ಮೂರ್ನಾಲ್ಕು ಸ್ನೇಹಿತರಿಗೆ ದೇಶ ವನ್ನು ಮಾರುತ್ತಿದ್ದಾರೆ. 70 ವರ್ಷ ಗಳಲ್ಲಿ ಕಾಂಗ್ರೆಸ್ ಜನರ ತೆರಿಗೆ ಹಣ ದಿಂದ ಶ್ರಮ ವಹಿಸಿ ಸೃಷ್ಟಿಸಿರುವ ಸಂಪತ್ತನ್ನು ಉದ್ಯಮಿಗಳಿಗೆ ಹಸ್ತಾಂತರಿಸಿ ದೇಶದಲ್ಲಿ ಗುಲಾಮ ಗಿರಿ ವ್ಯವಸ್ಥೆ ಜಾರಿಗೊಳಿಸುತ್ತಿದೆ ಎಂದು ಕಿಡಿಕಾರಿದರು.

ಇದು ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡುವ ಯೋಜನೆಯಾಗಿದ್ದು, ಕಾನೂನುಬದ್ಧವಾಗಿ ದೇಶವನ್ನು ಲೂಟಿ ಮಾಡಲು ಅವಕಾಶವಾಗಲಿದೆ. ಈ ಯೋಜನೆ ಸಂಬಂಧ ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಲಿಲ್ಲ. ಜನಾ ಭಿಪ್ರಾಯವನ್ನೂ ಕೇಳದೇ ಏಕಪಕ್ಷೀಯವಾಗಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿದರು. ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ಪುಷ್ಪವಲ್ಲಿ, ಕಾಂಗ್ರೆಸ್ ಮಹಿಳಾ ಮುಖಂಡರಾದ ಲತಾ ಸಿದ್ದಶೆಟ್ಟಿ, ಸುಶೀಲ ನಂಜಪ್ಪ, ಲತಾಮೋಹನ್, ಡಾ.ಸುಜಾತ ರಾವ್, ರಾಧಾಮಣಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »