ಮೈಸೂರು ಮೃಗಾಲಯದಲ್ಲಿಂದು ಗುಬ್ಬಿ, ಅರಣ್ಯ ಜಲ ಸಂರಕ್ಷಣೆ ಜಾಗೃತಿ
ಮೈಸೂರು

ಮೈಸೂರು ಮೃಗಾಲಯದಲ್ಲಿಂದು ಗುಬ್ಬಿ, ಅರಣ್ಯ ಜಲ ಸಂರಕ್ಷಣೆ ಜಾಗೃತಿ

March 21, 2019

ಮೈಸೂರು: ಪ್ರತಿ ವರ್ಷ ಮಾ.20ರಂದು ಗುಬ್ಬಚ್ಚಿ ದಿನ, ಮಾ.21ರಂದು ವಿಶ್ವ ಅರಣ್ಯ ದಿನ ಹಾಗೂ ಮಾ.22ರಂದು ವಿಶ್ವ ಜಲ ದಿನ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ(ಮಾ.21)ರಂದು ಬೆಳಿಗ್ಗೆ 10ರಿಂದ ಮೈಸೂರು ಮೃಗಾಲಯದಲ್ಲಿ ಪ್ರವಾಸಿಗರಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಳಿವಿನಂಚಿನಲ್ಲಿರುವ ಗುಬ್ಬಚ್ಚಿ ಸಂತತಿ ರಕ್ಷಿಸುವುದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿ ಸಲು ಕೆಲ ವರ್ಷಗಳಿಂದ ವಿಶ್ವ ಗುಬ್ಬಚ್ಚಿ ದಿನ ಆಚರಿಸಲಾಗುತ್ತಿದೆ. ಗುಬ್ಬಿಗಳ ಸಂತತಿ ರಕ್ಷಣೆಗೆ ಮನೆ ಮುಂದೆ, ಛಾವಣಿ ಮೇಲ್ಭಾಗ ನೀರು, ತಿನ್ನಲು ಕಾಳು ಇಡುವ ಅಭಿ ಯಾನ ನಡೆದಿದೆ. ಮೊಬೈಲ್ ಟವರ್ ತರಂಗಗಳಿಂದ ಗುಬ್ಬಚ್ಚಿ ಸೇರಿದಂತೆ ಪಕ್ಷಿ ಸಂಕು ಲದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬ ಆತಂಕಕಾರಿ ವಿಷಯವನ್ನು ಮುಂದಿಟ್ಟುಕೊಂಡು, ಗುಬ್ಬಚ್ಚಿ ಸಂತತಿ ಉಳಿಸಲು ಅರಣ್ಯ ಇಲಾಖೆಯೊಂದಿಗೆ ಸ್ವಯಂ ಸಂಸ್ಥೆಗಳು ಕಾರ್ಯಕ್ರಮ ರೂಪಿಸುತ್ತಿವೆ. ಅರಣ್ಯ ನಾಶದಿಂದ ಜಾಗತಿಕ ತಾಪಮಾನದಲ್ಲಿ ಏರುಪೇರಾಗುತ್ತಿರು ವುದನ್ನು ಮನಗಂಡು ಹಲವು ರಾಷ್ಟ್ರಗಳು ಪ್ರಕೃತಿ ಮೇಲಿನ ದೌರ್ಜನ್ಯ ತಡೆಗೆ ಮಾ.21 ರಂದು ವಿಶ್ವ ಅರಣ್ಯ ದಿನ ಆಚರಿಸುತ್ತಿವೆ. ಹಲವು ರಾಷ್ಟ್ರಗಳಲ್ಲಿ ಏಕಕಾಲಕ್ಕೆ ಈ ಕಾರ್ಯಕ್ರಮವನ್ನು ನಡೆಸಿ, ಅರಣ್ಯ ನಾಶ, ವನ್ಯಜೀವಿಗಳ ಬೇಟೆ ತಡೆಗೆ ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಮತ್ತೊಂದೆಡೆ ಮಾ.22ರಂದು ವಿಶ್ವ ಜಲ ದಿನ ಆಚರಿಸಿ ನೀರು ಪೋಲಾಗದಂತೆ ಕಟ್ಟೆಚ್ಚರ ವಹಿಸುವಂತೆ ಅರಿವು ಮೂಡಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಬಳಕೆ ಪ್ರಮಾಣ ಹೆಚ್ಚಾಗುತ್ತಿದ್ದು, ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕೃಷಿ ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೆ ಮಿತವಾಗಿ ನೀರನ್ನು ಬಳಸುವಂತೆ ವಿಶ್ವ ಜಲ ದಿನ ಮೂಲಕ ಮನವರಿಕೆ ಮಾಡಿಕೊಡಲಾಗುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿ ನೀರಿನ ಮಹತ್ವ ಸಾರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯದಲ್ಲಿ ನಾಳೆ(ಮಾ.21) ಜಾಗೃತಿ ಮೂಡಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳ ಲಾಗಿದೆ. ಈ ಮೂರು ಕಾರ್ಯಕ್ರಮಗಳ ಮಹತ್ವದ ಮಾಹಿತಿಯುಳ್ಳ ಬಿತ್ತಿಪತ್ರ, ಬ್ಯಾನರ್ ಪ್ರದರ್ಶಿಸಲಾಗುತ್ತದೆ. ಮೃಗಾಲಯಕ್ಕೆ ಬರುವ ಪ್ರವಾಸಿಗರೂ ಕೇವಲ ಪ್ರಾಣಿ-ಪಕ್ಷಿಗಳನ್ನು ನೋಡಿ ಆನಂದಿಸದೇ ವನ್ಯಜೀವಿಗಳ ಸಂರಕ್ಷಣೆ, ಅರಣ್ಯ, ನೀರು, ವನ್ಯಜೀವಿಗಳ ಬೇಟೆ ತಡೆಗೆ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸುವಂತೆ ಮನವರಿಕೆ ಮಾಡಿಕೊಡುವ ಶಿಕ್ಷಣವನ್ನೂ ನೀಡಲಾಗುವುದು ಎಂದು ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ತಿಳಿಸಿದ್ದಾರೆ.

Translate »