ನಾಳೆಯಿಂದ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ  10 ದಿನಗಳ ಕಲಾವೈಭವ; ಸಿಲ್ಕ್ ಉತ್ಸವ
ಮೈಸೂರು

ನಾಳೆಯಿಂದ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ 10 ದಿನಗಳ ಕಲಾವೈಭವ; ಸಿಲ್ಕ್ ಉತ್ಸವ

March 21, 2019

ಮೈಸೂರು: ಯುಗಾದಿ ಹಬ್ಬದ ಪ್ರಯುಕ್ತ ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಿಂಗ್‍ರಸ್ತೆ ಯಲ್ಲಿರುವ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಮಾ.22ರಿಂದ 31 ರವರೆಗೆ `ಕಲಾ ವೈಭವ’ ಕರ ಕುಶಲ ಮತ್ತು ಕೈಮಗ್ಗ ವಸ್ತುಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಹಾಗೂ `ಸಿಲ್ಕ್ ಉತ್ಸವ’ ಏರ್ಪಡಿಸಲಾಗಿದೆ ಎಂದು ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಬಿ.ಆರ್.ಉಮಾಕಾಂತ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್ ಉತ್ಸವ ಆಯೋಜಿಸಿದೆ. ಇಲ್ಲಿ 100ಕ್ಕೂ ಹೆಚ್ಚು ಮಳಿಗೆಗಳಿದ್ದು, ಕೈಗಾರಿಕೆಗಳು, ಸಣ್ಣ ಕೈಗಾರಿಕೆ, ಸ್ವಸಹಾಯ ಗುಂಪು, ಖಾದಿ-ಗ್ರಾಮೋದ್ಯೋಗ, ಸ್ವಯಂ ಉದ್ಯೋಗಿಗಳು, ಕರಕುಶಲ ಕರ್ಮಿಗಳು, ಕೈಮಗ್ಗ ನೇಕಾರರ ಸಹಕಾರ ಸಂಘ ಇನ್ನಿತರೆ ಸಂಘ ಸಂಸ್ಥೆಗಳು ತಯಾರಿಸಿದ ಉತ್ತಮ ಗುಣಮಟ್ಟದ ಆಕರ್ಷಣೀಯ ಕರಕುಶಲ ವಸ್ತುಗಳು ಇಲ್ಲಿ ದೊರೆಯಲಿವೆ.

ಕೈಮಗ್ಗ ವಸ್ತ್ರ್ರಗಳು, ರೇಷ್ಮೆ, ಕಾಟನ್ ಸೀರೆ, ಹೊದಿಕೆ, ವಿವಿಧ ಲೋಹ, ಜರಿ ಕಸೂತಿ, ಸಿದ್ಧ ಉಡುಪು, ಶಿಲ್ಪ, ಕುಂಬಾರಿಕೆ, ಚರ್ಮ ಮತ್ತು ಮರಗಳಿಂದ ಮಾಡಿದ ಆಟಿಕೆ, ಬೊಂಬೆ, ಗೃಹ ಬಳಕೆ ವಸ್ತುಗಳು, ಉತ್ತರ ಕರ್ನಾಟಕದ ರುಚಿಕರ ತಿಂಡಿ ಪದಾರ್ಥಗಳು, ಕಸೂತಿ ಬ್ಯಾಗು, ಕೃತಕ ಆಭರಣ, ಆಯುರ್ವೇದ ಮತ್ತು ಗಿಡಮೂಲಿಕೆ ಔಷಧಿ, ಕಂಚಿನ ವಿಗ್ರಹ, ಕಸೂತಿ ಸೀರೆಗಳು, ಬುಡಕಟ್ಟು ಜನಾಂಗದ ಆಭರಣ, ಹೂಜಿಗಳು, ಹೂ ಕುಂಡ ಇನ್ನಿತರ ವಸ್ತುಗಳು ಕೈಗೆಟಕುವ ಬೆಲೆಯಲ್ಲಿ ದೊರೆಯಲಿವೆ ಎಂದರು.

ಕಲಾವೈಭವ, ಸಿಲ್ಕ್ ಉತ್ಸವಕ್ಕೆ ಮಾ.22ರಂದು ಸಂಜೆ 4 ಗಂಟೆಗೆ ಜಿಪಂ ಸಿಇಓ ಕೆ.ಜ್ಯೋತಿ ಚಾಲನೆ ನೀಡುವರು. ಜೆಎಸ್‍ಎಸ್ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಅಧ್ಯಕ್ಷತೆ ವಹಿಸುವರು ಎಂದರು. ಹತ್ತು ದಿನಗಳ ಗುಡಿ ಕೈಗಾರಿಕೆ, ಕರಕುಶಲ ಮತ್ತು ವಸ್ತ್ರಮೇಳಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಯೋಜನಾಧಿಕಾರಿ ಶಿವನಂಜಪ್ಪ, ಸಂಯೋಜನಾಧಿಕಾರಿ ರಾಕೇಶ್ ರೈ ಉಪಸ್ಥಿತರಿದ್ದರು.

Translate »