ಬಿಟ್ ಕಾಯಿನ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ  ಸಿದ್ದರಾಮಯ್ಯ, ಕುಮಾರಸ್ವಾಮಿ ಹಿಟ್ ಅಂಡ್ ರನ್ ಹೇಳಿಕೆ
ಮೈಸೂರು

ಬಿಟ್ ಕಾಯಿನ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಹಿಟ್ ಅಂಡ್ ರನ್ ಹೇಳಿಕೆ

November 19, 2021

ಮೈಸೂರು, ನ.18 (ಎಂಟಿವೈ)- ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದ ಹಿಟ್ ಅಂಡ್ ರನ್‍ನಂತೆ ಹೇಳಿಕೆ ನೀಡುತ್ತಿರುವ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಪ್ರಕರಣ ಸಾಬೀತು ಮಾಡುವ ದಾಖಲೆ, ಸಾಕ್ಷ್ಯಾಧಾರ ನೀಡುವಂತೆ ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಸವಾಲು ಹಾಕಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಯಿ ಚಪಲಕ್ಕೆ ಮಾತನಾಡಬಾರದು. ವಿರೋಧ ಪಕ್ಷಗಳ ನಾಯಕರಲ್ಲಿ ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ, ಸಾಕ್ಷ್ಯಾಧಾರವಿದ್ದರೆ ಅದನ್ನು ನನ್ನ ಕೈಗೆ ನೀಡಲಿ. ಆಗ ನಾನೇ ಸಮಗ್ರ ತನಿಖೆ ನಡೆಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತೇನೆ. ಅನಾವಶ್ಯಕವಾಗಿ ಈ ಪ್ರಕರಣದಲ್ಲಿ ಸರ್ಕಾರ, ಮುಖ್ಯ ಮಂತ್ರಿಗಳನ್ನು ಎಳೆದು ತರುವ ಕೆಲಸ ಮಾಡಬಾರದು. ಬಿಟ್ ಕಾಯಿನ್ ಎಂದರೇನು? ಎಂದು ತಿಳಿಯ ದವರೆಲ್ಲರೂ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಯಾವ ಸಾಕ್ಷ್ಯಧಾರಗಳಿಲ್ಲ. ಸಾಕ್ಷ್ಯ ನೀಡಿದರೆ ತನಿಖೆ ನಡೆಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು, 14 ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಹೆಚ್.ಡಿ.ಕುಮಾರ ಸ್ವಾಮಿಯೂ ಸಿಎಂ ಆಗಿ ಕೆಲಸ ಮಾಡಿರುವುದರಿಂದ ಬಿಟ್ ಕಾಯಿನ್ ಬಗ್ಗೆ ವಿವರಣೆ ನೀಡಬೇಕು ಎಂದು ಎ.ಹೆಚ್.ವಿಶ್ವನಾಥ್ ಆಗ್ರಹಿಸಿದರು.

ಈ ಪ್ರಕರಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಎಳೆದು ತರುವುದು ಕಾಂಗ್ರೆಸ್ ನಾಯಕರಿಗೆ ಶೋಭೆ ತರುವುದಿಲ್ಲ. ಸಿಎಂ ಬೊಮ್ಮಾಯಿ ಉತ್ತಮ ವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ನೇತೃತ್ವ ದಲ್ಲೇ ಮುಂದಿನ ಚುನಾವಣೆ ಎದುರಿಸಲು ನಿರ್ಧರಿಸ ಲಾಗಿದೆ. ಸಿಎಂ ಬದಲಾವಣೆ ಕೇವಲ ಊಹಾ ಪೋಹವಷ್ಟೇ ಎಂದು ಸ್ಪಷ್ಟಪಡಿಸಿದರು.

ಡ್ರಗ್ಸ್ ಹಾಗೂ ಹ್ಯಾಕ್ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಶ್ರೀಕಿ ಕಂಡರೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕ ರಿಗೂ ಭಯವಾಗಿದೆ. ನಾಯಕರು ಏನು ಮಾಡಿಲ್ಲ ದಿದ್ದರೆ ಭಯಪಡುವ ಅಗತ್ಯವೇನು?. ಎಂಟನೇ ತರಗತಿ ಓದಿರುವ ಶ್ರೀಕಿಯದ್ದು ಹೈಪರ್ ಬ್ರೈನ್ ಆಗಿದೆ. 2017ರಲ್ಲಿ ನಳಪಾಡ್ ಪ್ರಕರಣ ನಡೆದಾಗ ಶ್ರೀಕಿ ಸಂಪರ್ಕ ಇತ್ತು. ಅಂದು ಯಾರು ಚಕಾರ ಎತ್ತಲಿಲ್ಲ ಎಂದು ಪ್ರಶ್ನಿಸಿದರು.

ಮೂರು ಪಕ್ಷಗಳದ್ದೂ ಅದೇ ಕಥೆ: ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಬೇಕಾದವರು ಲಕ್ಷ ರೂ. ಠೇವಣಿ ಇಟ್ಟು, 15 ಕೋಟಿ ಬ್ಯಾಂಕ್ ಗ್ಯಾರಂಟಿ ತೋರಿಸ ಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೇಳಿದ್ದಾರೆ. ಇದು ಕೇವಲ ಕಾಂಗ್ರೆಸ್ ಮಾತ್ರವಲ್ಲ ಎಲ್ಲ ಮೂರು ಪಕ್ಷಗಳಲ್ಲೂ ಸ್ವಲ್ಪ ಹೆಚ್ಚು ಕಡಿಮೆ ಹೀಗೆ? ಇಂತಹದ್ದೇ ಪರಿಸ್ಥಿತಿ ಇದೆ. ರಾಜಕೀಯ ಪಕ್ಷದೊಳಗಿನ ಭ್ರಷ್ಟಾಚಾರದ ಬಗ್ಗೆ ದನಿ ಎತ್ತುವವರು ಯಾರು ಎಂದು ಪ್ರಶ್ನಿಸಿದರು.
ಮಳೆ ಚಕಾರವಿಲ್ಲ: ನಾಡಿನಲ್ಲಿ ಮಳೆ ಬಂದು ಜನರ ಬದುಕು ಮೂರಾಬಟ್ಟೆಯಾಗಿದೆ. ಕೊರೊನಾ ದಿಂದ ಜನರು ಸಾವನ್ನಪ್ಪಿದ್ದರೆ, ಈಗ ಮಳೆಯಿಂದ ಜನರು ಸಾಯುತ್ತಿದ್ದಾರೆ. ಹೀಗಿದ್ದರೂ ಯಾವುದೇ ನಾಯಕರು ಮಾತನಾಡುತ್ತಿಲ್ಲ ಎಂದರು.

ಸಿದ್ದರಾಮಯ್ಯರಿಂದ ಅಹಿಂದ ದೂರ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಹಿಂದ ಮಾಡಿ ದರು. ಆದರೆ ಈಗ ಸಿದ್ದರಾಮಯ್ಯ ಅವರಿಂದ ದೂರ ಸರಿಯುತ್ತಿದ್ದಾರೆ. ದಲಿತರು ಮುಖ್ಯಮಂತ್ರಿ ಯಾಗಬೇಕು ಅನ್ನುವ ಅವರು ನಾಳೆ ನಾನೇ ದಲಿತ, ನಾನೇ ದಲಿತ ಸಿಎಂ ಎನ್ನುತ್ತಾರೆ. ಹಾಗಾದರೆ ಹಿರಿಯ ರಾದ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್ ಏನು ಮಾಡಬೇಕು ಎಂದು ಪ್ರಶ್ನಿಸಿದರು.

ದಲಿತರು ಧೈರ್ಯ ಮಾಡಬೇಕು. ಅಲ್ಪ ಸಂಖ್ಯಾ ತರು ರಾಜಕೀಯವಾಗಿ ನಿರಾಶ್ರಿತರಾಗುತ್ತಿದ್ದಾರೆ. ಅನಾಥರಾಗಿದ್ದಾರೆ. ರಾಜಕೀಯವಾಗಿ ಯಾವುದೇ ಸ್ಥಾನಮಾನಗಳು ಸಿಗುತ್ತಿಲ್ಲ. ಸಿದ್ದರಾಮಯ್ಯ ಅವರ ತಪ್ಪಿನಿಂದ ದೂರವಾಗುತ್ತಿದ್ದಾರೋ ಅಥವಾ ಅವರ ನಡವಳಿಕೆ ಕಾರಣವೇ ಗೊತ್ತಿಲ್ಲ ಎಂದು ನುಡಿದರು.

Translate »