ಮೈಸೂರಲ್ಲಿ ವಾಣಿಜ್ಯ ಮಳಿಗೆ, ಹಳೆ ಮನೆ ಕುಸಿತ:  ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಿಲ್ಲ
ಮೈಸೂರು

ಮೈಸೂರಲ್ಲಿ ವಾಣಿಜ್ಯ ಮಳಿಗೆ, ಹಳೆ ಮನೆ ಕುಸಿತ: ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಿಲ್ಲ

November 18, 2021

ಮೈಸೂರು, ನ.17(ಎಸ್‍ಪಿಎನ್)- ಮೈಸೂರಿನಲ್ಲಿ ಬುಧವಾರ ಸುರಿದ ಧಾರಾಕಾರ ಮಳೆಗೆ ಪಾಳು ಬಿದ್ದಿದ್ದ ವಾಣಿಜ್ಯ ಮಳಿಗೆ ಹಾಗೂ ಮನೆಯೊಂದು ಕುಸಿದು ಬಿದ್ದಿದ್ದು, ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.

ನಗರದ ಅಶೋಕ ರಸ್ತೆಯಲ್ಲಿರುವ ಸೆಂಟ್ ಫಿಲೋ ಮಿನಾ ಚರ್ಚ್ ವ್ಯಾಪ್ತಿಗೆ ಬರುವ (ಸಿಸಿಬಿ ಕಚೇರಿ ಎದುರು) ಪಾಳುಬಿದ್ದ ವಾಣಿಜ್ಯ ಮಳಿಗೆ ಹಾಗೂ ಅಗ್ರಹಾರ ಖಿಲ್ಲೆ ಮೊಹಲ್ಲಾದ ಉತ್ತರಾದಿ ಮಠದ ರಸ್ತೆಯಲ್ಲಿ ಮನೆಯೊಂದು ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಅಗ್ರಹಾರ ಖಲ್ಲೆ ಮೊಹಲ್ಲಾದ ಉತ್ತರಾದಿ ಮಠದ ರಸ್ತೆಯಲ್ಲಿ ಕುಸಿದು ಬಿದ್ದ ಮನೆಯೊಳಗೆ ಸಿಲುಕಿದ್ದ 72 ವರ್ಷದ ವಯೋವೃದ್ಧ ರಾಮನಾಥ್(72) ಅವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿ, ಆಸ್ಪತ್ರೆಗೆ ದಾಖ ಲಿಸಿದ್ದಾರೆ. ರಾಮನಾಥ್ ವಾಸವಿದ್ದ ಮಳೆ ಹಳೆಯದಾಗಿ ದ್ದರಿಂದ ನಿರಂತರ ಧಾರಾಕಾರ ಮಳೆಗೆ ಗೋಡೆ ವಸ್ತಿ ಹಿಡಿದಿತ್ತು. ಬುಧವಾರ ರಾತ್ರಿ ಸುರಿದ ಮಳೆಗೆ ಕುಸಿದು ಬಿದ್ದಿದೆ.

ಇದನ್ನು ಗಮನಿಸಿದ ಅಕ್ಕ-ಪಕ್ಕದ ನಿವಾಸಿಗಳು ಅಗ್ನಿಶಾಮಕ ದಳದ ಕಂಟ್ರೋಲ್ ರೂಂ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ತಕ್ಷಣ ಸರಸ್ವತಿಪುರಂ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕುಸಿದು ಬಿದ್ದ ಗೋಡೆÀ ತ್ಯಾಜ್ಯ ನಡುವೆ ಸಿಲುಕಿದ್ದ ರಾಮನಾಥ್ ಅವರನ್ನು ರಕ್ಷಿಸಿದ್ದಾರೆ. ನಂತರ ಗಾಯಗೊಂಡಿದ್ದ ರಾಮನಾಥ್ ಅವರನ್ನು ಸಾರ್ವಜನಿಕರ ಸಹ ಕಾರದಿಂದ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ `ಮೈಸೂರು ಮಿತ್ರ’ನಿಗೆ ತಿಳಿಸಿದರು. ಹಾಗೆಯೇ ಅಶೋಕ ರಸ್ತೆ ಯಲ್ಲಿ ಹಲವು ವರ್ಷಗಳಿಂದ ಪಾಳು ಬಿದ್ದಿದ್ದ ವಾಣಿಜ್ಯ ಮಳಿಗೆಯೂ ಕುಸಿದು ಬಿದ್ದಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಮಂಡಿ ಠಾಣೆ ಪೊಲೀ ಸರು ತಿಳಿಸಿದ್ದಾರೆ.

ತಡರಾತ್ರಿವರೆಗೂ ಸುರಿದ ಮಳೆ: ಮೈಸೂರಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಬುಧವಾರ ತಡರಾತ್ರಿವರೆಗೂ ಸುರಿಯಿತು. ಸಂಜೆ 6.30ರ ಸುಮಾ ರಿಗೆ ಆರಂಭ ಮಳೆ, ನಗರದೆಲ್ಲೆಡೆ ಸುರಿದ ಪರಿಣಾಮ ರಸ್ತೆ, ಚರಂಡಿ ಇಕ್ಕೆಲಗಳಲ್ಲಿ ನೀರು ತುಂಬಿ ಹರಿಯಿತು. ವಾಹನ ಸಂಚಾರ, ಪಾದಾಚಾರಿಗಳ ತಿರುಗಾಟಕ್ಕೂ ತೊಂದರೆ ಉಂಟಾಗಿತ್ತು. ಸಯ್ಯಾಜಿರಾವ್ ರಸ್ತೆಯಲ್ಲಿನ ಕೆ.ಆರ್.ವೃತ್ತ, ಆಯುರ್ವೇದ ಕಾಲೇಜು ವೃತ್ತ ಸೇರಿದಂತೆ ಪ್ರಮುಖ ವೃತ್ತಗಳು ಜಲಾವೃತವಾಗಿದ್ದವು.

ಸೂರ್ಯ ಬಡಾವಣೆ ಜಲಾವೃತ: ಶ್ರೀರಾಂಪುರ 2ನೇ ಹಂತದ ಸೂರ್ಯ ಬಡಾವಣೆ, ರಾಘವೇಂದ್ರನಗರ, ಚಿಕ್ಕಹರದನಹಳ್ಳಿ, ದೇವಯ್ಯನಹುಂಡಿ, ಅಯೋಧ್ಯಾ ನಗರದಲ್ಲಿ ಹಾದು ಹೋಗುವ ರಾಜಕಾಲುವೆ ಅಲ್ಲಲ್ಲಿ ಕಿರಿದಾಗಿದ್ದು, ಮಳೆ ನೀರು ಸರಾಗವಾಗಿ ಹೋಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪ್ರತಿ ಬಾರಿ ಮಳೆಯಾ ದಾಗಲೂ ಮಳೆ ನೀರು ಬಡಾವಣೆ ಮನೆಗಳಿಗೆ ನುಗ್ಗು ತ್ತಿದೆ. ಈ ಸಮಸ್ಯೆ ಬಗ್ಗೆ ಎಲ್ಲಾ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ನಿವಾಸಿ ಉಮೇಶ್ ಬೇಸರ ವ್ಯಕ್ತಪಡಿಸಿದರು.

ಗುಂಡಿಮಯ: ಶ್ರೀರಾಂಪುರ 2ನೇ ಹಂತ, ಅರ ವಿಂದನಗರ, ಜಯನಗರ, ವಿವೇಕಾನಂದನಗರ, ರಾಮಕೃಷ್ಣನಗರ, ಕುವೆಂಪುನಗರ ಶಾರದಾದೇವಿ ನಗರ, ವಿದ್ಯಾರಣ್ಯಪುರಂ, ಸಿದ್ಧಾರ್ಥನಗರ, ಆಲನಹಳ್ಳಿ ಬಡಾವಣೆ, ಚಾಮರಾಜಪುರಂ, ಅಗ್ರಹಾರ, ಜನತಾ ನಗರ ಸೇರಿದಂತೆ ನಗರ ಪ್ರಮುಖ ಬಡಾವಣೆ ರಸ್ತೆ ಗಳು ಗುಂಡಿಮಯವಾಗಿದ್ದು, ವಾಹನ ಸವಾರರು, ಪಾದಚಾರಿಗಳ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ.
ಜೋಡಿ ತೆಂಗಿನ ಮರದ ರಸ್ತೆ ಅದ್ವಾನ: ಹೇವೈ ವೃತ್ತದಿಂದ ಜೋಡಿ ತೆಂಗಿನ ಮರ ಮಾರ್ಗವಾಗಿ ಬಿ.ಎಂ.ಶ್ರೀ ನಗರದ ಮೂಲಕ ರಿಂಗ್ ರೋಡ್ ತಲು ಪುವ ರಸ್ತೆ ಮಳೆ ನೀರು ರಸ್ತೆಯಲ್ಲಿ ಹರಿದಿದ್ದರಿಂದ ಸಂಪೂರ್ಣ ಗುಂಡಿಮಯವಾಗಿದೆ. ಈ ರಸ್ತೆಯಲ್ಲಿ ದ್ವಿ ಚಕ್ರ ವಾಹನಗಳು, ಪಾದಚಾರಿಗಳು, ಆಟೋ ಚಾಲನೆಗೆ ತೀವ್ರ ತೊಂದರೆಯಾಗುತ್ತಿದೆ.

ತೆರೆದ ಮ್ಯಾನ್‍ಹೋಲ್: ಮೈಸೂರು- ಮಾನಂದ ವಾಡಿ ರಸ್ತೆಯ ಎನ್‍ಐಇ ಕಾಲೇಜಿನ ಬಾಲಕರ ವಸತಿ ನಿಲಯದ ಸಮೀಪ ಮ್ಯಾನ್‍ಹೋಲ್ ಉಕ್ಕಿಹರಿದು ಅನಾಹುತಕ್ಕೆ ಬಾಯ್ತೆರೆದು ಕೊಂಡಿತ್ತು. ಇದರಿಂದ ಈ ಮಾರ್ಗದ ಪಾದಚಾರಿಗಳಿಗೆ ತೊಂದರೆಯಾಗು ತ್ತಿತ್ತು. ವಿಷಯ ತಿಳಿದ ಪಾಲಿಕೆ ಸದಸ್ಯ ಮ.ವಿ. ರಾಮಪ್ರಸಾದ್, ಸ್ಥಳಕ್ಕೆ ಧಾವಿಸಿ ಮ್ಯಾನ್‍ಹೋಲ್ ಮುಚ್ಚಳ ಮುಚ್ಚಿ ಸಾಮಾಜಿಕ ಕಳಕಳಿ ಮೆರೆದಿರುವು ದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Translate »