ಚೀನಾ ಉತ್ಪನ್ನ ಬಹಿಷ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಸಹಮತ
ಮೈಸೂರು

ಚೀನಾ ಉತ್ಪನ್ನ ಬಹಿಷ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಸಹಮತ

June 20, 2020

ಬೆಂಗಳೂರು, ಜೂ. 19(ಕೆಎಂಶಿ)-ಚೀನಾ ಉತ್ಪನ್ನ ಬಹಿಷ್ಕರಿಸಿ ಎಂಬ ಕೂಗಿಗೆ ನಮ್ಮ ಬೆಂಬಲವಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.

ದೇಶದ ಮಾರುಕಟ್ಟೆ ಆಕ್ರಮಿಸಿಕೊಂಡಿರುವ ಚೀನಾ ಉತ್ಪನ್ನಗಳಿಗೆ ನಮ್ಮ ಉತ್ಪನ್ನಗಳ ಮೂಲಕ ಸಡ್ಡು ಹೊಡೆಯ ಬೇಕೆಂಬ ಪರಿಕಲ್ಪನೆಯಡಿ 2018ರಲ್ಲಿ `Compete With China’ ಯೋಜನೆಯನ್ನು ನಾನು ಮುಖ್ಯಮಂತ್ರಿ ಯಾಗಿ ದ್ದಾಗಲೇ ರೂಪಿಸಿದ್ದೆ. `Compete With China’ ಯೋಜನೆ ಜಾರಿಗೆ ತರಲು ನನ್ನ ನೇತೃತ್ವದ ಮೈತ್ರಿ ಸರ್ಕಾರದ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿತ್ತು ಎಂದು ಟ್ವೀಟ್ ಮೂಲಕ ಮನವರಿಕೆ ಮಾಡಿಕೊಟ್ಟಿದ್ದಾರೆ.

ಇದಕ್ಕಾಗಿ ಕಲಬುರಗಿ, ಚಿತ್ರದುರ್ಗ, ಹಾಸನ, ಕೊಪ್ಪಳ, ಮೈಸೂರು, ಬಳ್ಳಾರಿ, ಚಿಕ್ಕಬಳ್ಳಾ ಪುರ, ತುಮಕೂರು, ಬೀದರ್ ಜಿಲ್ಲೆಗಳಲ್ಲಿ 9 ಕ್ಲಸ್ಟರ್‍ಗಳನ್ನು ಸ್ಥಾಪಿಸಲಾಗಿತ್ತು. ಸ್ಥಳೀಯ ರಿಗೆ ಉದ್ಯೋಗ ಒದಗಿಸುವುದು, ಚೀನಾಕ್ಕೆ ಸಿಕ್ಕಿರುವ ಮಾರುಕಟ್ಟೆಯನ್ನು ಕಸಿದು ನಮ್ಮವರಿಗೆ ಕೊಡುವುದು, ಆ ಮೂಲಕ ಚೀನಾ ಉತ್ಪನ್ನಗಳನ್ನು ಯಶಸ್ವಿಯಾಗಿ ಹೊರ ಹಾಕುವುದು ನನ್ನ ಉದ್ದೇಶವಾಗಿತ್ತು. ಆದರೆ, ಮೈತ್ರಿ ಸರ್ಕಾರದ ಈ ಯೋಜನೆಯನ್ನು ಇಂದಿನ ಸರ್ಕಾರ ಏನು ಮಾಡಿದೆ? ಮುಂದುವರೆಸಿಕೊಂಡು ಹೋಗಿದೆಯೋ ಇಲ್ಲವೋ ತಿಳಿಯದು. ಗಡಿಯಲ್ಲಿ ಅಮಾಯಕರ ಬಲಿದಾನದ ನಂತರ ಕೆಲವರಿಗೆ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಬಗ್ಗೆ ಜ್ಞಾನೋದಯವಾಗಿದೆ. ಆದರೆ, ನನ್ನ ಅಧಿಕಾ ರಾವಧಿಯಲ್ಲಿ ಈ ಬಗ್ಗೆ ಗಂಭೀರವಾಗಿ ಯೋಚಿಸಲಾಗಿತ್ತು. ಚೀನಾ ವಸ್ತುಗಳನ್ನು ಬಹಿಷ್ಕರಿಸುವುದು ಘೋಷವಾಕ್ಯದಷ್ಟು ಸುಲಭವಲ್ಲ. ಅದಕ್ಕೆ ರಚನಾತ್ಮಕ ಯೋಜನೆಗಳು ಬೇಕು. ಮೈತ್ರಿ ಸರ್ಕಾರದ ಯೋಜನೆಗಳು ಅದಕ್ಕೆ ಮಾದರಿಯಾಗಿವೆ ಎಂದರು.

Translate »