ಬೆಂಗಳೂರು: ಕುಮಾರಸ್ವಾಮಿ ಈಗ ತಾಳ್ಮೆ ಕಳೆದುಕೊಂಡಿದ್ದಾರೆ. ಹಾಗಾಗಿಯೇ ಏನೇನೋ ಮಾತನಾಡುತ್ತಿದ್ದಾರೆ ಎಂದು ಜೆಡಿಎಸ್ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಸ್ವಪಕ್ಷದ ನಾಯಕನ ವಿರುದ್ಧವೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸರಣಿ ಹೇಳಿಕೆಗಳ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಮೊದಲು ಕುಮಾರಸ್ವಾಮಿ ಅವರಿಗೆ ತುಂಬಾ ತಾಳ್ಮೆಯಿತ್ತು. ಅವರಷ್ಟು ಸಮಾಧಾನದ ವ್ಯಕ್ತಿ ಬೇರೆಯವರು ಇಲ್ಲ ಎಂಬಂತ್ತಿದ್ದರು. ಆದರೆ, ಇತ್ತೀಚೆಗೆ ಅದನ್ನು ಕಳೆದುಕೊಂಡಿದ್ದಾರೆ. ಪ್ರತಿಯೊಂದಕ್ಕೂ ಹೇಳಿಕೆ ಕೊಡುತ್ತಾರೆ. ಅವರು ಮೊದಲಿನಂತೆ ಇಲ್ಲ ಎಂದರು. ಅವರನ್ನು ಭೇಟಿ ಮಾಡಿ ನಾನು ಸಲಹೆ ಗಳನ್ನು ಕೊಡುತ್ತೇನೆ. ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬಾರದು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಸಭಾಪತಿಯನ್ನಾಗಿ ಮಾಡುವುದಾಗಿ ಹೇಳಿದ್ದಾರೆ. ನನಗೆ ಇದೊಂದು ಬಾರಿ ಅವಕಾಶ ಕೊಡಿಸುವುದಾಗಿ ಹೇಳಿದ್ದಾರೆ. ನೋಡೋಣ ಏನಾಗಲಿದೆಯೋ ಎಂದು ಬಸವರಾಜ ಹೊರಟ್ಟಿ ಹೇಳಿದರು.
