ಬಡ್ತಿ ಮೀಸಲಾತಿ ವಿಚಾರ: ಜೇಷ್ಠತಾ ಕಾಯ್ದೆ ಅನುಷ್ಠಾನಕ್ಕೆ ಮಾಜಿ ಮೇಯರ್ ಪುರುಷೋತ್ತಮ್ ಆಗ್ರಹ
ಮೈಸೂರು

ಬಡ್ತಿ ಮೀಸಲಾತಿ ವಿಚಾರ: ಜೇಷ್ಠತಾ ಕಾಯ್ದೆ ಅನುಷ್ಠಾನಕ್ಕೆ ಮಾಜಿ ಮೇಯರ್ ಪುರುಷೋತ್ತಮ್ ಆಗ್ರಹ

June 29, 2018

ಮೈಸೂರು:  ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ಸಿವಿಲ್ ಸೇವೆಗಳಲ್ಲಿರುವ ನೌಕರರಿಗೆ ತತ್ಪರಿಣಾಮದ ಜೇಷ್ಠತೆಯ ವಿಸ್ತರಿಸುವ 2017ರ ಕಾಯ್ದೆಯನ್ನು ವಾರದೊಳಗೆ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವಂತೆ ಮಾಜಿ ಮೇಯರ್ ಪುರುಷೋತ್ತಮ್ ಒತ್ತಾಯಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಕೆ.ಪವಿತ್ರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ತಪ್ಪಾಗಿ ಅರ್ಥೈಸಿಕೊಂಡು ಸುಮಾರು 50 ಸಾವಿರ ಪರಿಶಿಷ್ಟ ಜಾತಿ ಮತ್ತು ವರ್ಗದವರ ಹಿಂಬಡ್ತಿಗೆ ಕಾರಣರಾದ ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸರ್ಕಾರದ ತಿದ್ದುಪಡಿ ವಿಧೇಯಕಕ್ಕೆ ರಾಷ್ಟ್ರಪತಿಗಳ ಅಂಕಿತ ಬಿದ್ದಿದ್ದರೂ ಲೋಕೋಪಯೋಗಿ ಇಲಾಖೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಇಂಜಿನಿಯರ್‍ಗಳ ಹಿಂಬಡ್ತಿಗೆ ಸಚಿವ ಹೆಚ್.ಡಿ.ರೇವಣ್ಣ ಮುಂದಾಗಿದ್ದಾರೆಂದು ಖಂಡಿಸಿದರು. ಕಾಯ್ದೆ ಅನುಷ್ಠಾನದಿಂದ ಹಿಂಬಡ್ತಿ ಹೊಂದಿರುವ ಎಲ್ಲಾ ಪರಿಶಿಷ್ಟ ಜಾತಿ, ವರ್ಗಗಳ ನೌಕರರ ಹಿಂಬಡ್ತಿ ಆದೇಶ ರದ್ದುಪಡಿಸಿ, ಯಥಾಸ್ಥಿತಿ ಮುಂದುವರೆಸಬೇಕು. ಹಿಂಬಡ್ತಿ ಹೊಂದಿದ ನೌಕರರಿಗೆ ನಿಗದಿಯಾದ ವೇತನ ರದ್ದುಗೊಳಿಸಿ, ಜೇಷ್ಠತಾ ಪಟ್ಟಿ ತಯಾರಿಕೆಯಲ್ಲಿ ಲೋಪವಾಗದಂತೆ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಒತ್ತಾಯಿಸಿದರು. ಇದೆಲ್ಲದರ ಬಗ್ಗೆ ಸರ್ಕಾರ ಗಮನಿಸದಿದ್ದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ನಾಯಕ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪನಾಯಕ, ಅಹಿಂದ ಮುಖಂಡ ಸೋಮಯ್ಯ ಮೂರ್ತಿ, ಎಪಿಎಂಸಿ ಸದಸ್ಯ ಜವರಪ್ಪ ಉಪಸ್ಥಿತರಿದ್ದರು.

Translate »