ಪದವಿ ಪಠ್ಯದಲ್ಲಿ ಕನ್ನಡ ಭಾಷೆ ನಿರ್ಲಕ್ಷ್ಯ ಖಂಡಿಸಿ ಜು.2ಕ್ಕೆ ಕನ್ನಡ ಅಧ್ಯಾಪಕರ ಪ್ರತಿಭಟನೆ
ಮೈಸೂರು

ಪದವಿ ಪಠ್ಯದಲ್ಲಿ ಕನ್ನಡ ಭಾಷೆ ನಿರ್ಲಕ್ಷ್ಯ ಖಂಡಿಸಿ ಜು.2ಕ್ಕೆ ಕನ್ನಡ ಅಧ್ಯಾಪಕರ ಪ್ರತಿಭಟನೆ

June 29, 2018

ಮೈಸೂರು: ಆಯ್ಕೆ ಆಧಾರಿತ ಗುಣಾಂಕ ಪದ್ಧತಿ (ಸಿಬಿಎಸ್‍ಸಿ) ಪದವಿ ಪಠ್ಯದಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದ ಎದುರು ಪದವಿ ಕನ್ನಡ ಅಧ್ಯಾಪಕರ ಸಂಘ ಜು.2ರಂದು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಸಂಘದ ಸಂಚಾಲಕ ಡಾ.ಮ.ರಾಮಕೃಷ್ಣ ಇಂದಿಲ್ಲಿ ತಿಳಿಸಿದರು.

ಯುಜಿಸಿ ಕೊಟ್ಟಿರುವ ಪದವಿ ಪಠ್ಯದಲ್ಲಿ ತಮಿಳು, ತೆಲುಗು ಇನ್ನಿತರ ಭಾರತೀಯ ಭಾಷೆಗಳಿಗೆ ನೀಡಿರುವ ಸ್ಥಾನಮಾನ ಕನ್ನಡಕ್ಕೆ ನೀಡಿಲ್ಲ. ಸರ್ಕಾರ ಹಾಗೂ ವಿಶ್ವವಿದ್ಯಾನಿಲಯದ ನಿರ್ಲಕ್ಷ್ಯ ಧೋರಣೆಯೇ ಇದಕ್ಕೆ ಕಾರಣ ಎಂದು ಅವರು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಇದು ಕನ್ನಡ ಭಾಷೆ ಕುಂಠಿತಕ್ಕೆ ಕಾರಣವಾಗಲಿದ್ದು, ಕನ್ನಡವನ್ನೇ ಆಯ್ಕೆ ಮಾಡಿಕೊಳ್ಳದಿದ್ದಲ್ಲಿ ವಿದ್ಯಾರ್ಥಿಗಳ ಕೊರತೆ ಎದುರಾಗಲಿದೆ. ಈಗಾಗಲೇ ಆದ್ಯತಾ ವಿಷಯವಾಗಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ ಹಾಗೂ ಪ್ರಾಧ್ಯಾಪಕರಿಗೆ ನಿರುದ್ಯೋಗ ಸಮಸ್ಯೆ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಂಕ ವಿನ್ಯಾಸದಲ್ಲಿಯೂ ಇರುವ ಹಲವು ಗೊಂದಲಗಳನ್ನೂ ಯುಜಿಸಿ ನಿವಾರಿಸಿಲ್ಲ. ಕನ್ನಡಕ್ಕೆ ನೀಡುತ್ತಿದ್ದ ಬೋಧನಾ ಅವಧಿಯನ್ನು ಕಡಿತಗೊಳಿಸಿದೆ. ಕನ್ನಡವನ್ನು ಕೇವಲ ಭಾಷೆಯಾಗಿ ಕಲಿಸುವ ಬದಲು ಅದು ಬದುಕಿನ ಮೌಲ್ಯವನ್ನು ಅರ್ಥೈಸುವ ಮನದಟ್ಟು ಮಾಡಿಕೊಡುವ ವ್ಯಕ್ತಿತ್ವ ಕಟ್ಟಿಕೊಡುವ ಮೌಲ್ಯಿಕ ಪ್ರಕ್ರಿಯೆಯಾಗಬೇಕು. ಇದಕ್ಕಾಗಿ ಬೋಧನಾ ಅವಧಿಯಲ್ಲಿ 4 ಗಂಟೆಗಳಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಜು.2ರ ಪ್ರತಿಭಟನೆಯಲ್ಲಿ ಕನ್ನಡ ಶಿಕ್ಷಕರು, ಪ್ರಾಧ್ಯಾಪಕರು ಕಡ್ಡಾಯವಾಗಿ ಪಾಲ್ಗೊಳ್ಳುವ ಮೂಲಕ ಮಾತೃಭಾಷೆಗೆ ಜೀವ ತುಂಬಬೇಕಾಗಿದೆ ಎಂದು ಆಶಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಡಾ.ಹೆಚ್.ಆರ್.ರಮೇಶ್, ಡಾ.ನಂದೀಶ್ ಹಂಚೆ, ಪ್ರೊ.ಜಿ.ಬಿ.ವೀರಪ್ಪ, ಕಸಾಪ ಮೈಸೂರು ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಉಪಸ್ಥಿತರಿದ್ದರು.

Translate »