ಮೈಸೂರು : 2015ರ ನೇಮಕಾತಿಗೆ ಸಂಬಂಧಿಸಿದಂತೆ ಸಾಮಾಜಿಕ ನ್ಯಾಯದ ವಿರುದ್ಧವಾಗಿ ಆದೇಶವೊಂದನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮುಖ್ಯ ಕಾರ್ಯ ದರ್ಶಿ ಹೊರಡಿಸಿದ್ದು, ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಾ.ಹೆಚ್.ಸಿ.ಮಹದೇವಪ್ಪ ತಮ್ಮದೇ ಮೈತ್ರಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1998, 1999 ಮತ್ತು 2004ನೇ ಕೆಪಿಎಸ್‍ಸಿ (ಕರ್ನಾಟಕ ಲೋಕಸೇವಾ ಆಯೋಗ) ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್, ಆಯೋಗವು ಪಾಲನೆ ಮಾಡಬೇಕಾದ ಮಾರ್ಗ ಸೂಚಿಗಳನ್ನು ನೀಡಿದೆ. ಇದನ್ನು ಸುಪ್ರೀಂಕೋರ್ಟ್ ಕೂಡ ದೃಢಪಡಿಸಿದೆ. ಈ ಮೂರು ವರ್ಷಗಳಿಗೆ ಅನ್ವಯಿಸಬೇಕಿರುವ ಕೋರ್ಟ್ ಮಾರ್ಗಸೂಚಿ ಗಳನ್ನು ಇದೀಗ 2015 ನೇಮಕಾತಿಗೂ ಪಾಲಿಸಲು ಸರ್ಕಾರದ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ. ಆ ಮೂಲಕ ಎಸ್‍ಸಿ-ಎಸ್‍ಟಿ ಹಾಗೂ ಹಿಂದುಳಿದ ವರ್ಗಗಳ ಹಕ್ಕನ್ನು ಕಸಿಯಲಾಗುತ್ತಿದೆ ಎಂದು ಆರೋಪಿಸಿದರು.
ಸಚಿವ ಸಂಪುಟದ ಗಮನಕ್ಕೂ ತರದೇ ಏಕ ಮುಖವಾಗಿ ನ.3ರಂದು ಈ ಆದೇಶ ಹೊರಡಿಸ ಲಾಗಿದೆ. ಈ ಆದೇಶದ ಪ್ರಕಾರ ಎಸ್‍ಸಿ-ಎಸ್‍ಟಿ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಮೆರಿಟ್ ಗಳಿಸಿದ್ದರೂ ಅವರನ್ನು ಸಾಮಾನ್ಯ ವರ್ಗದಲ್ಲಿ ಪರಿಗಣಿಸುವಂತಿಲ್ಲ. ಬದಲಾಗಿ ಆಯಾಯ ಮೀಸಲಾತಿ ವರ್ಗದಲ್ಲೇ ಪರಿಗಣಿಸಬೇಕು ಎಂಬ ಆದೇಶ ಇದಾಗಿದೆ. ಮೆರಿಟ್ ಇದ್ದರೂ ತಮ್ಮ ವರ್ಗದ ಮೀಸಲಾತಿ ವ್ಯಾಪ್ತಿಯಲ್ಲಿ ಪರಿಗಣಿಸಿದರೆ ಎಸ್‍ಸಿ-ಎಸ್‍ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಅನ್ಯಾಯ ವಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಸ್‍ಸಿ, ಎಸ್‍ಟಿ, ಹಿಂದುಳಿದ ವರ್ಗದ ಅಭ್ಯರ್ಥಿಗಳ ಮೆರಿಟ್ ನಿರಾಕರಿಸಿ ಅವರ ಹಕ್ಕು ಕಸಿಯುವ ನ.3ರ ಆದೇಶವನ್ನು ಸರ್ಕಾರ ಹಿಂಪಡೆಯಬೇಕು. ಈ ಸಂಬಂಧ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿಶ್ವವಿದ್ಯಾನಿಲಯಗಳು, ಶಾಲಾ-ಕಾಲೇಜುಗಳಲ್ಲಿ ಖಾಲಿ ಉಳಿದಿರುವ ಬ್ಯಾಕ್‍ಲಾಗ್ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಬಡ್ತಿ ಮೀಸಲಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಸಿ-ಎಸ್‍ಟಿ ನೌಕರರು ಹುದ್ದೆಯ ನಿಯೋಜನೆ ಇಲ್ಲದೇ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ಈ ಸಂಬಂಧ ಸರ್ಕಾರ ತನ್ನೆಲ್ಲಾ ಕಾನೂನಿನ ಅಸ್ತ್ರಗಳನ್ನು ಸಮರ್ಪಕವಾಗಿ ಬಳಸಿ ಕೊಂಡು ಶೋಷಿತ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಟಿಪ್ಪು ರಾಷ್ಟ್ರೀಯ ವಾದಿ: ಟಿಪ್ಪು ಜಯಂತಿ ಕಾರ್ಯ ಕ್ರಮದಿಂದ ದೂರ ಉಳಿದ ಸಿಎಂ ಹಾಗೂ ಡಿಸಿಎಂ ಅವರ ನಡೆ ಬಗ್ಗೆ ಪ್ರತಿಕ್ರಿಯಿಸಿದ ಡಾ.ಹೆಚ್.ಸಿ. ಮಹದೇವಪ್ಪ, ಬಿಜೆಪಿ ಸೇರಿದಂತೆ ಯಾರೇ ಟಿಪ್ಪು ವಿರುದ್ಧ ಮಾತನಾಡುವುದು ದೇಶದ ಚರಿತ್ರೆಯ ಕಪ್ಪು ಚುಕ್ಕೆ ಇದ್ದಂತೆ. ಕಾರಣ ಟಿಪ್ಪು ಒಬ್ಬ ರಾಷ್ಟ್ರೀಯ ವಾದಿ. ಸಿಎಂ ಹಾಗೂ ಡಿಸಿಎಂ ಗೈರಾಗಿರುವ ಬಗ್ಗೆ ಅವರೇ ಕಾರಣಗಳನ್ನು ನೀಡಿದ್ದಾರೆ. ಇನ್ನು ಹೆಚ್ಚಿನ ವಿವರಗಳಿಗೆ ಅವರೇ ಉತ್ತರಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‍ನ ಆಶಯ ಜೆಡಿಎಸ್‍ಗೆ ಅರ್ಥವಾಗಿದೆ. ಜೆಡಿಎಸ್‍ನಿಂದ ಹಿಂದಿನ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳು ಪ್ರತ್ಯೇಕಗೊಳ್ಳುತ್ತಿಲ್ಲ. ಸಮನ್ವಯತೆಯಿಂದ ರಾಜ್ಯದ ಹಿತಕ್ಕಾಗಿ ಮೈತ್ರಿ ಸರ್ಕಾರ ಸುಸೂತ್ರವಾಗಿ ನಡೆಯಲಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಯಾವ ಕ್ಷೇತ್ರದ ಆಕಾಂಕ್ಷಿಯಲ್ಲ. ಕಳೆದ ವಿಧಾನಸಭಾ ಚುನಾ ವಣೆಯಲ್ಲಿ ನನ್ನ ಸೋಲಿಗೆ ಜಾತಿ ರಾಜಕಾರಣ ಕಾರಣವಾಯಿತು ಎಂದು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಸಿದ್ದು ನನ್ನದು 35 ವರ್ಷದ ಸ್ನೇಹ: ಮಾಜಿ ಸಿಎಂ ಸಿದ್ದರಾಮಯ್ಯರೊಂದಿಗೆ ಕಾಣಿಸಿಕೊಳ್ಳುತ್ತಿಲ್ಲವಲ್ಲ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೆನ್ನೆ ಮೊನ್ನೆ ಯೆಲ್ಲ ಜೊತೆಯಲ್ಲಿ ಜಮಖಂಡಿಗೆ ಹೋಗಿದ್ದೆವು. ನಮ್ಮದು 35 ವರ್ಷಗಳ ಸ್ನೇಹ. ಇಬ್ಬರು ಕಳೆದ ಚುನಾ ವಣೆಯಲ್ಲಿ ಸೋಲು ಕಂಡಿದ್ದ ಕಾರಣ ಕೆಲಕಾಲ ಹೊರಗೆ ಕಾಣಿಸಿಕೊಳ್ಳಲು ಮನಸ್ಸಿರಲಿಲ್ಲ ಎಂದು ಉತ್ತರಿಸಿದರು.
ಎಷ್ಟು ಉದ್ಯೋಗ ಸೃಷ್ಟಿಸಿದೆ: ಕೇಂದ್ರದ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ದೇಶದಲ್ಲಿ 5 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿತ್ತು. ಈ ಸಂಬಂಧ ಎಷ್ಟು ಉದ್ಯೋಗ ಸೃಷ್ಟಿಸ ಲಾಗಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರ ಶ್ವೇತ ಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.