ಮೈಸೂರು: ಮೈಸೂರು ನಗರಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಹತ್ತಿರವಾಗಿದ್ದರೂ ಮೈತ್ರಿ ಪಕ್ಷಗಳ ನಿರ್ಧಾರವಿನ್ನೂ ಪ್ರಕಟವಾಗಿಲ್ಲ.
ಮೇಯರ್ ಚುನಾವಣೆ ನ.17ರಂದು ನಿಗಧಿಯಾಗಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಗದ್ದುಗೆ ಏರುವ ಪಕ್ಷ ಯಾವುದು? ಎಂಬುದಿನ್ನೂ ತಿಳಿದಿಲ್ಲ. ಚುನಾವಣೆ ಸಂಬಂಧ ಜೆಡಿಎಸ್ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇ ಗೌಡರು ಹಾಗೂ ಸಾ.ರಾ.ಮಹೇಶ್ ಹೆಗಲಿಗಿದ್ದರೆ, ಕಾಂಗ್ರೆಸ್ ಹೊಣೆಯನ್ನು ಮಾಜಿ ಸಚಿವ ತನ್ವೀರ್ ಸೇಠ್ ಹೊತ್ತಿದ್ದಾರೆ.
ಈಗಾಗಲೇ ಉಭಯ ಪಕ್ಷಗಳ ಸ್ಥಳೀಯ ಪದಾಧಿಕಾರಿಗಳು, ಮುಖಂಡರು ಹಾಗೂ ಪಾಲಿಕೆ ಸದಸ್ಯರ ಅಭಿಪ್ರಾಯವನ್ನೂ ಸಂಗ್ರಹಿಸಿ, ಹೈ ಕಮಾಂಡ್ ನಾಯಕರ ಗಮನಕ್ಕೆ ತರಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯನವರೂ ಮೈಸೂರಿನಲ್ಲಿ ಸಭೆ ನಡೆಸಿ, ಮಾಹಿತಿ ಪಡೆದಿದ್ದಾರೆ. ಉಭಯ ಪಕ್ಷಗಳ ಸ್ಥಳೀಯ ಮುಖಂಡರು, ಪಾಲಿಕೆ ಸದಸ್ಯರು ಮೇಯರ್ ಗಾದಿಗೆ ಪಟ್ಟು ಹಿಡಿದಿರುವುದು ಎಲ್ಲರಿಗೂ ತಿಳಿದಿದೆ. ಆದರೆ ಮೈಸೂರು ನಗರ ಪಾಲಿಕೆ ಮೇಯರ್ ಸ್ಥಾನ ಯಾವ ಪಕ್ಷಕ್ಕೆ ದಕ್ಕಲಿದೆ ಎಂಬುದಿನ್ನೂ ನಿಗೂಢವಾಗಿದೆ. ಅಭಿಪ್ರಾಯ ಸಂಗ್ರಹಿಸಿ, ತಿಳಿಸುವುದಷ್ಟೇ ನಮ್ಮ ಕೆಲಸ. ಮುಂದಿನ ತೀರ್ಮಾನ ಹೈ ಕಮಾಂಡ್‍ಗೆ ಬಿಟ್ಟಿದ್ದು ಎಂಬುದಷ್ಟೇ ಉಸ್ತುವಾರಿ ನಾಯಕರ ಮಾತು.
ಇದು ಆಕಾಂಕ್ಷಿಗಳ ನಿದ್ದೆಗೆಡಿಸಿದೆ. ಬಿಜೆಪಿ 22, ಕಾಂಗ್ರೆಸ್ 19, ಜೆಡಿಎಸ್ 18, ಬಿಎಸ್‍ಪಿ 1 ಹಾಗೂ 5 ಪಕ್ಷೇತರ ಸದಸ್ಯರಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಗೆ ಅಧಿಕಾರ ಎಂಬುದು ಸ್ಪಷ್ಟವಾಗುತ್ತಿದ್ದಂತೆ ಎರಡೂ ಪಕ್ಷಗಳಲ್ಲಿ ಮೇಯರ್ ಗದ್ದುಗೆಗೆ ಕಸರತ್ತು ಆರಂಭವಾಯಿತು. ಇನ್ನೆರಡು ದಿನ ಕಳೆದರೆ ಚುನಾವಣೆ. ಆದರೂ ಗೊಂದಲ ಮಾತ್ರ ಪರಿಹಾರವಾಗಿಲ್ಲ. ಇನ್ನೂ ಅಭಿಪ್ರಾಯ ಸಂಗ್ರಹದ ಹಂತದಲ್ಲೇ ಇದ್ದು, ಉಭಯ ಪಕ್ಷಗಳ ನಾಯಕರ ನಡುವೆ ಮಾತುಕತೆಯೂ ಆಗಿಲ್ಲ ಎನ್ನಲಾಗುತ್ತಿದೆ.
ಯಾವ ಪಕ್ಷಕ್ಕೆ ಮೇಯರ್ ಹಾಗೂ ಉಪಮೇಯರ್ ಸ್ಥಾನ ಎಂಬುದು ನಿರ್ಧಾರವಾದ ಬಳಿಕ ಅಭ್ಯರ್ಥಿಗಳ ಆಯ್ಕೆ ಸವಾಲು ಎದುರಾಗಲಿದೆ. ಸಾಮಾನ್ಯ ಮಹಿಳೆ ಮೇಯರ್, ಬಿಸಿಎಗೆ ಉಪಮೇಯರ್ ಸ್ಥಾನ ಮೀಸಲಾಗಿರುವುದರಿಂದ ಆಕಾಂಕ್ಷಿಗಳ ಪಟ್ಟಿಯೂ ಹೆಚ್ಚಾಗಿದೆ. ಎಲ್ಲರನ್ನೂ ಸಮಾಧಾನಪಡಿಸಿ, ಒಬ್ಬರನ್ನು ಆಯ್ಕೆ ಮಾಡುವುದೂ ಕಗ್ಗಂಟಾಗಲಿದೆ. ಈ ಕಾರಣಕ್ಕಾಗಿಯೇ ಮೇಲ್ಮಟ್ಟದ ತೀರ್ಮಾನವನ್ನು ಚುನಾವಣೆಗೆ ಇನ್ನೊಂದು ದಿನ ಬಾಕಿ ಇರುವಂತೆ ಕಡೇ ಕ್ಷಣದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.