ಲಾಕ್‍ಡೌನ್ ನಡುವೆ ತೆರಿಗೆ ಸಂಗ್ರಹಿಸಲು ಮೈಸೂರು ನಗರ ಪಾಲಿಕೆ ಹೊಸ ಮಾರ್ಗ
ಮೈಸೂರು

ಲಾಕ್‍ಡೌನ್ ನಡುವೆ ತೆರಿಗೆ ಸಂಗ್ರಹಿಸಲು ಮೈಸೂರು ನಗರ ಪಾಲಿಕೆ ಹೊಸ ಮಾರ್ಗ

May 12, 2020

ಮೈಸೂರು, ಮೇ.11(ಎಂಟಿವೈ)- ಲಾಕ್‍ಡೌನ್‍ನಿಂದಾಗಿ ಕಂದಾಯ ಸಂಗ್ರಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಕಳೆದ ಮೂರು ದಿನದಿಂದ ಪ್ರಾಪರ್ಟಿ ಇಂಡೆಕ್ಸ್ ನಂಬರ್ ಮೂಲಕ ಆಸ್ತಿ ತೆರಿಗೆ ಸಂಗ್ರಹಿಸುವ ಹೊಸ ವಿಧಾನಕ್ಕೆ ಚಾಲನೆ ನೀಡಿದೆ.

2020-21ನೇ ಸಾಲಿನಲ್ಲಿ ಕಂದಾಯ ಸಂಗ್ರಹ ಪ್ರಕ್ರಿಯೆ ಏಪ್ರಿಲ್ ತಿಂಗಳಿಂದ ಆರಂಭವಾಗಬೇಕಾಗಿತ್ತು. ಮೈಸೂರು ಮಹಾನಗರ ಪಾಲಿಕೆಯ 9 ವಲಯ ಗಳಲ್ಲೂ ಪ್ರಾಪರ್ಟಿ ಇಂಡೆಕ್ಸ್ ನಂಬರ್ ಮೂಲಕ ಕಂದಾಯ ಸಂಗ್ರಹ ಪ್ರಕ್ರಿಯೆ ಆರಂಭಿಸಿದೆ. ಪ್ರತಿ ವರ್ಷ ಏಪ್ರಿಲ್ ತಿಂಗ ಳಲ್ಲಿ ಶೇ. 5ರಷ್ಟು ರಿಯಾಯಿತಿ ಮೂಲಕ ಕಂದಾಯ ಸಂಗ್ರಹಿಸಲಾಗುತ್ತಿತ್ತು. ಆದರೆ ಈ ಬಾರಿ ಲಾಕ್‍ಡೌನ್‍ನಿಂದಾಗಿ ಜನರು ಮನೆಯಿಂದ ಹೊರಗೆ ಬರಲು ಸಾಧ್ಯ ವಾಗದ ಕಾರಣ ಮೇ ತಿಂಗಳಲ್ಲಿ ಶೇ. 5ರಷ್ಟು ರಿಯಾಯಿತಿ ಮುಂದುವರೆಸಲಾ ಗಿದೆ. ಈ ತಿಂಗಳಲ್ಲೂ ನಿರೀಕ್ಷಿಸಿದ ಪ್ರಮಾಣದಲ್ಲಿ ಕಂದಾಯ ಸಂಗ್ರಹವಾ ಗದ ಕಾರಣ ಜೂನ್‍ನಲ್ಲಿ ಕಂದಾಯ ಪಾವತಿಸುವವರಿಗೂ ರಿಯಾಯಿತಿ ನೀಡಬೇಕೇ, ಬೇಡವೋ ಎನ್ನುವುದು ಚರ್ಚೆಯಾಗುತ್ತಿದೆ. ಮೂರನೇ ಅವಧಿ ಲಾಕ್‍ಡೌನ್ ವೇಳೆ ಕೆಲವು ವಿಷಯಗಳಲ್ಲಿ ಸಡಿಲಿಕೆ ಮಾಡಿರುವುದರಿಂದ ಬೆಳಿಗ್ಗೆ 7ರಿಂದ ಮಧ್ಯಾಹ್ನ 12 ಗಂಟೆವರೆಗೆ ಪಾಲಿಕೆಯ 9 ವಲಯಗಳಲ್ಲೂಕಂದಾಯ ಸಂಗ್ರಹ ಮಾಡಲಾಗುತ್ತಿದೆ. ಆನ್‍ಲೈನ್ ಮೂಲಕ ಕಂದಾಯ ಪಾವತಿಸುವ ಪ್ರಕ್ರಿಯೆಗೆ ಸಾಫ್ಟ್‍ವೇರ್ ಅಳವಡಿಸುವ ಕಾರ್ಯ ತ್ವರಿತಗತಿಯಲ್ಲಿ ಸಾಗಿದೆ. ಮೂರು ತಿಂಗಳ ಬಳಿಕ ಎಲ್ಲಾ ವಲಯ ಕಚೇರಿಗಳಲ್ಲೂ ಆನ್‍ಲೈನ್ ವ್ಯವಸ್ಥೆ ಜಾರಿಯಾಗಲಿದೆ. ಈ ನಿಟ್ಟಿನಲ್ಲಿ ಮೈಸೂರು ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ನಿವೇಶನ, ಕಟ್ಟಡ, ವಾಣಿಜ್ಯ ಮಳಿಗೆ ಸೇರಿದಂತೆ ಆಸ್ತಿ ವಿವರ ದಾಖಲಿಸಲಾಗಿದೆ. ಆನ್‍ಲೈನ್ ಪಾವತಿಗೆ ಮೊದಲ ಹೆಜ್ಜೆಯಾಗಿ ನಗರ ಪಾಲಿಕೆ ಪ್ರಾಪರ್ಟಿ ಇಂಡೆಕ್ಸ್ ನಂಬರ್ ಮೂಲಕ ಕಂದಾಯ ಸಂಗ್ರಹಿಸುವ ಕಾರ್ಯ ಆರಂಭಿಸಿದ್ದು, ಇದಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಏನಿದು ಪ್ರಾಪರ್ಟಿ ಇಂಡೆಕ್ಸ್ ನಂಬರ್: ಆನ್‍ಲೈನ್ ಕಂದಾಯ ಸಂಗ್ರಹ ವ್ಯವಸ್ಥೆ ಜಾರಿಗೊಳಿ ಸುವ ನಿಟ್ಟಿನಲ್ಲಿ ಪಾಲಿಕೆ ತೆರಿಗೆದಾರರ ಆಸ್ತಿ ವಿವರ ಸಂಗ್ರಹಿಸಿ, ಅದಕ್ಕೆ ಸಂಬಂಧಿಸಿದ ಕಂದಾಯವನ್ನೂ ದಾಖಲೀಕರಿಸಿದೆ. ಹೀಗೆ ಪ್ರತಿಯೊಬ್ಬರಿಗೂ ಒಂದೊಂದು ಪ್ರಾಪರ್ಟಿ ಇಂಡೆಕ್ಸ್ ನಂಬರ್ ನಿಗದಿ ಮಾಡಲಾಗಿದೆ. ಇಷ್ಟು ವರ್ಷ ವಲಯ ಕಚೇರಿ ಮುಂದೆ ಕೌಂಟರ್ ತೆರೆದು ಗ್ರಾಹಕರಿಂದ ಕೈ ಬರಹದ ಅರ್ಜಿ ಪಡೆದು ಕಂದಾಯ ಸ್ವೀಕರಿಸಲಾಗುತ್ತಿತ್ತು. ಆದರೆ ಈ ಬಾರಿ ವಲಯ ಕಚೇರಿಗೆ ಬಂದ ತೆರಿಗೆದಾರರು ಈ ಹಿಂದೆ ಕಂದಾಯ ಕಟ್ಟಿರುವ ರಶೀತಿ ನೀಡಿದರೆ ಅವರ ಆಸ್ತಿಗೆ ನಿಗದಿ ಮಾಡಿರುವ ಪ್ರಾಪರ್ಟಿ ಇಂಡೆಕ್ಸ್ ನಂಬರ್ ನೀಡಲಾಗುತ್ತದೆ. ಆ ನಂಬರ್ ನಮೂದು ಮಾಡಿದರೆ, ನಿಗದಿತ ಆಸ್ತಿ ವಿವರ ಬರುತ್ತದೆ. ಅದರ ಪ್ರಿಂಟ್ ತೆಗೆದು ಪಾವತಿದಾರರಿಗೆ ನೀಡಲಾಗುತ್ತದೆ. ಅದರಲ್ಲಿರುವ ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿದ ನಂತರ ಕಂದಾಯ ಪಾವತಿಸಬಹುದಾಗಿದೆ.

ಮೈಸೂರು ಮಹಾನಗರ ಪಾಲಿಕೆಯಲ್ಲಿ 1.85 ಲಕ್ಷ ತೆರಿಗೆದಾರರಿದ್ದು, 2021ರಲ್ಲಿ 176 ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ. 9 ವಲಯ ಕಚೇರಿಯಲ್ಲೂ ಕಂದಾಯ ಪಾವತಿಗೆ ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಆಯಾ ವಲಯ ಕಚೇರಿಗೆ ಬಂದು ಕಂದಾಯ ಪಾವತಿಸಬಹು ದಾಗಿದೆ. ಮೇ ತಿಂಗಳಲ್ಲೇ ಕಂದಾಯ ಪಾವತಿಸಿದರೆ ಶೇ. 5ರಷ್ಟು ರಿಯಾಯಿತಿ ದೊರೆಯುವುದರಿಂದ ಜನರು ಇದರ ಸದುಪಯೋಪ ಪಡೆದುಕೊಳ್ಳಬಹುದು.

ವಲಯ ಕಚೇರಿ 6ರ ವ್ಯಾಪ್ತಿಯಲ್ಲಿ 16 ಸಾವಿರ ವಾಣಿಜ್ಯ ಕಟ್ಟಡಗಳಿವೆ. 39 ಕೋಟಿ ರೂ. ಕಂದಾಯ ಸಂಗ್ರಹಿಸುವ ಟಾರ್ಗೆಟ್ ಹೊಂದಲಾಗಿದೆ. ಶೇ.5ರಷ್ಟು ರಿಯಾಯಿತಿ ನೀಡುವ ಅವಧಿಯಲ್ಲಿ 18-20 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆಯಿದೆ. ಇದೇ ಮೊದಲ ಬಾರಿಗೆ ಪಿಐಡಿ ನಂಬರ್ ವ್ಯವಸ್ಥೆ ಮೂಲಕ ಕಂದಾಯ ಸಂಗ್ರಹಿಸಲಾಗುತ್ತಿದೆ. ಮುಂದಿನ ವರ್ಷದಿಂದ ಆನ್‍ಲೈನ್‍ನಲ್ಲಿ ಕಂದಾಯ ಪಾವತಿ ಸಾಧ್ಯವಾಗಲಿದೆ. ಈ ಹೊಸ ಪದ್ಧತಿಯಿಂದ 39 ಮಂದಿ 16 ಲಕ್ಷ ರೂ. ಕಂದಾಯ ಪಾವತಿಸಿದ್ದಾರೆ.
-ಹೆಚ್.ನಾಗರಾಜು, ಸಹಾಯಕ ಆಯುಕ್ತರು, ಪಾಲಿಕೆ ವಲಯ ಕಚೇರಿ 6

Translate »