ಮುನ್ಸಿಪಲ್ ಬಾಂಡ್ ಮೂಲಕ ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ಮೈಸೂರು ಆಯ್ಕೆ
ಮೈಸೂರು

ಮುನ್ಸಿಪಲ್ ಬಾಂಡ್ ಮೂಲಕ ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ಮೈಸೂರು ಆಯ್ಕೆ

February 24, 2020

ಮೈಸೂರು, ಫೆ.23- ದೊಡ್ಡ ದೊಡ್ಡ ಯೋಜನೆ ಅನು ಷ್ಠಾನಕ್ಕೆ ಅಗತ್ಯವಾದ ಬೃಹತ್ ಬಂಡವಾಳವನ್ನು ಮುನ್ಸಿಪಲ್ ಬಾಂಡ್ ಮೂಲಕ ಮುಕ್ತ ಮಾರು ಕಟ್ಟೆ ವ್ಯವಸ್ಥೆಯಲ್ಲಿ ಪಡೆಯಲು ರಾಜ್ಯ ದಿಂದ ಮೈಸೂರು ಮತ್ತು ಮಂಗ ಳೂರು ನಗರ ಆಯ್ಕೆಯಾಗಿದ್ದು, ಮೈಸೂರಿನಲ್ಲಿ ಅಗತ್ಯವಾಗಿ ಜಾರಿ ಗೊಳಿಸಲು ಬೇಕಾದ ಯೋಜನೆ ರೂಪುರೇಷೆ ಸಿದ್ಧಪಡಿಸಲು ಪಾಲಿಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಮುನ್ಸಿಪಲ್ ಬಾಂಡ್ ವ್ಯವಸ್ಥೆ ಮೂಲಕ ಯೋಜನೆಗಳಿಗೆ ಬಂಡ ವಾಳ ಪಡೆಯಲು ಈ ಬಾರಿ ದೇಶದಲ್ಲಿ 6 ನಗರಗಳು ಆಯ್ಕೆ ಯಾಗಿದ್ದು, ಅದರಲ್ಲಿ ಕರ್ನಾಟಕದಿಂದ ಮೈಸೂರು ಮತ್ತು ಮಂಗಳೂರು ಒಳಗೊಂಡಿದೆ. ಉಳಿದಂತೆ ರಾಜ್‍ಕೋಟ್, ವಡೋದರಾ, ಲಕ್ನೋ, ಪಿಂಪ್ರಿ ಚಿಂಚ್‍ವಾಡ್ ನಗರಗಳು ಈ ಪದ್ಧತಿಯಲ್ಲಿ ಅಭಿವೃದ್ಧಿ ಕಾಣಲಿವೆ. ಈ ಆರು ನಗರಗಳಿಗೆ ಮುನ್ಸಿಪಲ್ ಬಾಂಡ್ ಮೂಲಕ ಬಂಡವಾಳ ಪಡೆಯಲು ಯುಎಸ್ ಖಜಾನೆ ಇಲಾಖೆ ಸಮ್ಮತಿಸಿದ್ದು, ಅಗತ್ಯ ತಾಂತ್ರಿಕ ಜ್ಞಾನ ಒದಗಿಸಲು ಮುಂದಾಗಿದೆ. ಆ ಮೂಲಕ ಮುಕ್ತ ಮಾರು ಕಟ್ಟೆಯಿಂದ ಬಂಡವಾಳ ಒದಗಿಸಲು ಸಹಕರಿಸಲಿದೆ.

ಟ್ರಂಪ್ ಭೇಟಿ ವೇಳೆ ಒಪ್ಪಂದ: ಮುನ್ಸಿಪಲ್ ಬಾಂಡ್‍ಗಳು ಮೂಲಸೌಲಭ್ಯ, ಅಭಿವೃದ್ಧಿಯಂತಹ ದೀರ್ಘಕಾಲೀನ ಯೋಜನೆ ಗಳಿಗೆ ಬಂಡವಾಳ ಒದಗಿಸಿ ಆ ಮೂಲಕ ನಗರಗಳಿಗೆ ಸಂಪ ನ್ಮೂಲ ಸಂಗ್ರಹಿಸುವಂತೆ ಮಾಡುವ ಯೋಜನೆ ಇದಾಗಿದೆ. ಯುಎಸ್‍ಎ ನಂತಹ ದೇಶಗಳು ನಗರಗಳ ಅಭಿವೃದ್ಧಿ ಮತ್ತು ಅವುಗಳ ಮೂಲಸೌಲಭ್ಯಕ್ಕೆ ಬಂಡವಾಳ ಪಡೆಯಲು ನಗರ ಸಭೆ, ಪುರಸಭೆಯ ಬಾಂಡ್‍ಗಳನ್ನು ನೀಡಬೇಕಾಗಿದೆ. ಅಮೆ ರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತಕ್ಕೆ ಭೇಟಿ ನೀಡುತ್ತಿ ರುವ ಹಿನ್ನೆಲೆಯಲ್ಲಿ ಮುನ್ಸಿಪಲ್ ಬಾಂಡ್‍ಗಳ ಮೂಲಕ ಮೂಲ ಸೌಕರ್ಯ ನಿಧಿಯನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಆರು ನಗರಗಳು ಪಡೆಯಲಿದ್ದು, ಇದಕ್ಕಾಗಿ ಭಾರತ ಮತ್ತು ಅಮೆರಿಕಾ ಒಪ್ಪಂದ ಮಾಡಿಕೊಳ್ಳಲಿವೆ. ಮುನ್ಸಿಪಲ್ ಬಾಂಡ್ ಹಾಗೂ ಮುಕ್ತ ಮಾರುಕಟ್ಟೆ ಮೂಲಕ ಬಂಡವಾಳ ಪಡೆಯುವ ಯೋಜನೆ ಭಾರತದ ನಗರಗಳಿಗೆ ಹೊಸ ಯೋಜನೆಯಾಗಿದೆ. 2017ರಲ್ಲಿ ಪುಣೆಯಲ್ಲಿ ನೀರು ಸರಬರಾಜು ಯೋಜನೆಗಾಗಿ ಮುನ್ಸಿಪಲ್ ಬಾಂಡ್ ಪದ್ಧತಿಯನ್ನು ಮೊದಲ ಬಾರಿಗೆ ಅನುಸರಿಸಲಾಗಿತ್ತು. 200 ಕೋಟಿ ರೂ. ಮೊತ್ತದ ಪೈಲಟ್ ಪ್ರಾಜೆಕ್ಟ್ ಇದಾಗಿತ್ತು. ಯುಎಸ್ ಖಜಾನೆ ಇಲಾಖೆ ಪುಣೆಗೆ ನೆರವು ನೀಡಿತ್ತು. ಅಲ್ಲದೆ, 3,200 ಕೋಟಿ ರೂ.ಗಳ ಬೃಹತ್ ಮೊತ್ತವನ್ನು ಹೈದರಾ ಬಾದ್, ಇಂದೋರ್, ಅಮರಾವತಿ, ಭೋಪಾಲ್ ಮತ್ತು ವಿಶಾಖ ಪಟ್ಟಣಂಗೆ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ದೊರೆತಿತ್ತು.

ಮುನ್ಸಿಪಲ್ ವ್ಯವಸ್ಥೆ ಅಂದರೆ: ಸಾಮಾನ್ಯವಾಗಿ ದೊಡ್ಡ ದೊಡ್ಡ ಯೋಜನೆ ಅನುಷ್ಠಾನಕ್ಕೆ ನೂರಾರು ಕೋಟಿ ರೂ. ಬಂಡವಾಳ ಅಗತ್ಯವಿರುತ್ತದೆ. ನಗರ, ಪುರಸಭೆ ಹಾಗೂ ನಗರಪಾಲಿಕೆಯಂತಹ ಸಂಸ್ಥೆಗಳಿಗೆ ದೊಡ್ಡ ಮೊತ್ತದ ಬಂಡವಾಳ ಹೂಡಲು ಸಂಪ ನ್ಮೂಲದ ಕೊರತೆ ಎದುರಾಗುತ್ತದೆ.

ಸಂಗ್ರಹವಾದ ತೆರಿಗೆಯನ್ನು ಸಿಬ್ಬಂದಿಗಳ ಸಂಬಳ, ವಿವಿಧ ಯೋಜನೆಗಳ ನಿರ್ವಹಣೆಗೆ ಸೀಮಿತವಾಗಿರುವುದರಿಂದ ಹೊಸ ಯೋಜನೆಗೆ ಬಂಡವಾಳ ಹೂಡಲು ಸ್ಥಳೀಯ ಸಂಸ್ಥೆಗಳಿಗೆ ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಮುನ್ಸಿಪಲ್ ಬಾಂಡ್ ನೀಡಿ ವಿವಿಧ ಸಂಸ್ಥೆಗಳಿಂದ ಬಂಡವಾಳ ಪಡೆಯಬಹುದಾಗಿದೆ. ಈ ವ್ಯವಸ್ಥೆ ಅಭಿವೃದ್ಧಿಗೆ ಪೂರಕವಾಗಿ ಪರಿಣಮಿಸಲಿದೆ.

ಕ್ರೆಡಿಟ್ ರೇಟಿಂಗ್: ದೇಶದ ಎಲ್ಲಾ ರಾಜ್ಯಗಳ ನಗರಗಳು ಸಂಪನ್ಮೂಲ ಕ್ರೂಢೀಕರಣ ಹಾಗೂ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ತಮ್ಮದೇ ಆದ ಕ್ರೆಡಿಟ್ ರೇಟಿಂಗ್ ಹೊಂದಿರುತ್ತದೆ. ಮುಕ್ತ ಮಾರುಕಟ್ಟೆಯಲ್ಲಿ ಈ ಕ್ರೆಡಿಟ್ ರೇಟಿಂಗ್ ನೋಡಿಕೊಂಡೇ ಬಂಡವಾಳ ಹೂಡಲು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳು ಮುಂದೆ ಬರುತ್ತವೆ.

ಸಂಸ್ಥೆಗಳದ್ದೇ ಹಿಡಿತ: ಸಾಮಾನ್ಯವಾಗಿ ಖಾಸಗಿ ಸಹಭಾಗಿತ್ವದಲ್ಲಿ ನಡೆಯುವ ಯೋಜನೆ ಗಳು ನಿಗದಿತ ವೇಳೆ ಪೂರ್ಣಗೊಳ್ಳುವುದಿಲ್ಲ. ಕಳಪೆ ಗುಣಮಟ್ಟ ಹೊಂದಿರುತ್ತವೆ. ಸ್ಥಳೀಯ ಸಂಸ್ಥೆಗಳ ಮಾತಿಗೆ ಮನ್ನಣೆಯೂ ಸಿಗದೇ ಇರುವ ಆರೋಪ ಕೇಳಿಬರುತ್ತದೆ. ಆದರೆ ಮುನ್ಸಿಪಲ್ ಬಾಂಡ್ ವ್ಯವಸ್ಥೆಯಲ್ಲಿ ಸ್ಥಳೀಯ ಸಂಸ್ಥೆಗಳೇ ಸುಪ್ರಿಂ. ಜಾರಿ ಗೊಳಿಸಲು ಉದ್ದೇಶಿಸಿದ್ದ ಯೋಜನಾ ವರದಿ, ಅಂದಾಜು ವೆಚ್ಚ ಸೇರಿದಂತೆ ಇನ್ನಿತರ ಮಾಹಿತಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಸ್ಥಳೀಯ ಸಂಸ್ಥೆ ಒದಗಿಸುತ್ತದೆ. ಇದನ್ನು ಗಮನಿಸುವ ಕಂಪನಿಗಳು ಬಂಡವಾಳ ಒದಗಿಸಲು ಮುಂದಾಗುತ್ತವೆ. ಇದರಿಂದ ಸ್ಪರ್ಧೆ ಏರ್ಪಟ್ಟು ಕಡಿಮೆ ಬಡ್ಡಿ ದರದಲ್ಲಿ ಬಂಡವಾಳ ಲಭ್ಯವಾಗಲಿದೆ.

ಹೂಡಿಕೆದಾರರಿಗೆ ವಿಶ್ವಾಸ: ಸ್ಥಳೀಯ ಸಂಸ್ಥೆಗಳು ಕೇವಲ ಮುನ್ಸಿಪಲ್ ಬಾಂಡ್ ನೀಡಿದ ಮಾತ್ರಕ್ಕೆ ನೂರಾರು ಕೋಟಿ ರೂ. ಬಂಡವಾಳವನ್ನು ಹತ್ತಾರು ವರ್ಷ ಹೂಡಿಕೆ ಮಾಡಲು ಸಾಧ್ಯವೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡುವುದು ಸಹಜ. ಆದರೆ ಬೇರೆ ಬೇರೆ ದೇಶಗಳಲ್ಲಿ ಮುನ್ಸಿಪಲ್ ಬಾಂಡ್ ಪದ್ಧತಿಯೇ ಹೂಡಿಕೆದಾರರಿಗೆ ವಿಶ್ವಾಸ ಮೂಡಿಸಿದೆ. ಯಾವುದಾದರೂ ಖಾಸಗಿ ಸಂಸ್ಥೆಗಳಿಗೆ ಬಂಡವಾಳ ನೀಡಿದರೆ, ಅವುಗಳು ವಂಚನೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತವೆ. ಇದರಿಂದ ಬಂಡವಾಳ ಹೂಡಿಕೆದಾರರು ಖಾಸಗಿ ಸಂಸ್ಥೆಗಳಿಗೆ ಹಣಕಾಸು ನೆರವು ನೀಡಲು ಹಿಂದೇಟು ಹಾಕುತ್ತವೆ. ಆದರೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ನೀಡುವ ಮುನ್ಸಿಪಲ್ ಬಾಂಡ್ ನಿಂದಾಗಿ ಹೂಡಿದ ಹಣ ಹಿಂದಿರುಗಿ ಬರುತ್ತದೆ ಎಂಬ ದೃಢ ನಿಲುವು, ವಿಶ್ವಾಸ ಹೂಡಿಕೆದಾರರಲ್ಲಿರುವುದರಿಂದ ಈ ಪದ್ಧತಿ ಹೆಚ್ಚು ಪ್ರಚಲಿತವಾಗಿದೆ.

ಪಾಲಿಕೆಗೆ ಲಾಭ: ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಾದ ಬಂಡವಾಳವನ್ನು ಬ್ಯಾಂಕ್ ಗಳಲ್ಲಿ ಸಾಲದ ಮೂಲಕ ಪಡೆಯಲು ತೊಡಕಾಗುತ್ತಿತ್ತು. ಬ್ಯಾಂಕ್‍ಗಳಲ್ಲಿ ಬಡ್ಡಿ ದರ ಹೆಚ್ಚಳವಾಗಿರುವುದು, ಸಾಲ ಸೀಮಿತ ಮೊತ್ತಕ್ಕಷ್ಟೇ ಮೀಸಲಾಗಿರುತ್ತದೆ. ಅಲ್ಲದೆ 10-15 ವರ್ಷಗಳ ಸುದೀರ್ಘ ಅವಧಿಗೆ ಸಾಲ ನೀಡಲು ಬ್ಯಾಂಕ್ ಬಯಸುವುದಿಲ್ಲ. ಈ ಹಿನ್ನೆಲೆಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಮುನ್ಸಿಪಲ್ ಬಾಂಡ್ ನೀಡಿ ಬಂಡವಾಳ ಪಡೆಯುವುದು ಸುಲಭವಾಗಿದೆ. ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಇಂತಹ ಪ್ರಯೋಗವನ್ನು ನಡೆಸಲಾಗುತ್ತಿದ್ದು, ಮೈಸೂರು ಮತ್ತು ಮಂಗಳೂರು ಆಯ್ಕೆಯಾಗಿದೆ. ಕಳೆದ ವಾರ ಮುಂಬೈಯಿಂದ ಒಂದು ತಂಡ ಬಂದು ಮೈಸೂರಿನ ಕ್ರೆಡಿಟ್ ರೇಟಿಂಗ್ ಮೌಲ್ಯಮಾಪನ ಮಾಡಿದೆ. ಅಲ್ಲದೆ ಯಾವ ಯೋಜನೆ, ಎಷ್ಟು ಮೊತ್ತ ಬೇಕಾಗ ಬಹುದು ಎಂಬುದರ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದು ತಿಳಿಸಿದರು.

ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ: ಮುನ್ಸಿಪಲ್ ಬಾಂಡ್ ಪದ್ಧತಿ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಬಂಡವಾಳ ಪಡೆಯಲು ಯಾವ ಯಾವ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎನ್ನುವುದರ ಬಗ್ಗೆ ಎರಡು ತಿಂಗಳೊಳಗೆ ಅಗತ್ಯ ರೂಪು-ರೇಷೆ ಸಿದ್ಧಪಡಿಸಲಾಗುತ್ತದೆ ಎಂದು ಹೇಳಿದರು.

ಏಜೆನ್ಸಿ ಮಾರ್ಗದರ್ಶನ ನೀಡಲಿದೆ: ಈ ಪದ್ಧತಿಯಲ್ಲಿ ವಿವಿಧ ಯೋಜನೆಗೆ ಬಂಡವಾಳ ಪಡೆಯುವ ಸಂಬಂಧ ಎಸ್‍ಬಿಐ ಬ್ಯಾಂಕ್ ಏಜೆನ್ಸಿಯೊಂದು ಮೈಸೂರು ನಗರ ಪಾಲಿಕೆಗೆ ಮಾರ್ಗದರ್ಶನ ನೀಡಲಿದೆ. ಇದಕ್ಕಾಗಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮವು ನೋಡಲ್ ಅಧಿಕಾರಿಯೊಬ್ಬರನ್ನು ನಿಯೋಜಿಸಿದೆ. ಅಲ್ಲದೆ ಗೈಡ್ ಮಾಡುವ ಏಜೆನ್ಸಿಗೆ ಶುಲ್ಕವನ್ನು ರಾಜ್ಯ ಸರ್ಕಾರ ಪಾವತಿಸಲಿದೆ.

ಯೋಜನೆಗಳ ಉದ್ದೇಶ: ಮೈಸೂರಿನ ಮುನ್ಸಿಪಲ್ ಬಾಂಡ್ ನೀಡಿ ಬಂಡವಾಳ ಪಡೆದು ದೀರ್ಘ ಕಾಲದ ಉಪಯೋಗವಾಗುವ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳಲಾಗುತ್ತದೆ. ಪಾರ್ಕ್ ಅಭಿವೃದ್ಧಿ, ರಿಂಗ್ ರಸ್ತೆಯಲ್ಲಿನ ಹೊಸ ಬಡಾವಣೆಗಳಿಗೆ ಮೂಲ ಸೌಲಭ್ಯ ಕಲ್ಪಿಸುವ ಯೋಜನೆ, ಕಸ ತ್ಯಾಜ್ಯ ಸಂಗ್ರಹ ಘಟಕದಲ್ಲಿ ಕಸ ಬಳಸಿ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ, ಕುಡಿಯುವ ನೀರು ಸರಬರಾಜು ಯೋಜನೆ, ಯುಜಿಡಿ ಸಮಸ್ಯೆಗೆ ಪರಿಹಾರ ಸೇರಿದಂತೆ ಯಾವ ಯೋಜನೆ ಕೈಗೊಳ್ಳಬಹುದು ಎಂದು ನಿರ್ಧರಿಸಲಾಗುತ್ತದೆ ಎಂದು ವಿವರಿಸಿದರು.

ಎಂ.ಟಿ.ಯೋಗೇಶ್‍ಕುಮಾರ್

Translate »