ಸಿಐಟಿಬಿಯಿಂದ ನಿರ್ಮಾಣವಾದ 12,145 ಮನೆ ಬಿಟ್ಟರೆ ವಸತಿ ಯೋಜನೆಗೆ ಮುಡಾ ಎಳ್ಳು-ನೀರು
ಮೈಸೂರು

ಸಿಐಟಿಬಿಯಿಂದ ನಿರ್ಮಾಣವಾದ 12,145 ಮನೆ ಬಿಟ್ಟರೆ ವಸತಿ ಯೋಜನೆಗೆ ಮುಡಾ ಎಳ್ಳು-ನೀರು

March 4, 2020

ಆಗ ನಿರ್ಮಿಸಿದ 208 ಮನೆಗಳು ಯಾರಿಗೂ ಮಂಜೂರಾಗಲಿಲ್ಲ, 441 ರಲ್ಲಿ ಯಾರೂ ವಾಸವಾಗಿಲ್ಲ

ಮೈಸೂರು, ಮಾ. 3- ನಿರಾಶ್ರಿತರಿಗೆ ಸೂರು ಒದಗಿಸಿಕೊಡುವ ನಗರ ಅಭಿವೃದ್ಧಿ ವಿಶ್ವಸ್ಥ ಮಂಡಳಿ (ಅIಖಿಃ)ಯ ಜನಪರ ಕಾರ್ಯಕ್ರಮ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಿಂದ ಮುಂದುವರಿಯಲಿಲ್ಲ.

ಮೈಸೂರು ಪ್ರಾಂತ್ಯವನ್ನಾಳಿದ ನಾಲ್ವಡಿ ಕೃಷ್ಣ ರಾಜ ಒಡೆಯರ್ ಕಲ್ಪನೆ “ಏನೂ ಇಲ್ಲದವರಿಗೆ ಏನನ್ನಾದರೂ ಕೊಟ್ಟು ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂಬುದಾಗಿತ್ತು”. ಅಂದಿನ ನಗರ ಅಭಿವೃದ್ಧಿ ವಿಶ್ವಸ್ಥ ಮಂಡಳಿ ಉದ್ದೇಶವೇ ಜನಪರವಾಗಿದ್ದವು. ಆದ್ದರಿಂದಲೇ ಸೂರಿಲ್ಲದ ವರಿಗೆ ಆಶ್ರಯ ನೀಡಬೇಕೆಂಬ ಉದ್ದೇಶದಿಂದ ಮೈಸೂರು ನಗರದಾದ್ಯಂತ ಅಲ್ಲಲ್ಲಿ ಕಡಿಮೆ ಖರ್ಚಿನಲ್ಲಿ ವಸತಿ ಯೋಜನೆಯನ್ನು ಜಾರಿ ಗೊಳಿಸಿದ ಅಂದಿನ ಸಿಐಟಿಬಿ ಅಧ್ಯಕ್ಷರು, ನೀರು, ವಿದ್ಯುತ್, ಒಳಚರಂಡಿ, ರಸ್ತೆ, ಉದ್ಯಾನದಂತಹ ಮೂಲ ಸೌಕರ್ಯ ಕಲ್ಪಿಸಿ ನಿರಾಶ್ರಿತರ ಗುರುತಿಸಿ ಮನೆಗಳನ್ನು ಹಂಚಿದ್ದರು.

1986-87ರ ಅವಧಿಯನ್ನು ‘ಅಂತರರಾಷ್ಟ್ರೀಯ ವಸತಿ ವರ್ಷ’ ಎಂದು ಆಚರಿಸಲಾಯಿತು. ಆ ಅವಧಿ ಯಲ್ಲಿ ಆರಂಭವಾದ ವಸತಿ ಯೋಜನೆಯಡಿ ಮೈಸೂರಲ್ಲಿ ಹುಡ್ಕೋ, ಓವೈಹೆಚ್‍ಎಸ್ (Own Your House Scheme) ಸೇರಿದಂತೆ ಹಲವು ಯೋಜನೆಗಳನ್ನು ಸಿಐಟಿಬಿ ಜಾರಿಗೊಳಿಸಿತು.

ಹುಡ್ಕೋ ಮನೆಗಳು, ಓವೈಹೆಚ್‍ಎಸ್ ಅಡಿ ಬ್ಯಾಂಕ್ ನೆರವಿನಿಂದ ಒಟ್ಟು 12,145 ಮನೆಗಳನ್ನು ನಿರ್ಮಿಸ ಲಾಗಿದೆ. ಆ ಪೈಕಿ 441 ಮನೆಗಳು ಯಾರೂ ವಾಸ ಮಾಡದಿರುವುದರಿಂದ ಅವು ಈಗಲೂ ಭೌತಿಕ ವಾಗಿ ಖಾಲಿ ಬಿದ್ದಿವೆ. 208 ಮನೆಗಳನ್ನು ಈವರೆ ವಿಗೂ ಯಾರಿಗೂ ಮಂಜೂರು ಮಾಡಿಲ್ಲ ಎಂಬುದು ಕುತೂಹಲಕಾರಿ ಮಾತ್ರವಲ್ಲ ಅಚ್ಚರಿ ಸಂಗತಿ.

ಹುಡ್ಕೋ: ಹುಡ್ಕೋ ಯೋಜನೆಯಡಿ 252ಕ್ಕೂ ಅಧಿಕ ಆದಾಯ ಹೊಂದಿರುವ ವರ್ಗ (HIT), 1,198 ಮಧ್ಯಮ ಆದಾಯ ಹೊಂದಿ ರುವ ವರ್ಗ(MIG), 3,517 ಕಡಿಮೆ ಆದಾಯ ವರ್ಗ (LIG) ಹಾಗೂ 2,520 ಆರ್ಥಿಕವಾಗಿ ಹಿಂದುಳಿದ ವರ್ಗ (EWS) ಸೇರಿ ಒಟ್ಟು 7,487 ಮನೆಗಳನ್ನು ನಿರ್ಮಿಸಲಾಗಿದೆ.

ಓವೈಹೆಚ್‍ಎಸ್: ಸ್ವಂತ ಮನೆ ಹೊಂದಿ (Own Your House Scheme) ಯೋಜನೆ ಯಡಿ 724 ಹೆಚ್‍ಐಜಿ, 1,433 ಎಂಐಜಿ, 469 ಎಲ್‍ಐಜಿ, 1,741 ಇಡಬ್ಲ್ಯೂಎಸ್ ಸೇರಿ ಒಟ್ಟು 4,367 ಮನೆಗಳನ್ನು ನಿರ್ಮಿಸಲಾಗಿದೆ. ಆದರೆ ಬ್ಯಾಂಕ್ ನೆರವಿನ ಯೋಜನೆಯಡಿ 119 ಎಲ್‍ಐಜಿ ಮತ್ತು 172 ಇಡಬ್ಲ್ಯೂಎಸ್ ಸೇರಿ ಒಟ್ಟು 291 ಮನೆಗಳನ್ನು ನಿರ್ಮಿಸಿದ್ದನ್ನು ಹೊರತುಪಡಿಸಿದರೆ, ನಂತರ ವಸತಿ ಯೋಜನೆಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮರೆತೇ ಬಿಟ್ಟಿತು.

ಖಾಲಿ ಇವೆ: ಹುಡ್ಕೋ ಯೋಜನೆಯ 281, ಓವೈಹೆಚ್‍ಎಸ್‍ನ 160 ಮನೆಗಳಲ್ಲಿ ಮಂಜೂ ರಾತಿದಾರರು ಸ್ವಾಧೀನಕ್ಕೆ ಮುಂದಾಗದಿರುವುದ ರಿಂದ ಒಟ್ಟು 441 ಮನೆಗಳು ಈಗಲೂ ಖಾಲಿ ಬಿದ್ದಿದ್ದು, ಕಿಟಕಿ-ಬಾಗಿಲುಗಳನ್ನು ಖದೀಮರು ಕದ್ದೊಯ್ದಿರುವುದಲ್ಲದೆ, ಗಿಡಗಂಟಿಗಳು ಬೆಳೆದು ಕೊಂಡು ಶಿಥಿಲಾವಸ್ಥೆಯಲ್ಲಿವೆ.

ಮಂಜೂರೇ ಆಗಿಲ್ಲ: ಮಂಜೂರಾಗಿದ್ದರೂ ಖಾಲಿ ಇರುವ ಮನೆಗಳು 441 ಆದರೆ, ಇನ್ನು ಯಾರಿಗೂ ಮಂಜೂರಾಗದೆ 208 ಮನೆಗಳು ಖಾಲಿ ಬಿದ್ದಿವೆ. ಅಂದಿನ ಕಾಲಕ್ಕೆ ಲಕ್ಷಾಂತರ ರೂ. ವ್ಯಯಿಸಿ ನಿರ್ಮಿಸಿದ ಈ ಮನೆಗಳು ನಿರ್ವಹಣೆ ಯನ್ನೂ ಕಾಣದೆ ಕಂಗಾಲಾಗಿರುವುದು ನಮ್ಮ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಕಾರ್ಯ ವೈಖರಿಗೆ ಕೈಗನ್ನಡಿಯಂತಿದೆ.

ವಾಸ್ತವವಾಗಿ 168 ಹುಡ್ಕೋ ಮನೆಗಳು, 40 ನಿಮ್ಮ ಸ್ವಂತ ಮನೆ ಹೊಂದಿ ಯೋಜನೆಯಡಿ ನಿರ್ಮಿಸಿದ ಮನೆಗಳು ಸೇರಿ ಒಟ್ಟು 208 ಮನೆಗಳನ್ನು ವಾಸ್ತವವಾಗಿ ಯಾರಿಗೂ ಮಂಜೂರು ಮಾಡೇ ಇಲ್ಲ.

ಸಿಐಟಿಬಿಯಂತೆ ನಗರಾಭಿವೃದ್ಧಿ ಕಾಯ್ದೆಯಲ್ಲೂ ಬಡವರಿಗಾಗಿ ವಸತಿ ಯೋಜನೆ ರೂಪಿಸಲು ಅವ ಕಾಶವಿದೆಯಾದರೂ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮನೆ ನಿರ್ಮಿಸುವ ಗೋಜಿಗೇ ಹೋಗಲಿಲ್ಲ.

ನಿವೇಶನಕ್ಕಿರುವಂತೆ ಮನೆಗಳಿಗೂ ಭಾರೀ ಬೇಡಿಕೆ ಇದೆ ಎಂಬುದು ಸಮೀಕ್ಷೆಯಿಂದ ಖಚಿತವಾಗಿದೆ ಯಾದರೂ, ಕೈಗೆಟಕುವ ದರದಲ್ಲಿ ಗುಂಪು ಮನೆ ಗಳನ್ನು ನಿರ್ಮಿಸಬೇಕೆಂಬ (ಅಫೋರ್ಡಬಲ್ ಗ್ರೂಪ್ ಹೌಸಿಂಗ್ ಸ್ಕೀಂ) ಯೋಜನೆಯು ಸರ್ಕಾರದ ಹಂತದಲ್ಲೇ ನೆನೆಗುದಿಗೆ ಬಿದ್ದಿದೆ.

ಕನಿಷ್ಠ ಈ ಯೋಜನೆಗಾದರೂ ಸರ್ಕಾರ ಅನುಮತಿ ನೀಡಿದಲ್ಲಿ ಮೈಸೂರಿನ ವಿಜಯನಗರ 2ನೇ ಹಂತ, ದಟ್ಟಗಳ್ಳಿ, ರಾಮಕೃಷ್ಣನಗರ, ಲಲಿತಾದ್ರಿಪುರಗಳಂ ತಹ ಪ್ರಮುಖ ಸ್ಥಳಗಳಲ್ಲಿರುವ ಮುಡಾ ಜಾಗ ಗಳಲ್ಲಿ 12 ಅಂತಸ್ತಿನ ಗುಂಪು ಮನೆಗಳನ್ನು ನಿರ್ಮಿಸಿ ಆಕಾಂಕ್ಷಿಗಳಿಗೆ ಕೈಗೆಟಕುವ ದರದಲ್ಲಿ ನಿಯಮಾ ನುಸಾರ ಹಂಚಿಕೆ ಮಾಡಬಹುದು.

ಸಿಐಟಿಬಿ ಕಾನೂನು ಜನಪರವಾಗಿದ್ದವು

ಸಿಐಟಿಬಿ ಕಾನೂನು, ಕಾಯ್ದೆಗಳು ಜನಪರವಾಗಿದ್ದುದರಿಂದ ಜನಸಾಮಾನ್ಯರ ಆಶೋತ್ತರಗಳಿಗೆ ತಕ್ಕಂತೆ ಯೋಜನೆಗಳನ್ನು ರೂಪಿಸಲು ಸಾಧ್ಯವಾಗಿತ್ತು ಎಂದು ಸಿಐಟಿಬಿ ಮಾಜಿ ಅಧ್ಯಕ್ಷರಾದ ಮಾಜಿ ವಿಧಾನ ಪರಿಷತ್ ಸದಸ್ಯ ಡಿ. ಮಾದೇಗೌಡ ಅಭಿಪ್ರಾಯ ಪಟ್ಟಿದ್ದಾರೆ. ಅದೇ ಕಾರಣಕ್ಕಾಗಿ 1987-88ರಲ್ಲಿ ನಾನು ನಗರ ವಿಶ್ವಸ್ಥ ಮಂಡಳಿ ಅಧ್ಯಕ್ಷನಾಗಿದ್ದಾಗ ಮೈಸೂರಿನ ಹೆಬ್ಬಾಳು, ಶಾರದಾದೇವಿನಗರ, ರಾಮಕೃಷ್ಣನಗರ, ವಿವೇಕಾನಂದನಗರ, ಅರವಿಂದನಗರ, ಕ್ಯಾತಮಾರನಹಳ್ಳಿ, ಸಾತಗಳ್ಳಿ, ದಟ್ಟಗಳ್ಳಿ, ದೇವನೂರು (ರಾಜೀವ್‍ನಗರ)ಗಳಲ್ಲಿ ವಸತಿ ಯೋಜನೆಗಳಡಿ ಮನೆಗಳನ್ನು ನಿರ್ಮಿಸಿ ನಿರಾಶ್ರಿತರಿಗೆ ಕೊಡಲು ಸಾಧ್ಯವಾಯಿತು ಎಂದು ತಿಳಿಸಿದರು.

ಹುಡ್ಕೋ, ಓವೈಹೆಚ್‍ಎಸ್, ಬ್ಯಾಂಕ್ ನೆರವಿನ ಯೋಜನೆಗಳಡಿ ಎಲ್‍ಐಜಿ, ಎಂಐಜಿ, ಹೆಚ್‍ಐಜಿ ಹಾಗೂ ಇಡಬ್ಲ್ಯೂಎಸ್‍ನ ಸುಮಾರು 7000 ಮನೆಗಳನ್ನು ನನ್ನ ಅವಧಿಯಲ್ಲಿ ನಿರ್ಮಿಸಿ ಹಂಚಿಕೆ ಮಾಡಲಾಗಿತ್ತು. ನಂತರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ವಾದ ನಂತರ ವಸತಿ ಯೋಜನೆ ಆಗಿಲ್ಲ ಎಂದರೆ ಅದಕ್ಕೆ ನಾನೇನನ್ನೂ ಹೇಳಲಾರೆ ಎಂದು ಮಾದೇಗೌಡರು ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು. ‘ಆಶಾಮಂದಿರ’ ಎಂದರೆ ಆಸೆಯಂತೆ ಒಂದು ಮನೆ ಹೊಂದುವುದು. ಅದು ಎಂತಹ ಅದ್ಭುತ ಕಲ್ಪನೆ ಎಂದರೆ ಜನರ ಆಶೋತ್ತರಗಳನ್ನು ಈಡೇರಿಸಲು ಅಂದಿನ ಕಾನೂನು, ಅಧಿಕಾರಿಗಳು ಸ್ಪಂದಿಸುತ್ತಿದ್ದರು. ಜನಪ್ರತಿನಿಧಿಗಳಿಗೂ ಸೇವೆಯ ತುಡಿತವಿತ್ತು. ಈಗಿನ ಕಾಯ್ದೆಗಳು ಅಧಿಕಾರಿಗಳು, ರಾಜಕಾರಣಿಗಳ ಪರವಾಗಿರುವುದರಿಂದ ಜನಪರ ಯೋಜನೆಗಳು ಸಾಕಾರವಾಗುತ್ತಿಲ್ಲವೇನೋ ಎನಿಸುತ್ತದೆ ಎಂದು ‘ಮನೆ ಮಾದೇಗೌಡ’ ಎಂದೇ ಹೆಸರುವಾಸಿಯಾಗಿದ್ದ ಡಿ.ಮಾದೇಗೌಡರು ಮಾರ್ಮಿಕವಾಗಿ ನುಡಿದರು.

ಎಸ್.ಟಿ.ರವಿಕುಮಾರ್

 

 

Translate »