ಬೇರೆ ದೇಶದ ಸಂಶೋಧನೆಗಳನ್ನು ನಕಲು ಮಾಡುವುದೇ ಆಗಿದೆ: ಡಾ.ಎಂ.ಎಸ್.ವಿಶ್ವೇಶ್ವರ ಬೇಸರ
ಮೈಸೂರು, ಮಾ.3(ಎಂಕೆ)- ಕ್ಯಾನ್ಸರ್ ತಡೆಗೆ ಪೂರಕವಾದಂತಹ ಸಂಶೋಧನೆ ಗಳು ದೇಶದಲ್ಲಿ ನಡೆದಿಲ್ಲ. ಬೇರೆ ದೇಶದ ಸಂಶೋಧನೆಗಳನ್ನು ನಕಲು ಮಾಡುವುದೇ ಆಗಿದೆ. ನಕಲು ಮಾಡಿದ್ದನ್ನೂ ಮಾರಿ ಕೊಳ್ಳುವವರಿಂದಾಗಿ ಕ್ಯಾನ್ಸರ್ ಪ್ರಕರಣ ಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂದು ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಮುಖ್ಯ ವಿಕಿರಣ ತಜ್ಞ ಹಾಗೂ ಆಂಕಾಲಜಿಸ್ಟ್ ಡಾ.ಎಂ.ಎಸ್. ವಿಶ್ವೇಶ್ವರ ಬೇಸರ ವ್ಯಕ್ತಪಡಿಸಿದರು.
ಮಾನಸಗಂಗೋತ್ರಿ ವಿಜ್ಞಾನ ಭವನ ದಲ್ಲಿ ಮೈಸೂರು ವಿವಿ, ಸಪ್ನ ಬುಕ್‍ಹೌಸ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮೈಸೂರು ವಿವಿ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಸುತ್ತೂರು ಎಸ್.ಮಾಲಿನಿ ಅವರು ರಚಿಸಿದ `ಕ್ಯಾನ್ಸರ್-ಬಹುವಿಧದ ಅಸ್ವಸ್ಥತೆ’ ಪುಸ್ತಕ ಬಿಡುಗಡೆ ಸಮಾ ರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡು ವಲ್ಲಿ ತೋರಿಸುತ್ತಿರುವ ಆಸಕ್ತಿಯನ್ನು ಹೊಸ ಹೊಸ ಸಂಶೋಧನೆಗಳಿಗೆ ನೀಡುತ್ತಿಲ್ಲ. ಅನು ದಾನ ಮತ್ತು ಆಸಕ್ತಿಯ ಕೊರತೆಯಿಂದಾಗಿ ಮಾರಕ ಕಾಯಿಲೆಗಳಿಗೆ ಜನರು ಬಲಿಯಾಗು ತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಸವಾಲಿನ ಕೆಲಸ: ನಮ್ಮಲ್ಲಿ ವಿದೇಶಿ ಸಂಶೋಧನೆಗಳನ್ನು ನಕಲು ಮಾಡಿ ಔಷಧ ಗಳನ್ನು ತಯಾರಿಸುತ್ತಿದ್ದಾರೆ. ನಮ್ಮಲ್ಲೇ ಗುಣ ಮಟ್ಟದ ಸಂಶೋಧನೆಗಳಾದರೆ ಕ್ಯಾನ್ಸರ್ ಚಿಕಿತ್ಸೆಗೆ ಉತ್ತಮ ಔಷಧಗಳನ್ನು ಕಂಡು ಹಿಡಿಯಬಹುದು. ಆದರೆ, ಸಂಶೋಧನೆಗೆ ಬೇಕಾದ ಅನುದಾನವಿಲ್ಲದೇ ಕ್ಯಾನ್ಸರ್‍ಗೆ ಔಷಧ ಕಂಡುಹಿಡಿಯುವುದು ಸವಾಲಿನ ಕೆಲಸವಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಪರಿಣತಿ ಪಡೆದ ಕೆಲ ಸಂಶೋಧಕರಿಂದ ಒಂದೋ ಎರಡೋ ಔಷಧಗಳ ಸಂಶೋ ಧನೆ ನಡೆಯುತ್ತಿದೆ ಎಂದರು.
ಕ್ಯಾನ್ಸರ್ ಟೈಫಾಯಿಡ್, ಮಲೇರಿಯಾದಂ ತಲ್ಲ. ಅದೊಂದು ಬಹುವಿಧದ ಅಸ್ವಸ್ಥತೆ. ಕ್ಯಾನ್ಸರ್ ಇರುವವರಿಗೆ ಏಕಕಾಲದಲ್ಲಿ ಹಲವು ಬಗೆಯ ಸಮಸ್ಯೆಗಳು ಕಾಡುತ್ತವೆ ಎಂದು ಹೇಳಿದ ಡಾ.ವಿಶ್ವೇಶ್ವರ, ಪರಿಸರ ಮತ್ತು ಹಾರ್ಮೋನ್‍ಗಳಿಂದ ಹಲವು ಬಗೆಯ ಕ್ಯಾನ್ಸರ್ ಕಾಯಿಲೆಗಳು ಯಾವ ರೀತಿ ಹರಡು ತ್ತವೆ? ಕ್ಯಾನ್ಸರ್‍ಗೆ ಮೂಲ ಕಾರಣವೇನು? ಮುನ್ನೆಚ್ಚರಿಕಾ ಕ್ರಮಗಳೇನು? ಎಂಬ ಬಗ್ಗೆ ಸುತ್ತೂರು ಎಸ್.ಮಾಲಿನಿ ತಮ್ಮ ಪುಸ್ತಕ ದಲ್ಲಿ ಸಮಗ್ರವಾಗಿ ಬರೆದಿದ್ದಾರೆ. ವೈದ್ಯಕೀಯ ಕ್ಷೇತ್ರದ ಸಂಶೋಧನೆಗಳು ಇಂಗ್ಲಿಷ್‍ನಲ್ಲಿ ನಡೆಯುವುದರಿಂದ ಈ ಪುಸ್ತಕವನ್ನು ಇಂಗ್ಲಿಷ್‍ಗೆ ಭಾಷಾಂತರಿಸಿದರೆ ಹೆಚ್ಚಿನ ಜನರಿಗೆ ಅನು ಕೂಲವಾಗುತ್ತದೆ ಎಂದು ಸಲಹೆ ನೀಡಿದರು.
ಪುಸ್ತಕ ಬಿಡುಗಡೆ ಮಾಡಿದ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತ ನಾಡಿ, ಕ್ಯಾನ್ಸರ್‍ನಂತಹ ಮಾರಕ ಕಾಯಿಲೆ ಗಳಿಂದಾಗಿ ಸಮಾಜದಲ್ಲಿ ಆತಂಕದ ವಾತಾ ವರಣ ನಿರ್ಮಾಣವಾಗಿದೆ. ಸರ್ಕಾರ ಸಂಶೋ ಧನೆಗಳು, ಆಹಾರ ಪದ್ಧತಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ರೋಗಮುಕ್ತ ಸಮಾಜ ನಿರ್ಮಾ ಣಕ್ಕೆ ಒತ್ತು ನೀಡಬೇಕು ಎಂದು ಹೇಳಿದರು.
ಬಳಿಕ ಪ್ರೊ.ಹೆಚ್.ಎ.ರಂಗನಾಥ್, ಪ್ರೊ.ಎಸ್.ಎನ್.ಹೆಗಡೆ, ಪ್ರೊ.ವಿ.ಎ.ವಿಜಯನ್, ಪ್ರೊ.ಪ್ರಕಾಶ್ ಆರ್.ನಾಯಕ್, ಪ್ರೊ.ಎಸ್. ಆರ್.ರಮೇಶ್, ಪ್ರೊ.ವಿ.ವಾಸುದೇವ್, ಪ್ರೊ. ಹೆಚ್.ಎನ್.ಯಜುರ್ವೇದಿ, ಪ್ರೊ.ಎನ್.ಬಿ. ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಪ್ರಾಧ್ಯಾಪಕಿ ಸುತ್ತೂರು ಎಸ್.ಮಾಲಿನಿ ಉಪಸ್ಥಿತರಿದ್ದರು.