ಕಾವೇರಿ ನೀರು ವಿಚಾರ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕಣ್ಣೀರು
ಹಾಸನ

ಕಾವೇರಿ ನೀರು ವಿಚಾರ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕಣ್ಣೀರು

September 3, 2018

ಹೊಳೆನರಸೀಪುರ: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಮಾಜಿ ಪ್ರಧಾನಿ ನಿತ್ಯ ಕಣ್ಣೀರು ಹಾಕುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಬೇಸರ ವ್ಯಕ್ತಪಡಿಸಿದರು.

ಅರಕಲಗೂಡು ವಿಧಾನಸಭಾ ಕ್ಷೇತ್ರದ ತಾಲೂಕಿನ ಅರೇಹಳ್ಳಿಯಲ್ಲಿ ಹಳ್ಳಿಮೈಸೂರು ಹೋಬಳಿಯ ಗುಲಗಂಜಹಳ್ಳಿ, ಕಡವಿನ ಬಾಚನಹಳ್ಳಿ, ದೇವರಮುದ್ದನಹಳ್ಳಿ, ನಗರ್ತಿ, ಶ್ರವಣೂರು, ಕೋಡಿಹಳ್ಳಿ ಸೇರಿದಂತೆ 8 ಗ್ರಾಮಗಳಿಗೆ 820.32 ಲಕ್ಷ ರೂ. ವೆಚ್ಚದಲ್ಲಿ ಹೇಮಾವತಿ ನದಿಯಿಂದ ನೀರು ಪೂರೈಸುವ ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಕಾವೇರಿ ನಿರ್ವಹಣಾ ಮಂಡಳಿ ರಚನೆ ಯಾದರೆ ರೈತರ ಪಾಲಿಗೆ ಮತ್ತಷ್ಟು ಕಷ್ಟವಾಗಲಿದೆ. ನಿರ್ವಹಣಾ ಮಂಡಳಿಯ ಆದೇಶದ ಮೇರೆಗೆ ರೈತರು ತಮ್ಮ ಜಮೀನಿನಲ್ಲಿ ಬೆಳೆ ಬೆಳೆಯಬೇಕಾಗುತ್ತದೆ ಎಂದು ವಿಷಾದಿಸಿದರು.

400 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ವಾಗಿ ಗುಲಗಂಜಿಯ ತನಕ ಕಾಲುವೆ ಮೂಲಕ ನೀರಾವರಿ ಯೋಜನೆ ಮಾಡಲಾಗುವುದು ಮತ್ತು ಹಳ್ಳಿಮೈಸೂರಿನ ಸುಮಾರು 55 ಹಳ್ಳಿಗಳಿಗೆ ಈ ಯೋಜನೆ ಲಾಭ ದೊರೆಯಲಿದೆ. ಈ ನಿಟ್ಟಿನಲ್ಲಿ ಶಾಸಕ ಎ.ಟಿ.ರಾಮ ಸ್ವಾಮಿ ಮುಖ್ಯಮಂತ್ರಿಗೆ ನಾಳೆ ಮನವಿ ಸಲ್ಲಿಸಲಿದ್ದಾರೆ. 10 ವರ್ಷದಿಂದ ದೊಡ್ಡ ಹಳ್ಳಿ ಮತ್ತು ಗುಲಗಂಜಿ ಹಳ್ಳಿಯ ಭಾಗದಲ್ಲಿ ಭತ್ತ ಬೆಳೆಯಲು ಪ್ರಾರಂಭಿಸಿದ್ದು, ಕಾಲುವೆ ನಿರ್ಮಾಣವಾದರೆ ರೈತರಿಗೆ ಇನ್ನಷ್ಟು ಅನುಕೂಲವಾಗಲಿದೆ. ದೇವೇಗೌಡರು ಮತ್ತು ನಾನು ರಾಜಕೀಯವಾಗಿ ಇಷ್ಟು ಮಟ್ಟಕ್ಕೆ ಬೆಳೆಯಲು ಹಳ್ಳಿ ಮೈಸೂರು ಭಾಗದವರು ಕೂಡ ಕಾರಣಕರ್ತರು ಎಂಬು ದನ್ನು ನಾನು ಮರೆಯುವುದಿಲ್ಲ ಎಂದರು.

ಇಂದು ಮುಖ್ಯಮಂತ್ರಿ ಹೆಚ್‍ಡಿಕೆ ನೇತೃತ್ವದ ಸಮ್ಮಿಶ್ರ ಸರ್ಕಾರ 49 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದೆ. ಡಿ.ದೇವರಾಜು ಅರಸು ಬಿಟ್ಟರೇ ರೈತರ ನೆರವಿಗೆ ಬಂದಿರೋದು ಹೆಚ್.ಡಿ.ಕುಮಾರ ಸ್ವಾಮಿ ಮಾತ್ರ ಎಂದು ಹೊಗಳಿದರು.

ರೈತರಿಗೆ ಇನ್ನೂ ಅನೇಕ ಯೋಜನೆ ರೂಪಿಸಲಾಗುತ್ತಿದ್ದು, ಮೀಟರ್ ಬಡ್ಡಿ ದಂಧೆ ತಪ್ಪಿಸಲು ಸರ್ಕಾರದಿಂದಲೇ ಸಣ್ಣ-ಪುಟ್ಟ ಬದಿ ವ್ಯಾಪಾರಸ್ಥರಿಗೆ ಪ್ರತಿನಿತ್ಯ ಹಣ-ಕಾಸಿನ ವ್ಯವಸ್ಥೆ ಮಾಡುವಂತಹ ವಿನೂತನ ಯೋಜನೆ ಜಾರಿಗೊಳಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಕೆಲವೇ ದಿನದಲ್ಲಿ ಅದನ್ನು ಅನುಷ್ಠಾನ ಗೊಳಿಸಲಾಗುವುದು ಎಂದು ತಿಳಿಸಿದರು.

ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆಯಾಗಿದೆ. ಇದು 8 ಕೋಟಿ ರೂ. ವೆಚ್ಚದ ಯೋಜನೆಯಾಗಿದ್ದು, ಇನ್ನು 3 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಶ್ರವಣೂರು ಭಾಗದ 8 ಗ್ರಾಮದ ಹಳ್ಳಿಗಳಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು. ಈ ಸಂದರ್ಭ ದಲ್ಲಿ ಪಕ್ಷದ ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.

Translate »