ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಷರೀಫ್ ನಿಧನ
ಮೈಸೂರು

ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಷರೀಫ್ ನಿಧನ

November 26, 2018

ಬೆಂಗಳೂರು: ಹಿರಿಯ ನಟ ಹಾಗೂ ಮಾಜಿ ಕೇಂದ್ರ ಸಚಿವ ಅಂಬರೀಶ್ ಬೆನ್ನಲ್ಲೇ ಮತ್ತೋರ್ವ ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಸಿ.ಕೆ.ಜಾಫರ್ ಷರೀಫ್ ವಿಧಿವಶರಾಗಿದ್ದಾರೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 85 ವರ್ಷದ ಷರೀಫ್ ಅವರನ್ನು ಕಳೆದ ಶುಕ್ರವಾರ ಕನ್ನಿಂಗ್ ಹ್ಯಾಂ ರಸ್ತೆಯ ಫೋರ್ಟೀಸ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ನಿಧನರಾಗಿದ್ದಾರೆ. ಅವರು ಉರ್ದುವಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬ್ದುಲ್ ಕಲಾಂ ಆಜಾದ್ ನೆನಪಿನಾರ್ಥ `ಇಂಡಿಯಾ ವಿನ್ಸ್ ಫ್ರೀಡಂ’ ಪುಸ್ತಕವನ್ನು ಬರೆದಿದ್ದು, ಇದೇ ತಿಂಗಳ 28ರಂದು ಇದರ ಬಿಡುಗಡೆಗೆ ಸಿದ್ಧತೆ ನಡೆಸಿದ್ದರು.

ಶುಕ್ರವಾರ ನಮಾಜ್‍ಗೆ ತೆರಳಲು ಸಿದ್ಧ ಗೊಳ್ಳುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದಿದ್ದರು. ಜಾಫರ್ ಷರೀಫ್ 1933, ನವಂಬರ್ 3ರಂದು ಚಿತ್ರದುರ್ಗದ ಚಳ್ಕೆರೆಯಲ್ಲಿ ಜನಿಸಿದ್ದರು. ಬಡತನದಲ್ಲಿ ಬೆಳೆದ ಷರೀಫ್‍ರು, 10ನೇ ವಯಸ್ಸಿನಲ್ಲಿಯೇ `ಕ್ವಿಟ್ ಇಂಡಿಯಾ’ ಚಳುವಳಿಯಲ್ಲಿ ಪಾಲ್ಗೊಂಡಿದ್ದರು. ನಂತರ ಎಸ್.ನಿಜಲಿಂಗಪ್ಪರ ಕಾಲದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಕಾಂಗ್ರೆಸ್ ವಿಭಜನೆಯಾದ ಸಂದರ್ಭದಲ್ಲಿ ಇಂದಿರಾ ಗಾಂಧಿಯವರೊಟ್ಟಿಗೆ ಗುರುತಿಸಿಕೊಂಡರು. 1971ರಲ್ಲಿ ಮೊದಲ ಬಾರಿಗೆ ಕನಕಪುರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ 1977ರಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಸ್ಥಳಾಂತರಗೊಂಡು, 2ನೇ ಬಾರಿ ಲೋಕಸಭೆ ಪ್ರವೇಶಿಸಿದರು. ಹೀಗೆ 1980, 1984, 1988, 1989, 1991, 1998 ಹಾಗೂ 1999ರಲ್ಲಿ ಲೋಕಸಭೆಗೆ ಆಯ್ಕೆಯಾಗುವುದರೊಂದಿಗೆ 8 ಬಾರಿ ಸಂಸದರಾಗಿದ್ದರು. ಆ ಮೂಲಕ ಸೋಲಿಲ್ಲದ ಸರದಾರನೆಂದೇ ಕರೆಯಲ್ಪಟ್ಟಿದ್ದರು.

ಈ ಮಧ್ಯೆ 1980ರಿಂದ 84ರವರೆಗೆ ರೈಲ್ವೆ ಖಾತೆ ರಾಜ್ಯ ಸಚಿವರಾಗಿ, 1988-89ರಲ್ಲಿ ಕಲ್ಲಿದ್ದಲು ರಾಜ್ಯ ಖಾತೆ ಸಚಿವರಾಗಿ, 1989-90ರಲ್ಲಿ ಸಾರ್ವಜನಿಕ ಉದ್ಯಮಗಳ ಸಮಿತಿ ಸೇರಿದಂತೆ ಹಲವು ಸಮಿತಿಗಳ ಸದಸ್ಯರಾಗಿದ್ದರು. 1991ರಿಂದ 95ರವರೆಗೆ ಅಂದಿನ ಪ್ರಧಾನಮಂತ್ರಿ ಪಿ.ವಿ.ನರಸಿಂಹರಾವ್ ಸಂಪುಟದಲ್ಲಿ ರೈಲ್ವೆ ಸಚಿವರಾಗಿದ್ದರು. ಈ ವೇಳೆ ರಾಜ್ಯಕ್ಕೆ ಮಹತ್ತರ ಕೊಡುಗೆ ನೀಡಿದರು. ಮೈಸೂರು ಮತ್ತು ಬೆಂಗಳೂರು ನಡುವೆ ಚಾಮುಂಡಿ ಮತ್ತು ಟಿಪ್ಪು ಎಕ್ಸ್‍ಪ್ರೆಸ್ ಆರಂಭಿಸಿದ್ದೇ ಇವರು. ಬೆಂಗಳೂರಿನಲ್ಲಿ ರೈಲ್ವೆ ಗಾಲಿ ಮತ್ತು ಅಚ್ಚು ಕಾರ್ಖಾನೆ ಸ್ಥಾಪನೆಯಾಗಲು ಷರೀಫ್‍ರೇ ಕಾರಣ. ಇದರೊಂದಿಗೆ ದೇಶಾದ್ಯಂತ ಗೇಜ್ ಪರಿವರ್ತನೆಯಲ್ಲಿ ಕ್ರಾಂತಿಯನ್ನೇ ಮಾಡಿದರು.

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜಾಫರ್ ಷರೀಫ್ 2 ಬಾರಿ ಸೋಲು ಅನುಭವಿಸಿದರು. ತದ ನಂತರ ಚುನಾವಣಾ ರಾಜಕೀಯ ನೇಪತ್ಯಕ್ಕೆ ಸರಿಯುವಂತಾಗಿತ್ತು. ಷರೀಫ್‍ರ ನಿಧನಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಇತರರು ಅತೀವ ದುಃಖ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಖಾಸಗಿ ಆಸ್ಪತ್ರೆಗೆ ತೆರಳಿ ಷರೀಫ್‍ರ ಅಂತಿಮ ದರ್ಶನ ಮಾಡಿದರು. ಷರೀಫ್ ಅವರು, ತಮ್ಮ ಕುಟುಂಬದ ಮೂವರನ್ನು ಕಳೆದುಕೊಂಡಿದ್ದರು. 1999ರಲ್ಲಿ ಅವರ ಕಿರಿಯ ಮಗ ಮೃತಪಟ್ಟರೆ, 2008ರಲ್ಲಿ ಪತ್ನಿ ಹಾಗೂ 2009ರಲ್ಲಿ ಹಿರಿಯ ಪುತ್ರನನ್ನು ಕಳೆದುಕೊಂಡಿದ್ದರು. ಇದರಿಂದಲೂ ಅವರು ಮಾನಸಿಕವಾಗಿ ಜರ್ಝರಿತಕ್ಕೊಳಗಾಗಿದ್ದರು.

Translate »