ಆನೆ ದಂತ ಮಾರಾಟ ಮಾಡುತ್ತಿದ್ದ ಕೇರಳದ ಇಬ್ಬರು ಸೇರಿದಂತೆ ನಾಲ್ವರ ಬಂಧನ
ಮೈಸೂರು

ಆನೆ ದಂತ ಮಾರಾಟ ಮಾಡುತ್ತಿದ್ದ ಕೇರಳದ ಇಬ್ಬರು ಸೇರಿದಂತೆ ನಾಲ್ವರ ಬಂಧನ

November 3, 2020

25 ಕೆಜಿಯ 8 ದಂತದ ತುಂಡು ವಶ
ಮೈಸೂರು,ನ.2(ಎಂಟಿವೈ)- ಆನೆ ದಂತ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರು ಸೇರಿದಂತೆ ನಾಲ್ವರನ್ನು ಮೈಸೂರು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಂಧಿಸಿ, 25 ಕೆಜಿ ತೂಕದ 8 ದಂತದ ತುಂಡನ್ನು ವಶಪಡಿಸಿಕೊಂಡಿದ್ದಾರೆ.
ಆನೆ ದಂತವನ್ನು ಮಾರಾಟ ಮಾಡಲು ಯತ್ನಿಸು ತ್ತಿರುವ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಕಳೆದ ರಾತ್ರಿ ಬನ್ನಿಮಂಟಪದ ಹೈವೇ ವೃತ್ತದ ಬಳಿಯಿರುವ ರೈಲ್ವೆ ಕೆಳ ಸೇತುವೆ ಬಳಿ ಪರಿ ಶೀಲಿಸಿದಾಗ ನಾಲ್ವರು ದಂತ ಮಾರಾಟ ಮಾಡಲು ಹೊಂಚು ಹಾಕುತ್ತಿರುವುದು ಖಚಿತವಾಗಿದೆ. ಕೂಡಲೇ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಆರೋಪಿಗಳನ್ನು ಸುತ್ತುವರೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಕೇರಳದ ತ್ರಿವೆಂಡ್ರಮ್ ನಿವಾಸಿಗಳಾದ ಪ್ರೆಸ್ಟಿನ್ ಸಿಲ್ವಾ, ಜಯಪ್ರಕಾಶ್, ಮೈಸೂರಿನ ಉದಯಗಿರಿ ನಿವಾಸಿಗಳಾದ ಮೋಹನ್ ಹಾಗೂ ರಮೇಶ್ ಎಂದು ಗುರುತಿಸಲಾಗಿದೆ. ಬಂಧಿತ ಪ್ರೆಸ್ಟಿನ್ ಸಿಲ್ವಾ ಅರಣ್ಯ ಅಪರಾಧ ಗಳಲ್ಲಿ ತೊಡಗಿದ್ದು, ದಂತ ಮಾರಾಟ ಮಾಡುವಲ್ಲಿ ಮಧ್ಯವರ್ತಿ ಯಾಗಿ ಕೆಲಸ ಮಾಡುತ್ತಿದ್ದಾಗ ದೆಹಲಿ ಹಾಗೂ ಕೇರಳದಲ್ಲಿ ಬಂಧಿತನಾಗಿದ್ದ ಎಂದು ತಿಳಿದು ಬಂದಿದೆ. ಬಂಧಿತರಿಂದ 25 ಕೆಜಿ ತೂಕವಿರುವ 8 ದಂತದ ತುಂಡನ್ನು ವಶಪಡಿಸಿ ಕೊಳ್ಳಲಾಗಿದೆ. ಅಲ್ಲದೆ ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಒಂದು ಸ್ಕೂಟರ್(ಕೆಎ.09, ಹೆಚ್‍ವೈ. 5438)ವಶಪಡಿಸಿ ಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ದಂತಗಳಲ್ಲಿ 6 ತುಂಡು ಹಳೆ ಕಾಲದ್ದಾಗಿದ್ದು, ಎರಡು ತುಂಡು ಹತ್ತು ವರ್ಷಗಳ ಹಿಂದಿನದ್ದಿರಬಹುದೆಂದು ಅಂದಾಜಿಸಲಾಗಿದೆ. ಆರೋಪಿಗಳಿಗೆ ದಂತ ಹೇಗೆ ದೊರೆಯಿತು ಎಂದು ತನಿಖೆ ನಡೆಸಲಾಗುತ್ತಿದೆ.

ಎಪಿಸಿಸಿಎಫ್ ಜಗತ್‍ರಾಮ್, ಅರಣ್ಯ ಸಂಚಾರಿ ದಳದ ಡಿಸಿಎಫ್ ಎ.ಟಿ.ಪೂವಯ್ಯ, ಎಸಿಎಫ್ ಸುವರ್ಣ ಮಾರ್ಗದರ್ಶನ ದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರ್‍ಎಫ್‍ಓ ವಿವೇಕ್, ಡಿಆರ್‍ಎಫ್‍ಗಳಾದ ಮೋಹನ್, ಲಕ್ಷ್ಮೀಶ್, ಸುಂದರ್, ಪ್ರಮೋದ್, ತುಷಾರಾ, ಸ್ನೇಹ, ಮೇಘನ, ಸಿಬ್ಬಂದಿ ಚನ್ನ ಬಸವಯ್ಯ, ಗೋವಿಂದ, ರವಿನಂದನ್, ರವಿಕುಮಾರ್, ಮಹಂತೇಶ್, ಚಾಲಕರಾದ ಮಧು, ಪುಟ್ಟಸ್ವಾಮಿ ಹಾಗೂ ಇತರರು ಪಾಲ್ಗೊಂಡಿದ್ದರು.

 

 

Translate »