ನಡುಬೆಟ್ಟ (ಊಟಿ): ವಾಹನವೊಂದನ್ನು ಓವರ್‍ಟೇಕ್ ಮಾಡುವಾಗ ಪ್ರವಾಸಿ ಬಸ್ಸೊಂದು ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಬೆಂಗಳೂರಿನ ನಾಲ್ವರು ಸಾವನ್ನಪ್ಪಿ 30 ಮಂದಿ ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ಊಟಿಯ ಬಳಿ ಸಂಭವಿಸಿದೆ.
ಬೆಂಗಳೂರಿನ ವಿವಿಧ ಬಡಾವಣೆ ಹಾಗೂ ದೊಡ್ಡಬಳ್ಳಾಪುರದ ನಿವಾಸಿಗಳು ಸೇರಿದಂತೆ ಮಹಿಳಾ ಸ್ವ-ಸಹಾಯ ಸಂಘಟನೆಯೊಂದರ ಸದಸ್ಯರಿದ್ದ ಪ್ರವಾಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ 40 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದ್ದು, ಮೃತರನ್ನು ಬೆಂಗಳೂರಿನ ಕೃಷ್ಣಪ್ಪ ಲೇಔಟ್‍ನ ನಿವಾಸಿ ನಾಗರಾಜು ಎಂಬುವರ ಪತ್ನಿ ಲಕ್ಷ್ಮೀ (38), ದೊಡ್ಡಬಳ್ಳಾಪುರದ ನಿವಾಸಿ ರಮೇಶ್ ಎಂಬುವರ ಪತ್ನಿ ಸುಧಾ (37), ದೊಡ್ಡಬಳ್ಳಾಪುರದ ಸಿದ್ದಳ್ಳಿ ಗ್ರಾಮದ ರಾಜನಾಯಕ ಎಂಬುವರ ಮಗ ರವಿಕುಮಾರ ನಾಯಕ (28) ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿ ಸಂಪತ್ ಎಂಬುವರ ಮಗ ಗಣೇಶ್ (18) ಎಂದು ಗುರುತಿಸಲಾಗಿದೆ.
ಸ್ವ-ಸಹಾಯ ಸಂಘವೊಂದರ 30 ಮಂದಿ ಮಹಿಳೆಯರು ಮೈಸೂರು, ಊಟಿ ಹಾಗೂ ಮಡಿಕೇರಿಗೆ 2 ದಿನದ ಪ್ರವಾಸಕ್ಕಾಗಿ ಶನಿವಾರ ಮುಂಜಾನೆ 3 ಗಂಟೆಗೆ ಬೆಂಗಳೂರಿನಿಂದ ಖಾಸಗಿ ಬಸ್‍ನಲ್ಲಿ (ಕೆಎ-51, ಸಿ-5415) ಪ್ರಯಾಣ ಆರಂಭಿಸಿದ್ದರು. ಮೈಸೂರು ಮಾರ್ಗವಾಗಿ ಊಟಿಗೆ ತೆರಳಿದ್ದರು. ಅಲ್ಲಿನ ಬಟಾನಿಕಲ್ ಗಾರ್ಡನ್, ದೊಡ್ಡ ಬೆಟ್ಟ, ರೋಸ್ ಗಾರ್ಡನ್, ಬೋಟ್ ಹೌಸ್ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸಂಜೆ 6.15ಕ್ಕೆ ಊಟಿಯಿಂದ ಮೈಸೂರಿನತ್ತ ಪ್ರಯಾಣ ಬೆಳೆಸಿದ್ದರು.
ಈ ವೇಳೆ ನಡುಬೆಟ್ಟದಿಂದ ಗೂಡಲೂರು ನಡುವೆ ಇರುವ ಫಾಗ್ ಹಿಲ್ಸ್ ಎಂಬ ಸ್ಥಳದಲ್ಲಿ ಕಿರಿದಾದ ರಸ್ತೆ ಇದ್ದು, ಮುಂದೆ ಸಾಗುತ್ತಿದ್ದ ಟೆಂಪೋವೊಂದನ್ನು ಈ ಪ್ರವಾಸಿ ಬಸ್ ಓವರ್‍ಟೇಕ್ ಮಾಡಲು ಮುಂದಾಗಿದೆ. ಕೆಲವೇ ಅಂತರದಲ್ಲಿ ಕಡಿದಾದ (ಹೇರ್‍ಪಿನ್ ಬೆಂಡ್) ತಿರುವು ಎದುರಾಗಿದೆ. ಈ ವೇಳೆ ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ಬಸ್ ಚಾಲಕ ಕಡಿದಾದ ತಿರುವನ್ನು ಗಮನಿಸದೇ ನೇರವಾಗಿ ಚಾಲನೆ ಮಾಡಿದ್ದಾನೆ. ಇದರಿಂದ ತಡೆಗೋಡೆ ಭೇದಿಸಿದ ಬಸ್ಸು 40 ಅಡಿ ಆಳದ ಪ್ರಪಾತಕ್ಕೆ ಉರುಳಿ ಕೆಳಗಿದ್ದ ಮತ್ತೊಂದು ರಸ್ತೆಯ ಮೇಲೆ ಬಿದ್ದಿದೆ. ಹತ್ತಾರು ಸುತ್ತು ಉರುಳಿದ ಹಿನ್ನೆಲೆಯಲ್ಲಿ ಬಸ್ಸು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಲ್ಲಿಂದ ಕೆಳಗಿದ್ದ ಡಾಂಬರ್ ರಸ್ತೆಗೆ ರಭಸವಾಗಿ ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಬಸ್‍ನ ಅಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಟ್ಟದ ಮೇಲಿನ ರಸ್ತೆಯಿಂದ ಉರುಳಿ ಮತ್ತೊಂದು ರಸ್ತೆಗೆ ಬಸ್ಸು ಅಡ್ಡಲಾಗಿ ಬಿದ್ದ ಪರಿಣಾಮ ಮೈಸೂರು-ಊಟಿ ನಡುವಿನ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ನಡುಬೆಟ್ಟ ಪೊಲೀಸರು ಆಗಮಿಸಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಬಸ್ಸನ್ನು ಬದಿಗೆ ಸರಿಸಿ ಉಂಟಾಗಿದ್ದ ಟ್ರಾಫಿಕ್ ಜಾಮ್ ಅನ್ನು ಸರಿಪಡಿಸಿದರು.
ಬಸ್‍ನಲ್ಲಿ ಸಿಲುಕಿದ್ದ 28 ಮಂದಿ ಮಹಿಳೆಯರು, ಇಬ್ಬರು ಮಕ್ಕಳನ್ನು ಸ್ಥಳೀಯರ ನೆರವಿನೊಂದಿಗೆ ನಡುಬೆಟ್ಟ ಪೊಲೀಸರು ಗೂಡಲೂರಿಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಮೈಸೂರಿಗೆ ಸಾಗಿಸಿದರು. ಅದೃಷ್ಟವಶಾತ್ ಕೆಳಗಿನ ರಸ್ತೆಯಲ್ಲಿ ಯಾವುದೇ ವಾಹನಗಳು ಬರದೇ ಇದ್ದ ಹಿನ್ನೆಲೆಯಲ್ಲಿ ಮತ್ತೊಂದು ದೊಡ್ಡ ದುರಂತ ತಪ್ಪಿದಂತಾಗಿದೆ. ಒಂದು ವೇಳೆ ಆ ರಸ್ತೆಯಲ್ಲಿ ಯಾವುದಾದರೂ ವಾಹನ ಬಂದಿದ್ದರೆ, ಅದರ ಮೇಲೆ ಬಸ್ ಬಿದ್ದು ಮತ್ತಷ್ಟು ಹಾನಿಯಾಗುವ ಸಾಧ್ಯತೆ ಇತ್ತು.
ಕೆ.ಆರ್.ಆಸ್ಪತ್ರೆಯಲ್ಲಿ: ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಭಾನುವಾರ ಮುಂಜಾನೆ 1 ಗಂಟೆಗೆ ಅಪಘಾತದಿಂದ ಗಾಯಗೊಂಡಿದ್ದ 18 ಮಹಿಳೆಯರು, ಇಬ್ಬರು ಮಕ್ಕಳು, ಇಬ್ಬರು ಪುರುಷರು ಆಗಮಿಸಿ ಚಿಕಿತ್ಸೆ ಪಡೆದಿದ್ದಾರೆ. ಗಾಯಾಳುಗಳಲ್ಲಿ ರವಿ ಮತ್ತು ಮಂಜು ಒಳ ರೋಗಿಗಳಾಗಿ ದಾಖಲಾಗಿದ್ದರೆ, ಉಳಿದವರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ಮುಂಜಾನೆಯೇ ಬೆಂಗಳೂರಿಗೆ ತೆರಳಿದ್ದಾರೆ.
ಘಟನಾ ಸ್ಥಳಕ್ಕೆ ಊಟಿಯ ಎಡಿಎಸ್‍ಪಿ ಗೋಪಿ, ನಡುಬೆಟ್ಟದ ಡಿಎಸ್‍ಪಿ ರವಿಶಂಕರ್, ಮುಖ್ಯ ಪೇದೆ ವಿನ್ಸೆಂಟ್ ಸೇರಿದಂತೆ ಇನ್ನಿತರರು ಭೇಟಿ ನೀಡಿ ಗಾಯಾಳುಗಳಿಗೆ ನೆರವಾದರು. ಬಸ್ ಚಾಲಕ ಮಧುಕುಮಾರ್‍ನನ್ನು ನಡುಬೆಟ್ಟ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ನಡುಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ದೇಹಗಳನ್ನು ಗೂಡಲೂರಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಭಾನುವಾರ ಸಂಜೆ ವಾರಸುದಾರರಿಗೆ ಹಸ್ತಾಂತರ ಮಾಡಲಾಯಿತು.
ಮಾನವೀಯತೆ ಮೆರೆದ ಅರಣ್ಯ ಸಿಬ್ಬಂದಿ
ನಡುಬೆಟ್ಟದಲ್ಲಿ ಬೆಂಗಳೂರಿನ ಖಾಸಗಿ ಬಸ್ ಅಪಘಾತಕ್ಕೀಡಾದ ಸುದ್ದಿ ತಿಳಿದು ಬಂಡೀಪುರ ಅರಣ್ಯ ಪ್ರದೇಶದ ಸಿಬ್ಬಂದಿಗಳು ಗಾಯಾಳುಗಳಿಗೆ ನೆರವು ನೀಡಲು ಸಿದ್ಧರಾಗಿದ್ದರು. ಮಧುಮಲೈ ಮೂಲಕ ರಾತ್ರಿ 11.30ಕ್ಕೆ ಗಾಯಾಳುಗಳನ್ನು ಹೊತ್ತು ತಂದ 13 ಆಂಬುಲೆನ್ಸ್‍ಗಳನ್ನು ಬಾರ್ಡರ್ ಗೇಟ್ ತೆರೆದು ಮೈಸೂರಿನತ್ತ ಬರಲು ಅವಕಾಶ ಮಾಡಿಕೊಟ್ಟರು. ಸಿಎಫ್ ಅಂಬಾಡಿ ಮಾಧವ್ ಅವರ ಸೂಚನೆ ಮೇರೆಗೆ ಬಂಡೀಪುರದ ಅರಣ್ಯ ಇಲಾಖೆ ಸಿಬ್ಬಂದಿಗಳು ಮೇಲುಕಾಮನಹಳ್ಳಿ ಮತ್ತು ಮಧುಮಲೈ ಬಾರ್ಡರ್ ಗೇಟ್ ಎರಡರಲ್ಲಿಯೂ ಸಿದ್ಧರಾಗಿ ಆಂಬುಲೆನ್ಸ್‍ಗಳಿಗೆ ಯಾವುದೇ ಅಡಚಣೆ ಉಂಟಾಗದಂತೆ ಕ್ರಮ ಕೈಗೊಂಡು ಮಾನವೀಯತೆ ಮೆರೆದರು.