ಹೆಚ್.ಡಿ.ಕೋಟೆ ಯುವಕನಿಗೆ ನಿಫಾ ವೈರಸ್ ಇಲ್ಲ ಕೆ.ಆರ್.ಆಸ್ಪತ್ರೆ ವೈದ್ಯರ ಸ್ಪಷ್ಟನೆ
ಮೈಸೂರು

ಹೆಚ್.ಡಿ.ಕೋಟೆ ಯುವಕನಿಗೆ ನಿಫಾ ವೈರಸ್ ಇಲ್ಲ ಕೆ.ಆರ್.ಆಸ್ಪತ್ರೆ ವೈದ್ಯರ ಸ್ಪಷ್ಟನೆ

May 28, 2018

ಮೈಸೂರು: ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ತೆರೆಯಲಾಗಿರುವ ನಿಫಾ ಸೋಂಕಿತರ ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಚ್.ಡಿ.ಕೋಟೆಯ ಯುವಕನಿಗೆ ನಿಫಾ ಸೋಂಕು ಇಲ್ಲದೇ ಇರುವುದು ದೃಢಪಟ್ಟಿದ್ದು, ವೈದ್ಯರು ನಿಟ್ಟುಸಿರು ಬಿಟ್ಟಿದ್ದಾರೆ.

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದ ರಘು(18) ಎಂಬ ಯುವಕ ಕಳೆದ ಮೂರ್ನಾಲ್ಕು ದಿನಗಳಿಂದ ತೀವ್ರ ತೆರನಾದ ಜ್ವರದಿಂದ ಬಳಲುತ್ತಿದ್ದು, ನಿಫಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿತ್ತು. ವೈರಾಣು ಜ್ವರದಿಂದ ಬಳಲುತ್ತಿದ್ದ ಈ ಯುವಕನಲ್ಲಿ ಬ್ರೈನ್ ಫಿವರ್ ಕಾಣ ಸಿಕೊಂಡಿತ್ತು. ಮೇಲ್ನೋಟಕ್ಕೆ ನಿಫಾ ವೈರಾಣು ತಗುಲಿರುವ ರೋಗಿಯಂತೆ ಕಂಡುಬಂದ ಹಿನ್ನೆಲೆಯಲ್ಲಿ ಕೆ.ಆರ್.ಆಸ್ಪತ್ರೆಯ ವೈದ್ಯರು ನಿಫಾ ಸೋಂಕಿತರಿಗೆಂದೇ ಪ್ರತ್ಯೇಕವಾಗಿ ತೆರೆಯಲಾಗಿದ್ದ ವಾರ್ಡ್‍ನಲ್ಲಿ ದಾಖಲಿಸಿ ತೀವ್ರ ನಿಗಾ ವಹಿಸಿ ಚಿಕಿತ್ಸೆ ಆರಂಭಿಸಿದ್ದರು. ಆದರೆ ಇಂದು ರೋಗಿ ರಘುಗೆ ನಿಫಾ ಸೋಂಕು ಇಲ್ಲವೆಂದು ದೃಢಪಟ್ಟಿದೆ. ಇದರಿಂದ ಮೈಸೂರಿಗೂ ನಿಫಾ ಹರಡಿದೆ ಎಂದು ಆತಂಕದಲ್ಲಿದ್ದ ಜನರು ನಿರಾಳರಾಗುವಂತಾಗಿದೆ.

ಈ ಸಂಬಂಧ ಕೆ.ಆರ್.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಸ್.ಚಂದ್ರಶೇಖರ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ನಿಫಾ ಸೋಂಕು ಹರಡಿರುವ ಯಾವುದೇ ರೋಗಿಗಳು ಮೈಸೂರಿನಲ್ಲಿ ಇಲ್ಲ. ಹೆಚ್.ಡಿ.ಕೋಟೆ ಯುವಕನಿಗೆ ನಿಫಾ ವೈರಾಣು ತಗುಲಿರುವ ಶಂಕೆಯಿಂದ ಹೆಚ್ಚಿನ ಗಮನ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆತನ ರಕ್ತ, ಕಫ ಮತ್ತು ಮೂತ್ರದ ಮಾದರಿಯನ್ನು ಪರೀಕ್ಷೆಗೆ ಸಾಂಕ್ರಾಮಿಕ ರೋಗಗಳ ಪ್ರಯೋಗಾಲಯದ ಮೂಲಕ ಪುಣೆಯಲ್ಲಿರುವ ಎನ್‍ವಿಐ ಸಂಸ್ಥೆಗೆ ಕಳುಹಿಸಲು ನಿರ್ಧರಿಸಲಾಗಿತ್ತು. ಆದರೆ ಎನ್‍ವಿಐ ಸಂಸ್ಥೆ ಅಧಿಕಾರಿಗಳು ರಕ್ತದ ಮಾದರಿಯನ್ನು ಪುಣೆಯಲ್ಲಿರುವ ಪ್ರಯೋಗಾಲಯಕ್ಕೆ ತರಲು 24 ಗಂಟೆ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇರಳಾದಲ್ಲಿಯೇ ನಿಫಾ ವೈರಸ್ ಪತ್ತೆ ಹಚ್ಚಲು ತಾತ್ಕಾಲಿಕವಾಗಿ ಪ್ರಯೋಗಾಲಯವೊಂದನ್ನು ತೆರೆಯಲಾಗಿದ್ದು, ಅಲ್ಲಿಗೆ ಕಳುಹಿಸುವಂತೆ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೇರಳಾದಲ್ಲಿರುವ ಪ್ರಯೋಗಾಲಯಕ್ಕೆ ರೋಗಿಯ ರಕ್ತದ ಮಾದರಿಯನ್ನು ಕಳುಹಿಸಲಾಗಿತ್ತು. ಇಂದು ಬೆಳಿಗ್ಗೆ ಪ್ರಯೋಗಾಲಯದ ವರದಿ ಲಭ್ಯವಾಗಿದ್ದು, ರೋಗಿ ರಘುಗೆ ನಿಫಾ ಸೋಂಕು ಇಲ್ಲವೆಂದು ದೃಢಪಟ್ಟಿದೆ. ಮೈಸೂರಿನ ಜನತೆ ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

Translate »