ಕೇರಳದಲ್ಲಿ ನಿಫಾ ರುದ್ರ ನರ್ತನ: ಮೈಸೂರಿನಲ್ಲಿ ಗರಿಗೆದರಿದ ಪ್ರವಾಸೋದ್ಯಮ
ಮೈಸೂರು

ಕೇರಳದಲ್ಲಿ ನಿಫಾ ರುದ್ರ ನರ್ತನ: ಮೈಸೂರಿನಲ್ಲಿ ಗರಿಗೆದರಿದ ಪ್ರವಾಸೋದ್ಯಮ

May 28, 2018

ಮೈಸೂರು:  ಕೇರಳದಲ್ಲಿ ನಿಫಾ ವೈರಾಣುವಿನ ರುದ್ರ ನರ್ತನದಿಂದಾಗಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ವಿವಿಧ ರಾಜ್ಯಗಳ ಪ್ರವಾಸಿಗರು ಕೇರಳಕ್ಕೆ ಹೋಗುವುದನ್ನು ಮೊಟಕುಗೊಳಿಸಿ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಾಸ್ತವ್ಯ ಹೂಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳು ಗಿಜಿಗುಡುತ್ತಿವೆ.

ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣವಾಗಿರುವ ಕೇರಳಕ್ಕೆ ಹೋಗುವ ಪ್ರವಾಸಿಗರಿಗೆ ನಿಫಾ ವೈರಸ್ ಕಂಟಕವಾಗಿ ಕಾಡಲಾರಂಭಿಸಿದ್ದು, ಕೇರಳಕ್ಕೆ ಬರದಂತೆ ತಡೆಯೊಡ್ಡಿದೆ. ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯೇ ಆನ್‍ಲೈನ್ ಮೂಲಕ ಬುಕ್ ಮಾಡಿದ್ದ ವಿವಿಧ ರಾಜ್ಯಗಳ ಪ್ರವಾಸಿಗರು ಕಳೆದ 15 ದಿನದಿಂದ ಕೇರಳಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಮೈಸೂರಿನ ಪ್ರವಾಸಿ ತಾಣಗಳ ಸೌಂದರ್ಯವನ್ನು ಸವಿಯುವ ಮೂಲಕ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳ ಪ್ರವಾಸಿ ತಾಣಗಳನ್ನು ವೀಕ್ಷಿಸಿ ಪುಳಕಗೊಳ್ಳುತ್ತಿದ್ದಾರೆ. ಇದರಿಂದ ಮೈಸೂರಿನ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ಕೆಆರ್‍ಎಸ್, ಶ್ರೀರಂಗಪಟ್ಟಣ, ನಿಮಿಷಾಂಭ, ನಂಜನಗೂಡು, ತಲಕಾಡು, ನಾಗರಹೊಳೆ, ಬಂಡೀಪುರ, ಗಗನಚುಕ್ಕಿ, ಭರಚುಕ್ಕಿ, ಮಡಿಕೇರಿ, ಅಬ್ಬಿಫಾಲ್ಸ್, ನಿಸರ್ಗಧಾಮ, ಗೋಲ್ಡನ್ ಟೆಂಪಲ್ ಸೇರಿದಂತೆ ವಿವಿಧ ಪ್ರವಾಸಿ ತಾಣಗಳು ಕಿಕ್ಕಿರಿದ ಸಂಖ್ಯೆಯಲ್ಲಿ ಪ್ರವಾಸಿಗರಿಂದ ಕಂಗೊಳಿಸುತ್ತಿದೆ.

ನಿಫಾದಿಂದ ವರದಾನ: ಸಾಮಾನ್ಯವಾಗಿ ವಿವಿಧೆಡೆಯಿಂದ ಬರುವ ಪ್ರವಾಸಿಗರು ಮೈಸೂರಿನ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟವನ್ನು ಒಂದು ದಿನದಲ್ಲಿ ನೋಡಿ ಕೇರಳದತ್ತ ಸಾಗುತ್ತಿದ್ದರು. ಇದರಿಂದ ಒಂದು ದಿನಕ್ಕೆ ಮಾತ್ರ ಮೈಸೂರಿನ ಪ್ರವಾಸೋದ್ಯಮ ಕಳೆಗಟ್ಟುತ್ತಿತ್ತು. ಆದರೆ ನಿಫಾ ಮೈಸೂರು ಹಾಗೂ ನೆರೆ ರಾಜ್ಯದ ಪ್ರವಾಸಿ ತಾಣಗಳಿಗೆ ಚೈತನ್ಯ ತುಂಬಿದೆ. ಮೈಸೂರಿನಿಂದ ಕೇರಳದ ವಿವಿಧ ಪ್ರವಾಸಿ ತಾಣಗಳಿಗೆ ಆನ್‍ಲೈನ್ ಮೂಲಕ ಬುಕ್ ಮಾಡಿದ್ದ ಪ್ರವಾಸಿಗರು ತಮ್ಮ ಪ್ಲಾನ್ ಬದಲಿಸಿಕೊಂಡಿದ್ದು, ಕೇರಳದಲ್ಲಿ ದೂಡಬೇಕಾಗಿದ್ದ ದಿನಗಳನ್ನು ಮೈಸೂರಿನಲ್ಲಿಯೇ ಕಳೆಯಲು ನಿರ್ಧರಿಸಿರುವುದು ಪ್ರವಾಸೋದ್ಯಮವನ್ನೇ ಅವಲಂಬಿಸಿರುವ ಕುಟುಂಬಗಳಿಗೆ ಸಂತಸವನ್ನುಂಟು ಮಾಡಿದೆ.

ಎಲ್ಲೆಲ್ಲಿ, ಎಷ್ಟೆಷ್ಟು: ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ ಬಂತೆಂದರೆ ಮೈಸೂರು ಪ್ರವಾಸಿಗರನ್ನು ಆಕರ್ಷಿಸುವುದು ಸಾಮಾನ್ಯ ಸಂಗತಿಯಾಗಿದೆ. ಪ್ರತಿ ವರ್ಷ ಏಪ್ರಿಲ್ 10ರಿಂದ ಜೂನ್ 10ರವರೆಗೆ ಪ್ರವಾಸೋದ್ಯಮಕ್ಕೆ ಅಚ್ಚುಮೆಚ್ಚಿನ ಸಮಯವಾಗಿದೆ. ಈ ಅವಧಿಯಲ್ಲಿ ದೇಶ, ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುವ ವಾಡಿಕೆಯಿದೆ. ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳಲ್ಲಿ ಪ್ರವಾಸಿಗರ ಸಂಖ್ಯೆ ಕ್ಷೀಣ ಸಿತ್ತು. ಆದರೆ ಮೇ.12ರ ನಂತರ ಪ್ರವಾಸಿಗರ ಸಂಖ್ಯೆ ಹಂತ ಹಂತವಾಗಿ ವೃದ್ಧಿಸಿದ್ದು, ಭಾನುವಾರವೂ(ಮೇ.27) ಮೈಸೂರಿನಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿದ್ದು ಜೂನ್ 10ರವರೆಗೂ ಪ್ರವಾಸಿಗರು ಬರುವ ಮುನ್ಸೂಚನೆ ಇದೆ.

ಮೈಸೂರು ಮೃಗಾಲಯಕ್ಕೆ 2017ರ ಏಪ್ರಿಲ್ ತಿಂಗಳಲ್ಲಿ 3.21 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, 1.73 ಕೋಟಿ ರೂ ಆದಾಯ ಸಂಗ್ರಹವಾಗಿತ್ತು. ಮೇ ತಿಂಗಳಲ್ಲಿ 4.95 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, 2.54 ಕೋಟಿ ಆದಾಯ ಸಂಗ್ರಹವಾಗಿತ್ತು. 2018ರ ಏಪ್ರಿಲ್ ತಿಂಗಳಲ್ಲಿ 3.35 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, 1.95 ಕೋಟಿ ಆದಾಯ ಸಂಗ್ರಹವಾಗಿತ್ತು. ಮೇ ತಿಂಗಳಲ್ಲಿ 4.10 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, 2.40 ಕೋಟಿ ರೂ ಆದಾಯ ದೊರೆತಿದೆ. ಮೇ ತಿಂಗಳ ಅಂತ್ಯಕ್ಕೆ ಇನ್ನು ನಾಲ್ಕು ದಿನ ಇರುವುದರಿಂದ ಪ್ರವಾಸಿಗರ ಸಂಖ್ಯೆ ಹಾಗೂ ಆದಾಯದಲ್ಲಿ ಇನ್ನಷ್ಟು ಹೆಚ್ಚಳವಾಗಲಿದೆ.

ಅರಮನೆಗೆ 2017ರ ಏಪ್ರಿಲ್ ತಿಂಗಳಲ್ಲಿ 3,23,433 ಪ್ರವಾಸಿಗರು ಭೇಟಿ ನೀಡಿದ್ದರೆ, ಮೇ ತಿಂಗಳಲ್ಲಿ 5,41,952 ಪ್ರವಾಸಿಗರು ಅರಮನೆಯ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದರು. 2018ರ ಏಪ್ರಿಲ್ ತಿಂಗಳಲ್ಲಿ 3,07,636 ಪ್ರವಾಸಿಗರ ಭೇಟಿ ನೀಡಿದ್ದರೆ, ಮೇ 26ರವರೆಗೆ 375989 ಪ್ರವಾಸಿಗರು ಭೇಟಿ ನೀಡಿದ್ದಾರೆ. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಅರಮನೆ ಭೇಟಿ ನೀಡಿದ್ದರು.

ಚಾಮುಂಡಿಬೆಟ್ಟದಲ್ಲಿ ಜನಜಂಗುಳಿ: ಕಳೆದ ಕೆಲವು ದಿನಗಳಿಂದ ಪ್ರವಾಸಿಗರು ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಪ್ರವಾಸಿ ಹಾಗೂ ಧಾರ್ಮಿಕ ತಾಣವೂ ಆಗಿರುವ ಚಾಮುಂಡಿಬೆಟ್ಟಕ್ಕೆ ಬರುವ ಪ್ರವಾಸಿಗರು ಹಾಗೂ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಭಾನುವಾರವಾಗಿದ್ದ ಇಂದು ಚಾಮುಂಡಿಬೆಟ್ಟಕ್ಕೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಏಕಕಾಲಕ್ಕೆ ಬಂದ ಹಿನ್ನೆಲೆಯಲ್ಲಿ ಬೆಟ್ಟದ ಮೇಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬೆಟ್ಟದ ಮಾರ್ಗದಲ್ಲಿರುವ ವ್ಯೂವ್ ಪಾಯಿಂಟ್ ಬಳಿಯಿಂದಲೇ ಪ್ರವಾಸಿ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿತ್ತು. ದೇವಾಲಯದ ಸುತ್ತಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬೀಡುಬಿಟ್ಟಿದ್ದರಿಂದ ಜನಜಂಗುಳಿ ಹೆಚ್ಚಾಗಿತ್ತು.
ಪ್ರವಾಸಿ ಏಜೆಂಟರ ಸಂಭ್ರಮ: ಮೈಸೂರಿಗೆ ಪ್ರವಾಸಿಗರ ದಂಡು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿ ಏಜೆಂಟರು ಸಂತೋಷದಿಂದ ಇದ್ದಾರೆ. ಈ ಸಂಬಂಧ ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್.ಪ್ರಶಾಂತ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಸಂಸ್ಥೆಯಲ್ಲಿ 50 ಸಂಸ್ಥೆಗಳು ನೋಂದಾಯಿಸಿಕೊಂಡಿವೆ. ಅಲ್ಲದೆ ಮೈಸೂರಿನಲ್ಲಿ 120 ಟ್ರಾವೆಲ್ಸ್ ಸಂಸ್ಥೆಗಳಿವೆ. ಮೇ.12ರ ನಂತರ ಪ್ರವಾಸಿಗರು ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಪ್ರವಾಸಿ ವಾಹನಗಳಿಗೆ ಬೇಡಿಕೆ ವ್ಯಕ್ತವಾಗುತ್ತಿದೆ. ಕೇರಳದಲ್ಲಿ ನಿಫಾ ವೈರಸ್ ಹರಡುತ್ತಿರುವುದರಿಂದ ಪ್ರವಾಸಿಗರು ಕೇರಳಕ್ಕೆ ಹೋಗಲು ಭಯಪಡುತ್ತಿದ್ದು, ಮೈಸೂರಿನಲ್ಲಿ ವಾಸ್ತವ್ಯ ಹೂಡಲು ಬಯಸುತ್ತಿದ್ದಾರೆ. ಈ ಹಿಂದೆ ಆನ್‍ಲೈನ್ ಮೂಲಕ ಕೇರಳದ ಪ್ರವಾಸಕ್ಕೆ ಬುಕ್ ಮಾಡಿದ್ದವರು ತಮ್ಮ ಯೋಜನೆಯನ್ನು ರದ್ದು ಮಾಡಿ ಮೈಸೂರಿನ ಸುತ್ತಮುತ್ತಲಿರುವ ಪ್ರವಾಸಿ ತಾಣಗಳನ್ನು ನೋಡಿ ಸಂಭ್ರಮಿಸುತ್ತಿದ್ದಾರೆ ಎಂದು ಅವರು ಹೇಳಿದರು.

ರೂಮುಗಳಿಲ್ಲ: ಮೈಸೂರು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಮೈಸೂರು ನಗರದಲ್ಲಿ 250 ವಸತಿ ಗೃಹಗಳಿದ್ದು, ಅವುಗಳಲ್ಲಿ ವಿವಿಧ ಬಗೆಯ 7500ಕ್ಕೂ ಹೆಚ್ಚು ರೂಮ್‍ಗಳಿವೆ. ಅಲ್ಲದೆ 800ಕ್ಕೂ ಹೆಚ್ಚು ಹೊಟೇಲ್‍ಗಳು, ಬೇಕರಿಗಳು, ರೆಸ್ಟೋರೆಂಟ್‍ಗಳಿವೆ. ಎಲ್ಲಾ ವಸತಿ ಗೃಹಗಳಲ್ಲಿಯೂ ರೂಮುಗಳು ಬುಕ್ ಆಗಿವೆ. ಇನ್ನು ಎರಡು ವಾರ ಪ್ರವಾಸಿಗರು ಮೈಸೂರಿಗೆ ಆಗಮಿಸುವ ಸೀಜನ್ ಇರುತ್ತದೆ. ನಗರ ಪ್ರದೇಶದಲ್ಲಿರುವ ವಸತಿ ಗೃಹಗಳಲ್ಲಿ ರೂಮ್‍ಗಳು ಬುಕ್ ಆದ ನಂತರ, ಬಡಾವಣೆಗಳಲ್ಲಿರುವ ವಸತಿ ಗೃಹಗಳು, ರಿಂಗ್‍ರಸ್ತೆಯ ಸುತ್ತಮುತ್ತಲಿರುವ ವಸತಿ ಗೃಹಗಳು, ಕಲ್ಯಾಣ ಮಂಟಪಗಳಲ್ಲಿ, ಅತಿಥಿ ಗೃಹಗಳಲ್ಲಿ ಪ್ರವಾಸಿಗರು ವಾಸ್ತವ್ಯ ಹೂಡುತ್ತಿದ್ದಾರೆ ಎಂದು ಅವರು ಹೇಳಿದರು.

ಸಣ್ಣ ವ್ಯಾಪಾರಿಗಳ ಭರ್ಜರಿ ವ್ಯಾಪಾರ: ಅರಮನೆ, ಮೃಗಾಲಯ, ಜಗನ್ಮೋಹನ ಅರಮನೆ, ಚಾಮುಂಡಿಬೆಟ್ಟ, ಕೆಆರ್‍ಎಸ್ ಸೇರಿದಂತೆ ವಿವಿಧ ಪ್ರವಾಸಿ ತಾಣಗಳ ಬಳಿ ಅಲಂಕಾರಿಕ ವಸ್ತುಗಳು ಸೇರಿದಂತೆ ಆಟಿಕೆಗಳನ್ನು ಮಾರಾಟ ಮಾಡುವ ವ್ಯಾಪಾರಿಗಳಲ್ಲಿ ಸಂತೋಷ ಮನೆ ಮಾಡಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಬಂದಷ್ಟು ನಮ್ಮ ಕುಟುಂಬದ ನಿರ್ವಹಣೆ ಸಲೀಸಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಫೋಟೋಗಳು: ನಿಫಾ

Translate »