ಕಾಫಿ ಬೆಳೆಗಾರರ 10 ಹೆಚ್‍ಪಿವರೆಗಿನ ಪಂಪ್‍ಸೆಟ್‍ಗೆ  ಉಚಿತ ವಿದ್ಯುತ್
ಕೊಡಗು

ಕಾಫಿ ಬೆಳೆಗಾರರ 10 ಹೆಚ್‍ಪಿವರೆಗಿನ ಪಂಪ್‍ಸೆಟ್‍ಗೆ ಉಚಿತ ವಿದ್ಯುತ್

March 23, 2022

ಮಡಿಕೇರಿ,ಮಾ.22-ಕಾಫಿ ಬೆಳೆಗಾರರಿಗೆ 10 ಹೆಚ್‍ಪಿವರೆಗೆ ಉಚಿತ ವಿದ್ಯುತ್ ಪೂರೈಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಇಂದು ಘೋಷಿ ಸಿದ್ದಾರೆ. ಆ ಮೂಲಕ ಕಾಫಿ ಬೆಳೆಗಾರರ ಬಹುದಿನಗಳ ಬೇಡಿಕೆ ಯನ್ನು ರಾಜ್ಯ ಸರ್ಕಾರ ಈಡೇರಿಸಿದಂತಾಗಿದೆ.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, 10 ಹೆಚ್.ಪಿ. ವರೆಗಿನ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡಬೇಕೆನ್ನುವುದು ಕಾಫಿ ಕೃಷಿಕರ ಬಹು ದಿನಗಳ ಬೇಡಿಕೆ ಯಾಗಿದೆ. ಈ ಬಗ್ಗೆ ಹಲವು ಬಾರಿ ಸರ್ಕಾ ರದ ಗಮನಕ್ಕೆ ತಂದಿ ದ್ದರೂ ಈವರೆಗೆ ಇದರ ಕುರಿತು ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಇದರಿಂದ ಕಾಫಿ ಬೆಳೆಗಾರರಿಗೆ ತೊಂದರೆ ಯಾಗಿದೆ. ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಕೇವಲ 2 ತಿಂಗಳು ಮಾತ್ರವೇ ಕಾಫಿ ಬೆಳೆಗೆ ವಿದ್ಯುತ್ ಬಳಸ ಲಾಗುತ್ತದೆ. ಕಾಫಿ ಬೆಳೆಗಾರರಿಗೆ ಅಧಿಕ ಬಿಲ್ ನೀಡಲಾಗುತ್ತಿದ್ದು, ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕವನ್ನೂ ಕಡಿತ ಮಾಡ ಲಾಗುತ್ತಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭ ಬಜೆಟ್‍ನಲ್ಲಿ ಉಚಿತ ವಿದ್ಯುತ್ ಘೋಷಿಸಲಾಗಿತ್ತು. ಆದರೆ, ಅದು ಜಾರಿಯಾಗಲಿಲ್ಲ ಎಂದು

ಸರ್ಕಾರದ ಗಮನ ಸೆಳೆದರು. ತಂಬಾಕು ಬೆಳೆ ನಿಷೇಧ ಮಾಡುವ ಚಿಂತನೆ ನಡೆಯು ತ್ತಿರುವ ನಡುವೆಯೇ ತಂಬಾಕು ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಅದರಂತೆ ಅಡಿಕೆ ಬೆಳೆಗಾರರಿಗೂ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಕಾಫಿ ಬೆಳೆಗಾರರು ಏನು ಅನ್ಯಾಯ ಮಾಡಿದ್ದಾರೆ? ಕಾಫಿ ಕೃಷಿಕರು ಪರಿಸರಕ್ಕೆ ದೊಡ್ಡ ಕೊಡುಗೆಯನ್ನೇ ನೀಡಿದ್ದಾರೆ. ಕೊಡಗಿನಲ್ಲಿ ಬಿದ್ದ ಮಳೆಯಿಂದ 350 ಟಿಎಂಸಿ ನೀರು ಸಂಗ್ರಹವಾಗುತ್ತಿದೆ. ಹೀಗಿದ್ದರೂ ಕಾಫಿ ಬೆಳೆಗಾರರ ಬಗ್ಗೆ ತಾರತಮ್ಯ ಏಕೆ? ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಇದಕ್ಕೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ, ದನಿಗೂಡಿಸಿದರು. ಈ ನಡುವೆ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಮಾತನಾಡಿ, ಕಾಫಿ ಬೆಳೆಗಾರರಿಗೆ ಏಕೆ ತಾರತಮ್ಯ ಮಾಡಲಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಇನ್ನಿತರೆ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಕಾಫಿ ಬೆಳೆಗಾರರನ್ನು ಏಕೆ ಹೊರಗಿಡಲಾಗಿದೆ? ಎಂದು ಸರ್ಕಾರವನ್ನು ಪ್ರಶ್ನಿಸಿದರು. ಕಾಫಿ ಬೆಳೆಗಾರರು ಶ್ರೀಮಂತರು ಎನ್ನುವ ಕಾಲವಿತ್ತು. ಆದರೆ, ಇದೀಗ ಕಾಲ ಬದಲಾಗಿದ್ದು, ಕಾಫಿ ಬೆಳೆಗಾರರು ಸಾಲಗಾರರಾಗಿದ್ದಾರೆ. ಈ ಹಿಂದಿನ ಅನ್ಯಾಯವನ್ನು ಸರಿಪಡಿಸಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ಕಾಫಿ ನಾಡಿನ ಶಾಸಕರ ಬೇಡಿಕೆಗಳನ್ನು ಆಲಿಸಿದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಕಾಫಿಯನ್ನು ವಾಣಿಜ್ಯ ಬೆಳೆ ಎಂದೂ, ಕಾಫಿ ಬೆಳೆಗಾರರು ಶ್ರೀಮಂತರು ಎಂದು ಭಾವಿಸಲಾಗಿತ್ತು. ಹೀಗಾಗಿ 2008ರಿಂದ ಕೃಷಿಕರಿಗೆ ವಿದ್ಯುತ್ ಸಬ್ಸಿಡಿ ನೀಡಿದ್ದರೂ ಕಾಫಿ ಬೆಳೆಗಾರರನ್ನು ಕೈಬಿಡಲಾಗಿತ್ತು. ಕಾಲ-ಕಾಲಕ್ಕೆ ಮಳೆಯಾಗಿದ್ದರೆ ಕಾಫಿ ಬೆಳೆಗಾರರು ಉಚಿತ ವಿದ್ಯುತ್ ಬೇಡಿಕೆ ಇಡುತ್ತಿರಲಿಲ್ಲ. 10 ಹೆಚ್.ಪಿ.ವರೆಗೆ ಉಚಿತವಾಗಿ ವಿದ್ಯುತ್ ನೀಡ ಲಾಗುವುದು. ಆದರೆ, ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕು. ಇದಕ್ಕಾಗಿ ಈಗಾಗಲೇ ಇಂಧನ ಸಚಿವರು ಮತ್ತು ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.

Translate »