ಡಾ.ವಿ.ಕೆ.ಅತ್ರೆ, ಪುನೀತ್ ರಾಜ್‍ಕುಮಾರ್, ಎಂ.ಮಹದೇವಸ್ವಾಮಿ ಅವರಿಗೆ ಪ್ರತಿಷ್ಠಿತ ಮೈಸೂರು ವಿವಿ ಗೌರವ ಡಾಕ್ಟರೇಟ್ ಪ್ರದಾನ
ಮೈಸೂರು

ಡಾ.ವಿ.ಕೆ.ಅತ್ರೆ, ಪುನೀತ್ ರಾಜ್‍ಕುಮಾರ್, ಎಂ.ಮಹದೇವಸ್ವಾಮಿ ಅವರಿಗೆ ಪ್ರತಿಷ್ಠಿತ ಮೈಸೂರು ವಿವಿ ಗೌರವ ಡಾಕ್ಟರೇಟ್ ಪ್ರದಾನ

March 23, 2022

ಮೈಸೂರು,ಮಾ.22(ಆರ್‍ಕೆ)-ಖ್ಯಾತ ಚಲನಚಿತ್ರ ನಾಯಕ ನಟ, ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯವು ಮಂಗಳವಾರ ಮರಣೋತ್ತರ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿತು.

ಕ್ರಾಫರ್ಡ್ ಭವನದಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯದ 102ನೇ ವಾರ್ಷಿಕ ಘಟಿ ಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ರಾದ ರಾಜ್ಯದ ವಿಶ್ವವಿದ್ಯಾನಿಲಯಗಳ ಕುಲಾ ಧಿಪತಿಗಳೂ ಆದ ಥಾವರ್‍ಚಂದ್ ಗೆಹ್ಲೋಟ್, ದಿ. ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಶ್ರೀಮತಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದರು.

ಅವರೊಂದಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‍ಡಿಓ) ವಿಶ್ರಾಂತ ಮಹಾ ನಿರ್ದೇಶಕ ಪದ್ಮವಿಭೂಷಣ ಡಾ. ವಾಸುದೇವ ಕೆ.ಅತ್ರೆ ಹಾಗೂ ಖ್ಯಾತ ಕಲಾವಿದ ರಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಎಂ.ಮಹದೇವಸ್ವಾಮಿ ಅವರಿಗೂ ಇದೇ ವೇಳೆ ರಾಜ್ಯಪಾಲರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬೆಂಗಳೂರಿನ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್(ಎನ್‍ಎಎಸಿ)ನಿರ್ದೇಶಕ ಡಾ.ಎಸ್.ಸಿ ಶರ್ಮಾ, ಮೈಸೂರು ವಿಶ್ವವಿದ್ಯಾ ನಿಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ಕುಲಸಚಿವ ಪ್ರೊ. ಆರ್.ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ.ಜ್ಞಾನಪ್ರಕಾಶ್, ಸಿಂಡಿಕೇಟ್ ಹಾಗೂ ಶೈಕ್ಷಣಿಕ ಮಂಡಳಿ ಸದಸ್ಯರು ಪಾಲ್ಗೊಂಡಿದ್ದ ಸಮಾರಂಭದಲ್ಲಿ ಮೂವರು ಗಣ್ಯರು ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದರು. ದಿ. ಪುನೀತ್ ರಾಜ್‍ಕುಮಾರ್ ಅವರ ಬಾಲ್ಯ, ಬೆಳೆದುಬಂದ ಹಾದಿ, ನಟಿಸಿರುವ ಚಿತ್ರಗಳು, ಮಾಡಿದ ಸಾಧನೆ, ಸಲ್ಲಿಸಿದ ಸೇವೆ, ಗಳಿಸಿದ ಜನ ಮನ್ನಣೆ ಕುರಿತಂತೆ ಪರಿಚಯಿಸುವ ಚಿತ್ರ ಸಹಿತ ಮಾಹಿತಿಯನ್ನು ಕ್ರಾಫರ್ಡ್ ಭವನದಲ್ಲಿ ಅಳವಡಿಸಿದ್ದ ಪರದೆಗಳ ಮೇಲೆ ಬಿತ್ತರಪಡಿಸಿದಾಗ ನೆರೆದಿದ್ದವರೆಲ್ಲಾ ಮಂತ್ರಮುಗ್ಧ ರಾದರು. ಕುಲಪತಿ ಪ್ರೊ. ಹೇಮಂತಕುಮಾರ್, ಪುನೀತ್ ರಾಜ್‍ಕುಮಾರ್ ಅವರ ಪರಿಚಯ ಮಾಡಿಕೊಡುವ ವೇಳೆ ಪರದೆಗಳಲ್ಲಿ ಜೀವನ ಸಾಧನೆ ದೃಶ್ಯ ಬಿತ್ತರವಾದಾಗ ಇಡೀ ಕ್ರಾಫರ್ಡ್ ಭವನದಲ್ಲಿ ನೆÀರೆದಿದ್ದವರ ಕಣ್ಣಂಚಿನಲ್ಲಿ ನೀರು ಜಿನುಗಿದವು.

ಗೌರವ ಡಾಕ್ಟರೇಟ್‍ಗೆ ಭಾಜನರಾದವರ ಪೈಕಿ ಪುನೀತ್ ರಾಜ್‍ಕುಮಾರ್ ಹೆಸರು ಹೇಳುತ್ತಿದ್ದಂತೆಯೇ ಸಮಾರಂಭದಲ್ಲಿ ಹರ್ಷೋದ್ಘಾರ, ಭಾರೀ ಕರತಾಡನ, ಘೋಷಣೆ ಮೊಳಗಿದವು. ಆದರೆ, ಪುನೀತ್ ಪತ್ನಿ ಅಶ್ವಿನಿ, ಪುತ್ರಿ ವಂದಿತಾ, ಸಹೋದರ ರಾಘ ವೇಂದ್ರ ರಾಜ್‍ಕುಮಾರ್ ಹಾಗೂ ಕುಟುಂಬದ ಸದಸ್ಯರು ಮಾತ್ರ ಮೌನ ಸಾಕ್ಷಿಯಾದರು. ಪುನೀತ್ ರಾಜ್‍ಕುಮಾರ್ ಅವರಿಗೆ ನೀಡಿದ ಗೌರವ ಡಾಕ್ಟರೇಟ್ ಸ್ವೀಕರಿಸುವ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ವರನಟ ಡಾ.ರಾಜ್‍ಕುಮಾರ್ ಅವರ ಕುಟುಂಬ ಸದಸ್ಯರನ್ನು ಮೈಸೂರು ವಿವಿ ಕುಲಪತಿ ಪ್ರೊ. ಜಿ.ಹೇಮಂತ ಕುಮಾರ್ ಅವರು ಆತ್ಮೀಯ ವಾಗಿ ಬರಮಾಡಿಕೊಂಡರು. ಅವರಿಗೆ ಕ್ರಾಫರ್ಡ್ ಭವನದಲ್ಲಿ ಸಮಾರಂಭದ ಪ್ರೇಕ್ಷಕರ ಮೊದಲ ಸಾಲಿನ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಪತಿಗೆ ನೀಡಿದ ಮರಣೋತ್ತರ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸುವ ವೇಳೆ ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಭಾವುಕರಾಗಿ ಗದ್ಗದಿತರಾದರು. ಇದೇ ವೇಳೆ ಗೌರವ ಡಾಕ್ಟರೇಟ್ ಪದವಿ ಪಡೆದ ಜಾನಪದ ಕಲಾವಿದ ಮಹದೇವಸ್ವಾಮಿ ಅವರೂ ತಮಗೆ ಪ್ರೇರಣೆಯಾಗಿದ್ದ ಡಾ.ರಾಜ್‍ಕುಮಾರ್ ನೆನೆದು ಭಾವುಕರಾದರು. ತಮ್ಮ ಮಗ ಸನ್ಮಾನ ಸ್ವೀಕರಿಸುತ್ತಿದ್ದ ದೃಶ್ಯ ಕಂಡು ಮಹದೇವಸ್ವಾಮಿ ಅವರ ತಾಯಿ ಗೌರಮ್ಮ ಆನಂದ ಬಾಷ್ಪ ಸುರಿಸಿದರು.

Translate »