ಬಂಜೆತನ ನಿವಾರಣಾ ಶಿಬಿರದಲ್ಲಿ 50 ದಂಪತಿಗೆ ಉಚಿತ ಚಿಕಿತ್ಸೆ
ಮೈಸೂರು

ಬಂಜೆತನ ನಿವಾರಣಾ ಶಿಬಿರದಲ್ಲಿ 50 ದಂಪತಿಗೆ ಉಚಿತ ಚಿಕಿತ್ಸೆ

June 2, 2022

ಮೈಸೂರು, ಜೂ. 1(ಎಂಟಿವೈ)- ಸಂತಾನ ಭಾಗ್ಯವಿಲ್ಲದೇ ಕೊರಗುತ್ತಿರುವ ದಂಪತಿಗಳಿಗಾಗಿ ಮೈಸೂರಿನ ಲಕ್ಷ್ಮೀಪುರಂ ನಲ್ಲಿರುವ ಸಂತಸ ಐವಿಎಫ್ ಅಂಡ್ ಎಂಡೋ ಸರ್ಜರಿ ಇನ್ಸ್‍ಸ್ಟಿಟೂಟ್‍ನಲ್ಲಿ ನಡೆದ ಬಂಜೆತನ ನಿವಾರಣಾ ಉಚಿತ ತಪಾಸಣಾ ಶಿಬಿರದಲ್ಲಿ 50ಕ್ಕೂ ಹೆಚ್ಚು ದಂಪತಿಗಳು ತಪಾಸಣೆಗೊಳಗಾಗಿ ಚಿಕಿತ್ಸೆ ಪಡೆದರು.

ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ಸಂತಸ ಐವಿಎಫ್ ಅಂಡ್ ಎಂಡೋ ಸರ್ಜರಿ ಇನ್ಸ್‍ಸ್ಟಿಟೂಟ್ ಆವರಣದಲ್ಲಿ ನಡೆದ ಉಚಿತ ತಪಾಸಣಾ ಶಿಬಿರವನ್ನು `ಮೈಸೂರು ಮಿತ್ರ’ ಪತ್ರಿಕೆಯ ಸಂಸ್ಥಾಪಕ ಸಂಪಾದಕ ರಾದ ಕೆ.ಬಿ.ಗಣಪತಿ ಹಾಗೂ ಶ್ರೀಮತಿ ರ್ಯಾಲಿ ಗಣಪತಿ ದಂಪತಿ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಕೆ.ಬಿ.ಗಣಪತಿ ಅವರು, ಹೆಣ್ಣಿಗೆ ತನ್ನದೇ ಆದ ಆಸೆಗಳಿರು ತ್ತವೆ. ಅದರಲ್ಲೂ ಮದುವೆಯಾದ ಹೆಣ್ಣು ತಾನು ತಾಯಿ ಆಗಬೇಕು. ನನಗೂ ಮಕ್ಕಳಾಗ ಬೇಕು ಎಂದು ಬಯಸುವುದು ಸಾಮಾನ್ಯ. ಆದರೆ ಮದುವೆಯಾದರೂ ಮಕ್ಕಳಾಗದೇ ಇರುವ ದಂಪತಿಗಳ ಸಂಕಷ್ಟ ಹೇಳತೀರ ದ್ದಾಗಿದೆ. ಯಾವುದಾದರೂ ಸಭೆ, ಸಮಾ ರಂಭಕ್ಕೆ ಹೋದಾಗ ಪರಿಚಯಸ್ಥರು ಕುಶಲೋಪರಿ ವಿಚಾರಿಸುವ ವೇಳೆ ನಿಮಗೆ ಎಷ್ಟು ಮಕ್ಕಳು ಎಂದು ಕೇಳುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಮಕ್ಕಳಾಗದೇ ಇದ್ದವರ ಸಂಕಷ್ಟ ಅಷ್ಟಿಷ್ಟಲ್ಲ ಎಂದರು.

ಆ ಸಂದರ್ಭದಲ್ಲಿ ಮಕ್ಕಳಾಗದೇ ಇದ್ದವರು ಅನುಭವಿಸುವ ನೋವು ಹೇಳತೀರದು. ಅಲ್ಲದೆ, ಮಕ್ಕಳಾಗದೇ ಇರುವವರು ಹಲವು ಸಂದರ್ಭದಲ್ಲಿ ತುಂಬಾ ಮುಜುಗರಕ್ಕೆ ಒಳ ಗಾಗುತ್ತಾರೆ. ಅಂತಹ ಕಷ್ಟದ ಸಂದರ್ಭ ಎದುರಿ ಸುತ್ತಿರುವ, ಮಕ್ಕಳಾಗದ ದಂಪತಿಗಳಿಗಾಗಿ ಅತ್ಯಾಧುನಿಕ ಚಿಕಿತ್ಸೆಯ ಮೂಲಕ ಸಂತಾನ ಸಮಸ್ಯೆ ನಿವಾರಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಹಿಂದೆ ಮಳೆಯೂ ಆಗಬೇಕು, ಮಕ್ಕಳೂ ಇರಬೇಕು ಎಂದು ಬಯಸುತ್ತಿದ್ದರು. ಆದರೆ ಈಗ ಅತಿಯಾದ ಮಳೆ ಹಾಗೂ ಹೆಚ್ಚಿನ ಮಕ್ಕಳು ಎರಡೂ ಆಗಬಾರದು. ಹೆಚ್ಚು ಮಳೆಯಾದರೆ ಅತಿವೃಷ್ಟಿಯಾಗುತ್ತದೆ. ಹೆಚ್ಚು ಮಕ್ಕಳು ಮಾಡಿಕೊಂಡರೆ ಜನಸಂಖ್ಯಾ ಸ್ಫೋಟದ ಸಮಸ್ಯೆ ಉಂಟಾಗುತ್ತದೆ ಎಂದು ಇದೇ ವೇಳೆ ಅವರು ತಿಳಿಸಿದರು.

`ಮೈಸೂರು ಮಿತ್ರ’ ಪತ್ರಿಕೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಶ್ರೀಮತಿ ರ್ಯಾಲಿ ಗಣಪತಿ ಅವರು ಮಾತನಾಡಿ, ಸಂತಾನ ವಿಲ್ಲದೆ ಕೊರಗುವ ದಂಪತಿಗಳಿಗೆ ಐವಿಎಫ್ ವರದಾನವಾಗಿದೆ. ಈ ಚಿಕಿತ್ಸಾ ವಿಧಾನ ಸ್ವಲ್ಪ ದುಬಾರಿಯಾದರೂ ಇಲ್ಲಿರುವ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಅತ್ಯಾಧುನಿಕ ಚಿಕಿತ್ಸಾ ವಿಧಾನದ ಮೂಲಕ ಬಂಜೆತನ ವನ್ನು ನಿವಾರಿಸುತ್ತಾರೆ ಎಂಬ ವಿಶ್ವಾಸವಿದೆ. ದಂಪತಿಗಳು ಈ ವೈದ್ಯರ ಮೇಲೆ ನಂಬಿಕೆ ಇಟ್ಟು ಚಿಕಿತ್ಸೆ ಪಡೆದುಕೊಳ್ಳಬೇಕು. ನಿಮ್ಮ ಬಯಕೆಯಂತೆ ನಿಮಗೆ ಸಂತಾನ ಕರು ಣಿಸಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಕಾಮಾಕ್ಷಿ ಆಸ್ಪತ್ರೆಯ ವೈದ್ಯ ಡಾ.ಪ್ರಕಾಶ್ ಕೆ.ಪ್ರಭು ಮಾತನಾಡಿ, ಮಕ್ಕಳಿಲ್ಲದ ದಂಪತಿಗಳಿಗಾಗಿ ಐವಿಎಫ್ ಚಿಕಿತ್ಸಾ ವಿಧಾನದ ಮೂಲಕ ಮಕ್ಕಳಾಗು ವಂತೆ ಮಾಡಲಾಗುತ್ತದೆ. ಇದು ಒಳ್ಳೆಯ ಬೆಳವಣಿಗೆ. ಇದಕ್ಕೆ ಖರ್ಚು ಹೆಚ್ಚಾದರೂ ಫಲಿತಾಂಶ ಪಡೆಯಬಹುದಾಗಿದೆ. ಸರ್ಕಾರ ಈ ಚಿಕಿತ್ಸೆಗೆ `ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ’ ಯೋಜನೆಯಡಿ ಆರ್ಥಿಕ ನೆರವು ನೀಡಲು ಮುಂದಾದರೆ, ಇನ್ನಷ್ಟು ಬಡ ಕುಟುಂಬದ ದಂಪತಿಗಳು ಈ ಚಿಕಿತ್ಸೆ ಮೂಲಕ ಮಕ್ಕಳನ್ನು ಪಡೆಯಲು ಸಹಕಾರಿಯಾ ಗುತ್ತದೆ ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ ಮೈಸೂರು ಪ್ರಸೂತಿ ಶಾಸ್ತ್ರ ಮತ್ತು ಸ್ತ್ರೀ ರೋಗ ತಜ್ಞರ ಸಂಘದ ಅಧ್ಯಕ್ಷೆ ಡಾ.ರೂಪಾ ಪ್ರಕಾಶ್ ಸಂತಾನ ಹೀನತೆ ಸಾಮಾಜಿಕ ಪಿಡುಗಾಗಿದ್ದು, ಸಾಕಷ್ಟು ಮಂದಿ ಖಿನ್ನತೆಗೆ ಒಳಗಾಗಲು ಕಾರಣವಾಗು ತ್ತಿದೆ. ಈ ಹಿಂದೆ ಸಂತಾನ ಹೀನತೆಯ ಪ್ರಮಾಣ ಶೇ.5ರಷ್ಟಿತ್ತು. ಆದರೆ, ಕಳೆದ ಕೆಲವು ವರ್ಷಗಳಿಂದ ಶಿಕ್ಷಣ, ಉದ್ಯೋಗ ಸೇರಿದಂತೆ ಕೆಲವು ದಂಪತಿಗಳು ಮಕ್ಕಳಾ ಗುವುದನ್ನು ಮುಂದೂಡುತ್ತಿದ್ದಾರೆ. ಇದರೊಂದಿಗೆ ಒತ್ತಡ ಹಾಗೂ ಇನ್ನಿತರ ಕಾರಣಗಳಿಂದಲೂ ಸಂತಾನ ಹೀನತೆ ಸಮಸ್ಯೆ ಕಾಡುತ್ತಿದೆ. ಇದರಿಂದಾಗಿ ಸಂತಾನ ಹೀನತೆಯ ಪ್ರಮಾಣ ಶೇ.15ಕ್ಕೆ ಏರಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಂತಾನ ಹೀನತೆಯಿಂದ ದಂಪತಿಗಳ ಆರೋಗ್ಯ ಸಮಸ್ಯೆಗಿಂತ ಮನೋ ವೈಕಲ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಹಿಂದೆ ಹೆಣ್ಣು ಮಕ್ಕಳು ಈ ವಿಚಾರವಾಗಿ ಸಾಕಷ್ಟು ಶೋಷಣೆಗೆ ಒಳಾಗುತ್ತಿದ್ದರು. ಮಕ್ಕಳಾಗ ದಿದ್ದರೆ ಮಹಿಳೆಯರನ್ನೇ ದೂರುತ್ತಿದ್ದರು. ಅಲ್ಲದೆ ಮಕ್ಕಳಾಗಲಿಲ್ಲ ಎಂಬ ಕಾರಣ ಕ್ಕಾಗಿ ಪುರುಷರು ಮೂರ್ನಾಲ್ಕು ಮದುವೆ ಯಾಗಿರುವ ಉದಾಹರಣೆಯೂ ನಮ್ಮ ಮುಂದೆ ಇದೆ. ಸಂತಾನಹೀನತೆ ಸಮಸ್ಯೆಗೆ ಮಹಿಳೆಯರಂತೆ ಪುರುಷರೂ ಕಾರಣರಾಗು ತ್ತಾರೆ. ಈ ಹಿನ್ನೆಲೆಯಲ್ಲಿ ಐವಿಎಫ್ ಚಿಕಿತ್ಸೆಗೆ ದಂಪತಿಗಳು ಕಡ್ಡಾಯವಾಗಿ ಬರಬೇಕು. ಮಕ್ಕಳನ್ನು ಪಡೆಯಲು ಸಮಸ್ಯೆ ಎದುರಿಸು ತ್ತಿರುವ ದಂಪತಿಗಳು ಈ ಸಂತಸ ಐವಿಎಫ್ ನಂತಹ ಸಂಸ್ಥೆಗಳಲ್ಲಿ ಸೂಕ್ತ ಚಿಕಿತ್ಸೆ ಯೊಂದಿಗೆ ಮಾರ್ಗದರ್ಶನ ಪಡೆಯುವ ಮೂಲಕ ಮಕ್ಕಳನ್ನು ಪಡೆಯಬಹುದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ವೈದ್ಯ ಡಾ.ರಾಜಶೇಖರ್, ಕವಯತ್ರಿ ಡಾ.ಲತಾ ರಾಜಶೇಖರ್, ಹಿರಿಯ ವೈದ್ಯ ಡಾ. ಅಂಬರೀಷ್ ಬಂಡಿವಾಡ್, ಮೈಸೂರು ಪ್ರಸೂತಿ ಶಾಸ್ತ್ರ ಮತ್ತು ಸ್ತ್ರೀ ರೋಗ ತಜ್ಞರ ಸಂಘದ ಕಾರ್ಯದರ್ಶಿ ಡಾ.ಎನ್. ಪುಷ್ಪಲತಾ, ಡಾ.ಸೋನಿಯಾ ಮಂದಪ್ಪ, ಡಾ.ಶ್ವೇತ ಪದಕಿ, ಸಂತಸ ಐವಿಎಫ್‍ನ ನಿರ್ದೇಶಕಿ ಡಾ.ಯೋಗಿತಾ ಸಂಜಯ್, ಸಂತಸ ಐವಿಎಫ್ ಅಂಡ್ ಎಂಡೋ ಸರ್ಜರಿ ಇನ್ಸ್‍ಟಿಟ್ಯೂಟ್‍ಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಸೌಮ್ಯ ದಿನೇಶ್, ಡಾ. ನಿವೇದಿತ ಶೆಟ್ಟಿ(ಮಣಿಪಾಲ್ ಆಸ್ಪತ್ರೆ), ಚಿತ್ರ ಆಸ್ಪತ್ರೆ ಐಇಎಫ್ ಕೇಂದ್ರದ ಡಾ.ಪ್ರಿಯಾ ಮಹೇಶ್, ಸಂತಸ ಐವಿಎಫ್‍ನ ಡಾ. ಯೋಗಿತಾ ರಾವ್, ಸಿರಿ ಕೇರ್ ಐವಿಎಫ್ ಸಂಸ್ಥೆಯ ಡಾ.ಶಿಲ್ಪಾ ಸಂತೃಪ್ತ್, ಸ್ಪಂದನಾ ಐವಿಎಫ್‍ನ ಡಾ.ಜಶ್ರೀ ವಿರೂಪಾಕ್ಷ, ನವ್ಯ ಐಇಎಫ್‍ನ ಡಾ.ನವ್ಯ ನೈರುತ್ಯ, ಮಾತೃಛಾಯ ಐಇಎಫ್ ಡಾ.ಚೇತನ, ಪ್ರೇರಣ ಐಇಎಫ್ ಡಾ.ಮಾಧುರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »