ಜು.12ರಿಂದ ಶಾಸಕ ರಾಮದಾಸರ ಮನೆ ಮುಂದೆ ಧರಣಿ ಖಚಿತ
ಮೈಸೂರು

ಜು.12ರಿಂದ ಶಾಸಕ ರಾಮದಾಸರ ಮನೆ ಮುಂದೆ ಧರಣಿ ಖಚಿತ

July 2, 2020

ಮೈಸೂರು, ಜು.1(ಆರ್‍ಕೆಬಿ)- ಮೈಸೂರಿನ ಸಿದ್ದಾರ್ಥನಗರ, ಕೆಸಿ, ಜೆಸಿ, ಆಲನಹಳ್ಳಿ ಸೇರಿ ಐದು ಬಡಾವಣೆ ಜೂನ್ ಅಂತ್ಯಕ್ಕೆ `ಬಿ’ ಖರಾಬು ಮುಕ್ತಗೊಳ್ಳಲಿದೆ ಎಂದು ಹೇಳಿದ್ದ ಶಾಸಕ ಎಸ್.ಎ.ರಾಮದಾಸ್ ಅವರ ಹೇಳಿಕೆಯಂತೆ ಜೂನ್ ಅಂತ್ಯವಾಗಿದೆ. ಅವರಿಗೆ ನಾವು ನೀಡಿದ್ದ ಒಂದು ತಿಂಗಳ ಗಡುವು ಜು.12ರಂದು ಮುಗಿಯಲಿದ್ದು, ಅಷ್ಟರೊಳಗೆ ಈ ಬಡಾವಣೆಗಳು ಬಿ ಖರಾಬಿನಿಂದ ಮುಕ್ತಗೊಳ್ಳದಿದ್ದರೆ ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸುವುದು ಖಚಿತ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ `ಮೈಸೂರು ಮಿತ್ರ’ನಿಗೆ ತಿಳಿಸಿದರು. ಕುರುಬಾರಹಳ್ಳಿ ಸರ್ವೇ ನಂ.4, ಆಲನಹಳ್ಳಿ ಸರ್ವೆ ನಂ.41ಕ್ಕೆ ಸೇರಿದ 354 ಎಕರೆ ಪ್ರದೇಶದಲ್ಲಿನ ಐದು ಬಡಾ ವಣೆಗಳಲ್ಲಿನ ಜನರಿಗೆ ನಿಜ ಸಂಗತಿ ತಿಳಿಸಿ, ಸುಳ್ಳು ಹೇಳುವ ಕೆಲಸ ಮಾಡಬೇಡಿ ಎಂದು ಶಾಸಕ ರಾಮದಾಸ್‍ಗೆ ಕಳೆದ ತಿಂಗಳು ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದೆ. ಅವರು ಜೂನ್ ಅಂತ್ಯದೊಳಗೆ ಈ 5 ಬಡಾವಣೆಗಳು ಬಿ ಖರಾಬಿನಿಂದ ಮುಕ್ತಗೊಳ್ಳಲಿವೆ ಎಂದು ಹೇಳಿದ್ದರು. ಜೂನ್ ಮುಗಿಯಿತು. ಆದರೆ ಈ ಐದು ಬಡಾವಣೆಗಳ ನಿವಾಸಿಗಳು ಮತ್ತೊಮ್ಮೆ ನಿರಾಶೆ ಯಾಗುವಂತಾಗಿದೆ ಎಂದರು. ತಿಂಗಳೊಳಗೆ ಬಿ ಖರಾಬು ಮುಕ್ತಗೊಳ್ಳದಿದ್ದರೆ ಶಾಸಕರ ಮನೆ ಮುಂದೆ ಅನಿರ್ಧಿಷ್ಟಾವಧಿ ಧರಣಿ ಕೂರುವುದಾಗಿ ಕಳೆದ ಜೂ.12ರಂದು ಸುದ್ದಿಗೋಷ್ಠಿ ಯಲ್ಲಿ ಗಡುವು ನೀಡಿದ್ದೆ. ಇನ್ನೂ 10 ದಿನಗಳಿವೆ. ಅಷ್ಟರೊಳಗೆ ಬಿ ಖರಾಬು ಮುಕ್ತಗೊಳಿಸಿ, ಐದು ಬಡಾವಣೆಗಳ ನಿವಾಸಿಗಳ ಸಮಸ್ಯೆ ಬಗೆಹರಿಯದಿದ್ದರೆ ನಾವು ನೀಡಿದ ಹೇಳಿಕೆ ಯಂತೆ ಜು.12ರಂದು ಶಾಸಕ ರಾಮದಾಸ್ ಮನೆ ಮುಂದೆ ಅನಿರ್ಧಿಷ್ಟಾವಧಿ ಧರಣಿ ಕುಳಿತುಕೊಳ್ಳಲಿದ್ದೇವೆ. ನಮ್ಮ ಹೇಳಿಕೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು. ಅಷ್ಟರೊಳಗೆ ಶಾಸಕರು ಬಿ ಖರಾಬು ಮುಕ್ತಗೊಳಿಸುವಲ್ಲಿ ಯಶಸ್ವಿಯಾದರೆ ನಾವೇ ಖುದ್ದು ಅವರನ್ನು ಭೇಟಿ ಮಾಡಿ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಎಂ.ಲಕ್ಷ್ಮಣ ಹೇಳಿದರು.

ಘೋಷಿಸುವುದಷ್ಟೇ ಬಾಕಿ ಇದೆ
ಮೈಸೂರು, ಜು.1(ಆರ್‍ಕೆಬಿ)- ಮೈಸೂರಿನ ಸಿದ್ದಾರ್ಥನಗರ, ಕೆಸಿ, ಜೆಸಿ, ಆಲನಹಳ್ಳಿ ಸೇರಿದಂತೆ ಐದು ಬಡಾ ವಣೆಗಳನ್ನು ಬಿ ಖರಾಬಿನಿಂದ ಮುಕ್ತಗೊಳಿಸುವ ಕಾರ್ಯ ಪೂರ್ಣಗೊಂಡಿದೆ. ಆದರೆ ಅದನ್ನು ಘೋಷಿಸುವುದಷ್ಟೇ ಬಾಕಿ ಇದೆ. ಕಂದಾಯ ಸಚಿವರು ಕೋವಿಡ್-19 ಕೆಲಸಗಳಲ್ಲಿ ತೊಡಗಿ ಸಿಕೊಂಡಿರುವುದರಿಂದ ಇದು ವಿಳಂಬವಾಗಿದೆ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಕಂದಾಯ ಸಚಿವ ಆರ್.ಅಶೋಕ್ ಅವರ ಸಮಯಕ್ಕಾಗಿ ಕಾಯಲಾಗುತ್ತಿದೆ. ಅವರು ಸಿಕ್ಕಿದ ತಕ್ಷಣ ಅವರನ್ನು ಕರೆತಂದು ಬಿ ಖರಾಬಿನಿಂದ ವಿಹಿತಗೊಳಿಸಿರುವ ಆದೇಶವನ್ನು ಸಂಬಂಧಪಟ್ಟ ನಿವಾಸಿಗಳ ಸಮ್ಮುಖದಲ್ಲಿ ಘೋಷಣೆ ಮಾಡಲಾಗುವುದು ಎಂದು ಅವರು ಸ್ಪಷ್ಪಪಡಿಸಿದ್ದಾರೆ.

Translate »