ಜೂ.23ರಿಂದ ಆಗಸ್ಟ್ 16ರವರೆಗೆ  ಭಾರೀ ವಾಹನ ಸಂಚಾರ ನಿಷೇಧ
ಕೊಡಗು

ಜೂ.23ರಿಂದ ಆಗಸ್ಟ್ 16ರವರೆಗೆ ಭಾರೀ ವಾಹನ ಸಂಚಾರ ನಿಷೇಧ

June 17, 2021

ಮಡಿಕೇರಿ, ಜೂ.16-ಕೊಡಗಿನಲ್ಲಿ ಈಗಾಗಲೇ ಮಳೆಗಾಲ ಆರಂಭವಾಗಿದೆ. ಮುಂದಿನ ಮುಂಗಾರಿನಲ್ಲಿ ನದಿ ಪಾತ್ರಗಳಲ್ಲಿ ನೀರಿನ ಹರಿವು ಹೆಚ್ಚಾಗಲಿದ್ದು, ಸಾರ್ವಜನಿ ಕರ ಸುರಕ್ಷಾ ಹಾಗೂ ಆಸ್ತಿ-ಪಾಸ್ತಿ ರಕ್ಷಣೆ ಹಿತ ದೃಷ್ಟಿಯಿಂದ ಜೂ.23ರಿಂದ ಆಗಸ್ಟ್ 16ರವ ರೆಗೆ ಮರಳು, ಮರದ ದಿಮ್ಮಿ ಸಾಗಾಣಿಕೆ ಸೇರಿ ದಂತೆ ಎಲ್ಲಾ ರೀತಿಯ ಭಾರೀ ವಾಹನಗಳ ಸಂಚಾರಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ನಿರ್ಬಂಧ ವಿಧಿಸಿ, ಆದೇಶ ಹೊರಡಿಸಿದ್ದಾರೆ.

ಅಡುಗೆ ಅನಿಲ ಮತ್ತು ಇಂಧನ ಪೂರೈಕೆ ವಾಹನಗಳು, ಹಾಲು ಸರಬರಾಜು ವಾಹನಗಳು, ಸರ್ಕಾರದ ಕೆಲಸ ನಿಮಿತ್ತ ಬಳಸುವ ವಾಹನಗಳು, ಶಾಲಾ-ಕಾಲೇಜು ಮತ್ತು ಸಾರ್ವಜನಿಕ ಪ್ರಯಾಣಿಕರ ವಾಹನಗಳಿಗೆ (ಮಲ್ಟಿ ಆ್ಯಕ್ಸಿಲ್ ಬಸ್‍ಗಳು ಸೇರಿದಂತೆ) ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ. ಕೊಡಗಿನಲ್ಲಿ ಮುಂಗಾರು ಮಳೆ ಹೆಚ್ಚಾಗುವ ದಿನಗಳಲ್ಲಿ ರಸ್ತೆಗಳು ಹದಗೆಡುತ್ತವೆ. ಸರಕು ಸಾಗಾಣಿಕೆ ವಾಹನಗಳ ಸಂಚಾರದಿಂದ ರಸ್ತೆ ಬದಿ ಮಣ್ಣು ರಸ್ತೆಗೆ ಕುಸಿದು ಸಂಚಾರಕ್ಕೆ ಅಡಚಣೆಯಾಗುವುದರ ಜೊತೆಗೆ ಸಾಕಷ್ಟು ಅಪಘಾತಗಳಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಕಳೆದ 3 ವರ್ಷದಲ್ಲಿ ಕೊಡಗಿನಲ್ಲಿ ಸುರಿದ ಭಾರೀ ಮಳೆ ಹಾಗೂ ನೆರೆ ಹಾವಳಿಯಿಂದ ಹಲವಾರು ರಸ್ತೆಗಳು ಹಾಳಾಗಿವೆ. ಅದನ್ನು ಈಗಾಗಲೇ ಸರಿಪಡಿಸಲಾಗಿದ್ದು, ಈ ನಡುವೆ ಪ್ರಸ್ತುತ ವರ್ಷದ ಮಳೆಗಾಲ ಆರಂಭವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಂಭ ವಿಸಬಹುದಾದ ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಲಘು ವಾಹನಗಳು, ಬಸ್ ಹಾಗೂ 10 ಟನ್ ತೂಕದೊಳಗಿನ ಸರಕು ಸಾಗಾಣಿಕೆ ವಾಹನಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ರೀತಿಯ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸ ಲಾಗಿದೆ ಎಂದು ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಮೋಟಾರು ವಾಹನ ಕಾಯ್ದೆ-1988ರ ಸೆಕ್ಷನ್ 116ರಂತೆ ಅವಶ್ಯವಿರುವ ಸೂಚನಾ ಫಲಕಗಳನ್ನು ಅಳವಡಿಸಲು ಜಿಲ್ಲಾ ಎಸ್ಪಿ ಅವರಿಗೆ ಅನುಮತಿ ನೀಡಲಾಗಿದೆ. ಕೊಡಗು ಮುಖಾಂತರ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಕುಶಾಲನಗರ ಮತ್ತು ಸಂಪಾಜೆಯಲ್ಲಿ ಚೆಕ್‍ಪೋಸ್ಟ್‍ಗಳನ್ನು ನಿರ್ಮಿಸಿ ದಿನದ 24 ಗಂಟೆಯೂ ನಿಗಾ ವಹಿಸಲು ಸಿಬ್ಬಂದಿ ನಿಯೋಜಿಸುವಂತೆ ಹಾಗೂ ಮೊಬೈಲ್ ಪ್ಯಾಟ್ರೋಲಿಂಗ್ ನಡೆಸುವಂತೆಯೂ, ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

Translate »