ಮೈಸೂರಲ್ಲಿ 10 ವರ್ಷದವರೆಗಿನ  4520 ಮಕ್ಕಳಿಗೆ ಕೊರೊನಾ
ಮೈಸೂರು

ಮೈಸೂರಲ್ಲಿ 10 ವರ್ಷದವರೆಗಿನ 4520 ಮಕ್ಕಳಿಗೆ ಕೊರೊನಾ

June 17, 2021

ಮೈಸೂರು, ಜೂ.16-ಕೊರೊನಾ ಮೂರನೇ ಅಲೆ ಮಕ್ಕಳನ್ನು ಕಾಡುತ್ತದೆ ಎಂದು ತಜ್ಞರು ನೀಡಿರುವ ಎಚ್ಚರಿಕೆ ಬೆನ್ನಲ್ಲೇ ಕೊರೊನಾ ಒಂದು ಮತ್ತು ಎರಡನೇ ಅಲೆಯಲ್ಲಿ ಮೈಸೂರು ಜಿಲ್ಲೆ ಯಲ್ಲಿ 10 ವರ್ಷದೊಳಗಿನ 4520 ಮಕ್ಕಳು ಸೋಂಕಿಗೆ ಒಳಗಾಗಿದ್ದು, ಚೆಲು ವಾಂಬ ಆಸ್ಪತ್ರೆಯಲ್ಲಿ ದಾಖಲಾಗಿದ್ದ 13 ಮಕ್ಕಳು ಸಾವನ್ನಪ್ಪಿರುವುದು ಅಂಕಿ-ಅಂಶಗಳಿಂದ ದೃಢಪಟ್ಟಿದೆಯಾದರೂ, ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ಮಕ್ಕಳು ಸೋಂಕಿಗೆ ಬಲಿಯಾಗಿದ್ದಾರೆ ಎಂಬು ದರ ವಿವರ ಮಾತ್ರ ಲಭ್ಯವಾಗಿಲ್ಲ.

2020ರ ಮಾರ್ಚ್ ತಿಂಗಳಿನಲ್ಲಿ ಕೊರೊನಾ ಒಂದನೇ ಅಲೆ ಪ್ರಾರಂಭ ವಾದರೆ, 2021ರ ಮಾರ್ಚ್‍ನಲ್ಲಿ ಎರಡನೇ ಅಲೆ ಆರಂಭವಾಯಿತು. ಒಂದನೇ ಅಲೆಗಿಂತ ಎರ ಡನೇ ಅಲೆಯಲ್ಲಿ ಹೆಚ್ಚಿನ ಮಕ್ಕಳು ಸೋಂಕಿಗೆ ಒಳ ಗಾಗಿದ್ದಾರೆ. ಮೊದಲನೇ ಅಲೆಯಲ್ಲಿ 5 ವರ್ಷಕ್ಕೊಳ ಪಟ್ಟ 628 ಮತ್ತು 6 ರಿಂದ 10 ವರ್ಷಕ್ಕೊಳಪಟ್ಟ 852 ಸೇರಿದಂತೆ ಒಟ್ಟು 1480 ಮಕ್ಕಳು ಸೋಂಕಿನಿಂದ ಭಾದಿತರಾಗಿ ದ್ದರೆ, 2ನೇ ಅಲೆಯಲ್ಲಿ ಕೇವಲ ಮೂರೂ ವರೆ ತಿಂಗಳಲ್ಲೇ 3040 ಮಕ್ಕಳಿಗೆ ಸೋಂಕು ತಗು ಲಿದೆ. ಮೂರನೇ ಅಲೆಯಲ್ಲಿ ಇದರ ಪ್ರಮಾಣ ಹೆಚ್ಚಾಗ ಬಹುದು ಎಂಬ ಆತಂಕ ದಿಂದ ಜಿಲ್ಲಾಡಳಿತ ಈಗಾ ಗಲೇ ಸಂಪೂರ್ಣವಾಗಿ ಸಜ್ಜಾಗುತ್ತಿದೆ.

11ರಿಂದ 20 ವರ್ಷದೊಳಗಿನ ಮಕ್ಕಳು ಒಂದನೇ ಅಲೆಯಲ್ಲಿ 3841 ಮಂದಿ ಸೋಂಕಿಗೆ ಒಳಗಾದರೆ, 2ನೇ ಅಲೆಯಲ್ಲಿ ಅದರ ಪ್ರಮಾಣ ಭಾರೀ ಹೆಚ್ಚಳವಾಗಿದ್ದು, 9469 ಮಂದಿಗೆ ಸೋಂಕು ತಗುಲಿದೆ. ಎರಡೂ ಅಲೆಗಳಿಂದ ಈ ವರ್ಗದ ಒಟ್ಟು 13,310 ಮಂದಿ ಸೋಂಕಿಗೆ ಒಳ ಗಾಗಿದ್ದಾರೆ. 2ನೇ ಅಲೆ ಆರಂಭವಾದ 2021ರ ಮಾರ್ಚ್ ತಿಂಗಳಿನಲ್ಲಿ 5 ವರ್ಷದೊಳಗಿನ 10 ಮಕ್ಕಳು, 6ರಿಂದ 10 ವರ್ಷದೊಳಗಿನ 30 ಹಾಗೂ 11 ರಿಂದ 20 ವರ್ಷದೊಳಗಿನ 313 ಮಕ್ಕ ಳಿಗೆ ಸೋಂಕು ತಗುಲಿತ್ತು. ಏಪ್ರಿಲ್ ತಿಂಗ ಳಿನಲ್ಲಿ ಈ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, 5 ವರ್ಷದೊಳಗಿನ 251, 6ರಿಂದ 10 ವರ್ಷದೊಳಗಿನ 320, 11ರಿಂದ 20 ವರ್ಷದೊಳಗಿನ 2036 ಮಕ್ಕಳು ಸೋಂಕಿಗೆ ಒಳಗಾದರು. ಮೇ ತಿಂಗಳಿನಲ್ಲಿ ಸೋಂಕು ಮತ್ತಷ್ಟು ಹೆಚ್ಚಳವಾಗಿದ್ದು,5 ವರ್ಷದೊಳಗಿನ 707, 6ರಿಂದ 10 ವರ್ಷದೊಳಗಿನ 1224 ಹಾಗೂ 11ರಿಂದ 20 ವರ್ಷದೊಳಗಿನ 5714 ಮಂದಿಗೆ ಸೋಂಕು ತಗುಲಿದೆ. ಜೂನ್ ತಿಂಗಳಿನಲ್ಲಿ ಕೇವಲ 12 ದಿನಕ್ಕೆ 5 ವರ್ಷದೊಳಗಿನ 170, 6ರಿಂದ 10 ವರ್ಷದೊಳಗಿನ 327 ಹಾಗೂ 11 ರಿಂದ 20 ವರ್ಷದೊಳಗಿನ 1406 ಮಂದಿಗೆ ಕೊರೊನಾ ದೃಢಪಟ್ಟಿದೆ. ಒಟ್ಟಾರೆ ಕೊರೊನಾ ಎರಡೂ ಅಲೆಗಳಿಂದ 5 ವರ್ಷದೊಳಗಿನ 1766, 6ರಿಂದ 10 ವರ್ಷ ದೊಳಗಿನ 2754, 11ರಿಂದ 20 ವರ್ಷದೊಳಗಿನ 13,310 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದು, 3ನೇ ಅಲೆ ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬ ತಜ್ಞರ ಅಭಿಪ್ರಾಯದಿಂದ ಪೋಷಕರು ಎಚ್ಚರಿಕೆ ವಹಿಸಬೇಕಾದ ಅಗತ್ಯತೆ ಇದೆ.

13 ಮಕ್ಕಳ ಸಾವು: ಮೊದಲನೆ ಅಲೆಯಲ್ಲಿ 6 ಹಾಗೂ ಎರಡನೇ ಅಲೆಯಲ್ಲಿ 7 ಸೇರಿದಂತೆ ಒಟ್ಟು 13 ಮಕ್ಕಳು ಸೋಂಕಿನಿಂದ ಮೃತಪಟ್ಟಿದ್ದಾರೆ. ಎರಡನೇ ಅಲೆಗೆ ಸಂಬಂಧಿಸಿದಂತೆ ಮೇ ತಿಂಗಳೊಂದರಲ್ಲೇ 6 ಮಕ್ಕಳು ಹಾಗೂ ಒಂದು ಅವಧಿ ಪೂರ್ವ ಹೆರಿಗೆಯಾಗಿದ್ದ ಮಗು ಸಾವನ್ನಪ್ಪಿದರೆ, ಅದರಲ್ಲಿ 11 ವರ್ಷದ ಮಗು ಬುದ್ಧಿಮಾಂದ್ಯತೆಗೆ ಒಳಗಾಗಿತ್ತು. 4 ಮಕ್ಕಳು ಒಂದು ವರ್ಷಕ್ಕಿಂತ ಕಡಿಮೆಯವರು.

ಮಕ್ಕಳ ಆಸ್ಪತ್ರೆ ಸಜ್ಜು: ಮೂರನೇ ಅಲೆ ಎದುರಿಸಲು ಈಗಾಗಲೇ ಮಕ್ಕಳ ಆಸ್ಪತ್ರೆಯನ್ನು ಸಜ್ಜುಗೊಳಿಸಲಾಗುತ್ತಿದೆ. ಈ ಆಸ್ಪತ್ರೆಯಲ್ಲಿ 120 ಹಾಸಿಗೆಗಳಿದ್ದು, ಅವುಗಳಲ್ಲಿ 100 ಹಾಸಿಗೆಗಳಿಗೆ ಆಮ್ಲಜನಕ ಸಂಪರ್ಕ ಕಲ್ಪಿಸಲಾಗಿದೆ. ಮೊದಲ ಅಲೆಯಿಂದಲೇ ಈ ಆಸ್ಪತ್ರೆ ಕೊರೊನಾದಿಂದ ಮಕ್ಕಳನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಂಡಿದ್ದು, ಕಳೆದ ವರ್ಷದಿಂ ದಲೇ ಸೋಂಕಿತ ಮಕ್ಕಳಿಗಾಗಿ ಪ್ರತ್ಯೇಕ ವಾರ್ಡ್ ಮೀಸಲಿಡಲಾಗಿತ್ತು. ಆಗ ಈ ಪ್ರತ್ಯೇಕ ವಾರ್ಡ್‍ನಲ್ಲಿ 18 ಹಾಸಿಗೆಗಳ ಪೈಕಿ 2 ವೆಂಟಿಲೇಟರ್, 6 ಐಸಿಯು ಬೆಡ್, 3 ವಾರ್ಮರ್ ಗಳು ಒಳಗೊಂಡಿದ್ದವು. `ಮೈಸೂರು ಮಿತ್ರ’ನ ಜೊತೆ ಮಾತನಾಡಿದ ಚೆಲುವಾಂಬ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸುಧಾ ರುದ್ರಪ್ಪ, ಕೊರೊನಾ ಸೋಂಕಿತ ಮಕ್ಕಳ ರಕ್ಷಣೆಗಾಗಿ ಮಕ್ಕಳ ಆಸ್ಪತ್ರೆಯಲ್ಲಿ 18 ಹಾಸಿಗೆಯುಳ್ಳ ಪ್ರತ್ಯೇಕ ವಾರ್ಡ್ ಮೀಸಲಿರಿಸಲಾಗಿದೆ. ಟ್ರಯಾಜ್ ವಾರ್ಡ್ ಕೂಡ ಇದ್ದು, ಮಕ್ಕಳು ಬಂದರೆ ಚಿಕಿತ್ಸೆಯೊಂದಿಗೆ ಟ್ರಯಾಜ್ ಹಾಗೂ ಟೆಸ್ಟ್ ಮಾಡಲಾಗುತ್ತದೆ. ಮಕ್ಕಳಲ್ಲಿ ವಯಸ್ಕರಂತೆ ಕೇವಲ ಕೆಮ್ಮು-ಜ್ವರ ಮಾತ್ರ ಬರಲ್ಲ. ಬದಲಿಗೆ ಭೇದಿ, ಕೆಮ್ಮು, ಗಂಟಲು ನೋವು, ಸುಸ್ತು ಸೇರಿದಂತೆ ವಿವಿಧ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದರು. ಮೈಲ್ಡ್ ಸೋಂಕು ಕಾಣಿಸಿಕೊಳ್ಳುವ ಮಕ್ಕಳಿಗೆ ಚಿಕಿತ್ಸೆ ನೀಡಿ ಪ್ರತೀ ದಿನ ಯಾವ ಯಾವ ಔಷಧಿ ಕೊಡಬೇಕು ಎಂಬುದನ್ನು ವಿವರಿಸಿ ಹೋಂ ಐಸೊಲೇಷನ್‍ಗೆ ಕಳುಹಿಸುತ್ತೇವೆ. ಆರೋಗ್ಯದಲ್ಲಿ ಏನಾದರೂ ಏರುಪೇರು ಕಾಣಿಸಿಕೊಂಡರೆ ತಕ್ಷಣವೇ ಮಕ್ಕಳನ್ನು ಆಸ್ಪತ್ರೆಗೆ ಕರೆತರುವಂತೆ ಪೋಷಕರಿಗೆ ಸೂಚಿಸಲಾಗುತ್ತದೆ. ಹೀಗೆ ಹೋಂ ಐಸೋಲೇಷನ್‍ಗೆ ಕಳುಹಿಸಿದ ಮಕ್ಕಳ ಬಗ್ಗೆ ಜಿಲ್ಲಾ ಸರ್ವೆಲನ್ಸ್ ಆಫೀಸರ್‍ಗೆ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.

Translate »