ಅರುಣ್ ಸಿಂಗ್‍ರಿಂದ ಅಭಿಪ್ರಾಯ ಸಂಗ್ರಹ
News

ಅರುಣ್ ಸಿಂಗ್‍ರಿಂದ ಅಭಿಪ್ರಾಯ ಸಂಗ್ರಹ

June 17, 2021

ಬೆಂಗಳೂರು,ಜೂ.16(ಕೆಎಂಶಿ)-ಕರ್ನಾಟಕದಲ್ಲಿ ನಾಯ ಕತ್ವ ಬದಲಾವಣೆ ವಿಚಾರಕ್ಕೆ ಅಂತ್ಯ ಹಾಡಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‍ಸಿಂಗ್ ನಗರಕ್ಕೆ ಆಗಮಿಸಿ, ಪಕ್ಷದ ಸಚಿವರು ಹಾಗೂ ಮುಖಂಡರೊಟ್ಟಿಗೆ ಚರ್ಚೆ ನಡೆಸಿದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಪದೇ ಪದೆ ಅರುಣ್‍ಸಿಂಗ್ ಹೇಳಿದ್ದರೂ ಸಚಿವರು ಮತ್ತು ಶಾಸಕರು ನಾಯಕತ್ವದ ವಿರುದ್ಧ ಅಪಸ್ವರ ಎತ್ತಿದ್ದ ಹಿನ್ನೆಲೆ ಯಲ್ಲಿ ಖುದ್ದು ಅಭಿಪ್ರಾಯ ಪಡೆಯಲು ಮೂರು ದಿನಗಳ ಕಾಲ ರಾಜ್ಯದಲ್ಲಿ ತಂಗಲಿದ್ದಾರೆ. ಅರುಣ್‍ಸಿಂಗ್ ರಂಗ ಪ್ರವೇಶ ಮಾಡುತ್ತಿದ್ದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಪರ ಮತ್ತು ವಿರೋಧ ಬಿರುಸಿನ ಚಟುವಟಿಕೆಗಳು ಆರಂಭ ಗೊಂಡಿವೆ. ಮುಖ್ಯಮಂತ್ರಿ ಬಣದವರು ಸಾರ್ವಜನಿಕ ವಾಗಿಯೇ ತಮ್ಮ ಅಭಿಪ್ರಾಯವನ್ನು ನಾಯಕನ ಪರವಾಗಿ ಹೇಳಿಕೆ ಮತ್ತು ಸಹಿ ಸಂಗ್ರಹ ಆರಂಭಿಸಿದ್ದರೆ, ವಿರೋಧಿ ಗುಂಪಿನವರು ಮಾತ್ರ ಯಾವುದನ್ನೂ ಬಹಿರಂಗಪಡಿಸಿಲ್ಲ.

ಯಡಿಯೂರಪ್ಪ ಗುಂಪಿನವರು ವಿರೋಧಿ ಗುಂಪಿನ ವರನ್ನು ಕಾಲ್ಕೆರೆದು ಕರೆದರೂ ಅವರು ಯಾವುದೇ ಬಹಿರಂಗ ಹೇಳಿಕೆ ನೀಡುತ್ತಿಲ್ಲ. ಪರ-ವಿರೋಧ ಬಣದ ಪ್ರಮುಖರೆಲ್ಲರಿಗೂ ಅರುಣ್‍ಸಿಂಗ್ ತಮ್ಮ ಭೇಟಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನಾವು ನಿಮ್ಮ ಪರ ಇದ್ದೇವೆ ಎಂದು ಮುಖ್ಯಮಂತ್ರಿಯವರಿಗೆ ತೋರಿಸಲು ಸಚಿವರು, ಶಾಸಕರು ಗಳು ಬೆಳಗಿನಿಂದಲೇ ಯಡಿಯೂರಪ್ಪನವರನ್ನು ಭೇಟಿ ಮಾಡಿ, ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯವರು ನಾಯಕತ್ವ ಬದಲಾವಣೆ ಇಲ್ಲ. ನೀವ್ಯಾವುದನ್ನೂ ಚಿಂತನೆ ಮಾಡಬೇಡಿ. ಮೌನವಾಗಿರಿ. ಹೇಳಿಕೆಗಳನ್ನು ಕೊಡಬೇಡಿ ಎಂದು ತಿಳಿ ಹೇಳಿ ಕಳುಹಿಸಿದ್ದಾರೆ. ಮತ್ತೊಂ ದೆಡೆ ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮಾತ್ರ ತಮ್ಮ ಹಿಂದಿನ ಧಾಟಿಯಲ್ಲೇ ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದಂತೆ ಇಂದೂ ಕೂಡಾ ಬಾಂಬ್ ಸಿಡಿಸಿದ್ದಾರೆ. ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಕೆಲವರು ವರಿಷ್ಠರ ಮುಂದೆ ಬೇಡಿಕೆ ಇಟ್ಟಿರುವುದು ನಿಜ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರೇ ಮುಂದಿನ 2 ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಬದಲಾವಣೆಯಾಗಬೇಕು ಎನ್ನುತ್ತಿದ್ದಾರೆ. ಅಂತಿಮವಾಗಿ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುತ್ತಾರೆ ಎಂದು ತಿಳಿಸಿದ್ದಾರೆ.

ಮತ್ತೊಂದಡೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮುಖ್ಯಮಂತ್ರಿಯವರ ಪರ 65 ಶಾಸಕರು ಸಹಿ ಹಾಕಿರುವ ಪತ್ರ ತಮ್ಮ ಬಳಿ ಇದೆ ಎಂದು ಪುನರುಚ್ಚರಿಸಿದ್ದಾರೆ. ಇದರ ಮಧ್ಯೆಯೇ ಅರುಣ್‍ಸಿಂಗ್ ಸಚಿವರ ಜೊತೆ ಸಮಾಲೋಚನೆ ನಡೆಸಿದ್ದಾರೆ. ನಾಳೆ ಶಾಸಕರ ಜೊತೆ ನಾಲ್ಕು ಗೋಡೆಗಳ ಮಧ್ಯೆ ಸಮಾಲೋಚನೆ ಮಾಡಲಿದ್ದಾರೆ. ಇನ್ನು ಮೂರು ದಿನಗಳ ಕಾಲ ಬಿಜೆಪಿಯ ಬಣಗಳಲ್ಲಿ ಯಾರು ಮೇಲುಗೈ ಸಾಧಿಸುತ್ತಾರೋ ಕಾದು ನೋಡಬೇಕು.

Translate »