ಮೈಸೂರು,ಸೆ.11(ಪಿಎಂ)-ಕಾಯಕ ಸಮಾಜಗಳಿ ರುವ `2ಎ ಮೀಸಲಾತಿ ಪಟ್ಟಿ’ಗೆ ಪಂಚಮಸಾಲಿ ಸೇರಿ ದಂತೆ ಇನ್ನಿತರ ಲಿಂಗಾಯತ ಸಮುದಾಯಗಳನ್ನು ಸೇರಿಸಬೇಕೆಂಬ ಒತ್ತಾಯಕ್ಕೆ ಸರ್ಕಾರ ಮಣಿಯ ಬಾರದೆಂದು ಆಗ್ರಹಿಸಿ ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ವತಿಯಿಂದ ಸೆ.20ರಂದು ಬೆಂಗಳೂರಿ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ವಿಧಾನಪರಿಷತ್ ಮಾಜಿ ಸದಸ್ಯರೂ ಆದ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ತಿಳಿಸಿದರು.
ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಸಭಾಂಗಣ ದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಯಕ ಸಮಾಜಗಳ ಒಕ್ಕೂಟದ ರಾಜ್ಯ ಕಾರ್ಯಕಾರಿಣಿ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿ, ಲಿಂಗಾಯತ ಗೌಡ, ಮಲೆಗೌಡ ಲಿಂಗಾಯತ ಮತ್ತು ದೀಕ್ಷಾ ಲಿಂಗಾಯತ ಸಮುದಾಯಕ್ಕೆ `2ಎ’ ಮೀಸಲಾತಿ ಸೌಲಭ್ಯ ನೀಡಬಾರದು. ಇದರಿಂದ ಕಾಯಕ ಸಮುದಾಯ ಗಳಿಗೆ ಅನ್ಯಾಯವಾಗಲಿದೆ. ಹಾಗಾಗಿ ಅಂದು ಬೆಂಗ ಳೂರಲ್ಲಿ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಮಡಿವಾಳ, ಸವಿತಾ ಸಮಾಜ, ಗಾಣಿಗ, ಕುಂಬಾರ, ಉಪ್ಪಾರ, ವಿಶ್ವಕರ್ಮ, ಈಡಿಗ, ಯಾದವ ಸೇರಿದಂತೆ ಮೊದಲಾದ ಕಾಯಕ ಸಮಾಜಗಳ ಶ್ರೇಯೋಭಿವೃದ್ಧಿಗೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಸರ್ಕಾರ ಗಳು ಗಮನ ನೀಡಿಲ್ಲ. ಬದಲಿಗೆ ನಮ್ಮ ಈ ಸಮಾಜ ಗಳ ಮೇಲೆ ಶೋಷಣೆಯೇ ಹೆಚ್ಚಾಗುತ್ತಿದೆ. ಈ ನಡುವೆ ಬಲಿಷ್ಠ ಜಾತಿಗಳು ತಮಗೂ ಮೀಸಲಾತಿ ಸೌಲಭ್ಯ ಬೇಕೆಂದು ಹೋರಾಟಕ್ಕೆ ಮುಂದಾಗಿವೆ. ಆ ಮೂಲಕ ನಮ್ಮಂತಹ ಕಾಯಕ ಸಮಾಜಗಳ ಮೇಲೆ ಆಕ್ರಮಣ ನಡೆಸುತ್ತಿವೆ ಎಂದು ದೂರಿದರು. ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಕಾಯಕ ಸಮಾಜಗಳು ಶೇ.15ರಷ್ಟು ಮೀಸ ಲಾತಿ (2ಎ ಮೀಸಲಾತಿಯಡಿ) ಸೌಲಭ್ಯ ಪಡೆಯುತ್ತಿದ್ದೇವೆ. ಈ ಮೀಸಲಾತಿ ಸೌಲಭ್ಯ ಪಡೆಯುತ್ತಿರುವುದು ಮುಂದುವರೆದ ಜಾತಿಗಳಿಗೆ ಹೊಟ್ಟೆಕಿಚ್ಚು ಬಂದಂತಿದೆ. ಅದಕ್ಕಾಗಿ ಮೀಸಲಾತಿ ಯಡಿ ದೊರೆಯುವ ನಮ್ಮ ಮಕ್ಕಳ ಶಿಕ್ಷಣ, ಸರ್ಕಾರಿ ಉದ್ಯೋಗ ಕಿತ್ತುಕೊಳ್ಳಲು ಹೊರಟಿದ್ದಾರೆ. ಅಂತಹ ಸಂದರ್ಭ ರಾಜ್ಯದಲ್ಲಿ ಸೃಷ್ಟಿಯಾಗುವ ಹಂತದಲ್ಲಿದೆ. ಇದಕ್ಕೆ ಒಬ್ಬರು ಸ್ವಾಮೀಜಿ ಕಾರಣ ಎಂಬುದು ಬೇಸರದ ಸಂಗತಿ ಎಂದು ವಿಷಾದಿಸಿದರು.
ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ಯವರು ಈ ಲಿಂಗಾಯತ ಸಮಾಜಗಳ ಮೀಸಲಾತಿ ಹೋರಾಟದ ನಾಯಕತ್ವ ವಹಿಸಿ ದ್ದಾರೆ. ಅವರು ಖಾವಿಧಾರಿಯಾಗಿದ್ದು, ಅವರು ಹೀಗೆ ಒಂದು ಜನಾಂಗದ ಪರವಾಗಿ ನಿಲ್ಲು ವುದು ಸರಿಯಲ್ಲ. ಅವರು ಸರ್ವ ಜನಾಂಗಕ್ಕೆ ಸೇರಿದವರೇ ಹೊರತು ಕೇವಲ ಒಂದು ಜಾತಿಗೆ ಸೇರಿದವರಲ್ಲ. ಮುಂದುವರೆದಿದ್ದರೂ ನಮಗೆ ಮೀಸಲಾತಿ ಬೇಕು ಎಂದು ಇದೇ ಸ್ವಾಮೀಜಿಯವರು ಹೇಳಿದ್ದು, ಇದು ಸಂವಿ ಧಾನಬಾಹಿರ ಹೇಳಿಕೆ. ಪಂಚಮಸಾಲಿಗಳು ಈಗಾಗಲೇ ಶೇ.5ರಷ್ಟು ಮೀಸಲಾತಿ ಪಡೆಯು ತ್ತಿದ್ದಾರೆ ಎಂದರು. ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಬೋರಪ್ಪಶೆಟ್ಟಿ, ಖಜಾಂಚಿ ಲಕ್ಷ್ಮೀಕಾಂತ, ಸಂಘಟನಾ ಕಾರ್ಯದರ್ಶಿ ಪುಟ್ಟಣ್ಣಯ್ಯ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ನಾಗೇಶ್ ಮತ್ತಿತರರು ಪಾಲ್ಗೊಂಡಿದ್ದರು.