ಸಂಚಾರ ನಿಯಮ ಉಲ್ಲಂಘನೆ:  ಪೊಲೀಸರ ವಿಶೇಷ ಕಾರ್ಯಾಚರಣೆ
ಮೈಸೂರು

ಸಂಚಾರ ನಿಯಮ ಉಲ್ಲಂಘನೆ: ಪೊಲೀಸರ ವಿಶೇಷ ಕಾರ್ಯಾಚರಣೆ

September 12, 2021

ಮೈಸೂರು, ಸೆ. 11(ಆರ್‍ಕೆ)- ಕೆಲ ತಿಂಗಳಿಂದ ಬಿಡುವು ನೀಡಿದ್ದ ಸಂಚಾರ ಪೊಲೀಸರು, ಗೌರಿ-ಗಣೇಶ ಹಬ್ಬ ಮುಗಿ ಯುತ್ತಿದ್ದಂತೆಯೇ ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಸಮರ ಸಾರಿದ್ದಾರೆ.

ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ವಾಹನ ಸವಾರರು ಅಡ್ಡಾದಿಡ್ಡಿ ಚಾಲನೆ ಮಾಡುತ್ತಿರುವುದರಿಂದ ಮೈಸೂರು ನಗರದಲ್ಲಿ ಅಪಘಾತಗಳು ಹೆಚ್ಚಾಗಿ, ಸಾವು-ನೋವುಗಳು ಸಂಭವಿಸುತ್ತಿರುವುದ ರಿಂದ ಎಚ್ಚೆತ್ತ ಸಂಚಾರ ಪೊಲೀಸರು, ಇಂದಿನಿಂದ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.

ಮೈಸೂರು ನಗರ ಸಂಚಾರ ವಿಭಾಗದ ಎಸಿಪಿ ಗಂಗಾಧರ ಸ್ವಾಮಿ ನೇತೃತ್ವದಲ್ಲಿ ಎನ್.ಆರ್. ಸಂಚಾರ ಠಾಣಾ ವ್ಯಾಪ್ತಿಗೆ ಬರುವ ಮಂಡಿ ಪೊಲೀಸ್ ಠಾಣೆ ಸರಹದ್ದಿನಲ್ಲಿ ಎನ್.ಆರ್. ಸಂಚಾರ ಠಾಣೆ ಇನ್ಸ್‍ಪೆಕ್ಟರ್ ಪ್ರಸನ್ನಕುಮಾರ್ ಸೇರಿದಂತೆ ಎಲ್ಲಾ ಸಂಚಾರ ಠಾಣೆ ಇನ್ಸ್‍ಪೆಕ್ಟರ್, ಸಬ್‍ಇನ್ಸ್‍ಪೆಕ್ಟರ್, ಅಸಿಸ್ಟೆಂಟ್ ಸಬ್‍ಇನ್ಸ್‍ಪೆಕ್ಟರ್ ಹಾಗೂ ಸಿಬ್ಬಂದಿ ಸೇರಿ ಬೆಳಗ್ಗೆ 11.30ರಿಂದ ಸಂಜೆ 6 ಗಂಟೆವರೆಗೆ ವಿಶೇಷ ಕಾರ್ಯಾಚರಣೆ ನಡೆಸಿದರು.

ಫೌಂಟನ್ ಸರ್ಕಲ್, ಸೆಂಟ್ ಫಿಲೋಮಿನಾ ಚರ್ಚ್ ಬಳಿ, ನೆಹರು ಸರ್ಕಲ್, ಸರ್ಕಾರಿ ಆಯುರ್ವೇದ ಸರ್ಕಲ್, ಜೆಕೆ ಮೈದಾನ ಬಳಿ, ಹಳೇ ಆರ್‍ಎಂಸಿ ಸರ್ಕಲ್ ಸೇರಿದಂತೆ ಹಲವು ಪ್ರಮುಖ ಸರ್ಕಲ್ ಹಾಗೂ ರಸ್ತೆಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ ನಡೆಸಲಾಯಿತು.

ಮೊಬೈಲ್‍ನಲ್ಲಿ ಮಾತನಾಡಿಕೊಂಡು ವಾಹನ ಚಾಲನೆ ಮಾಡು ವುದು, ದ್ವಿಚಕ್ರ ವಾಹನದಲ್ಲಿ 3 ಮಂದಿ ಸಂಚಾರ, ಏಕಮುಖ ಸಂಚಾರ ವಿರುದ್ಧ ವಾಹನ ಚಾಲನೆ ಹಾಗೂ ಸಿಗ್ನಲ್ ಜಂಪ್ ಮಾಡುವವರಿಗೆ ಕೇಸ್ ಹಾಕಿ ದಂಡ ವಸೂಲಿ ಮಾಡಲಾಯಿತು.

ಕೋವಿಡ್-19 ಹಿನ್ನೆಲೆಯಲ್ಲಿ ಆಗಿಂದಾಗ್ಗೆ ಲಾಕ್‍ಡೌನ್ ವಾರಾಂತ್ಯ ಕಫ್ರ್ಯೂ, ರಾತ್ರಿ ಕಫ್ರ್ಯೂ ಕಾರಣ ವಾಹನ ಸವಾರರು ಸಂಚಾರ ನಿಯಮ ಪಾಲಿಸಬೇಕೆಂಬುದನ್ನೇ ಮರೆತಿದ್ದರು. ಪೊಲೀಸರೂ ಕೇವಲ ಕೋವಿಡ್ ಮಾರ್ಗಸೂಚಿ ಅನುಸರಿಸು ವತ್ತ ಮಾತ್ರ ಗಮನಹರಿಸುತ್ತಿದ್ದರಿಂದ ಮೈಸೂರಿನಲ್ಲಿ ಅಡ್ಡಾದಿಡ್ಡಿ ವಾಹನ ಚಾಲನೆ ಮಾಡುವುದು ಮುಂದುವರೆದಿತ್ತು.

ಜನರು ನಿಯಮ ಗಾಳಿಗೆ ತೂರಿ ಮನಬಂದಂತೆ ವಾಹನ ಚಾಲನೆ ಮಾಡುತ್ತಿರುವುದರಿಂದ ಅಪಘಾತಗಳು ಸಂಭವಿಸಿ ಅಮಾಯ ಕರು ಬಲಿಯಾಗುತ್ತಿದ್ದರು. ಇದೀಗ ಎಚ್ಚೆತ್ತ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ಮೂಲಕ ಸಂಚಾರ ನಿಯಮ ಉಲ್ಲಂಘಿ ಸುವ ವಾಹನ ಸವಾರರಿಗೆ ದಂಡದ ಬರೆ ಹಾಕಲು ಮುಂದಾಗಿ ದ್ದಾರೆ. ಸಂಚಾರ ಠಾಣೆ ಇನ್ಸ್‍ಪೆಕ್ಟರ್‍ಗಳಾದ ಪ್ರಸನ್ನಕುಮಾರ್, ಮುನಿಯಪ್ಪ, ಮಂಜುನಾಥ, ನಟರಾಜ್, ಅರುಣಕುಮಾರಿ, ಸಬ್ ಇನ್ಸ್‍ಪೆಕ್ಟರ್‍ಗಳಾದ ನಟರಾಜು, ಪೂಜಾ, ಭಾಗ್ಯ, ಮದನ್‍ಕುಮಾರ್, ಅನಿಲ್‍ಕುಮಾರ್, ನಾಗರಾಜ್ ಹಾಗೂ ಎಲ್ಲಾ ಸಂಚಾರ ಠಾಣೆಗಳ ಸಿಬ್ಬಂದಿ ವಿಶೇಷ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Translate »