ಕಡಿದ ಎರಡು ಮರಗಳಿಗೂ `ಅಂತ್ಯಸಂಸ್ಕಾರ’ದ ವಿಧಿ ವಿಧಾನ
ಮೈಸೂರು

ಕಡಿದ ಎರಡು ಮರಗಳಿಗೂ `ಅಂತ್ಯಸಂಸ್ಕಾರ’ದ ವಿಧಿ ವಿಧಾನ

December 27, 2021

ಮೈಸೂರು, ಡಿ.26(ಆರ್‍ಕೆಬಿ)- ರಾತ್ರೋರಾತ್ರಿ ಮರಗಳನ್ನು ಕಡಿದು ಹಾಕಿರುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿರುವ ಪರಿಸರ ಹೋರಾಟಗಾರರು, ಪ್ರಕೃತಿ ಪ್ರೇಮಿಗಳು, ಯಾದವಗಿರಿ ನಿವಾಸಿ ಗಳು ಭಾನುವಾರ ಮೈಸೂರು ಗ್ರ್ರಾಹಕರ ಪರಿಷತ್ (ಎಂಜಿಪಿ) ನೇತೃತ್ವದಲ್ಲಿ ತರಾಸು ವೃತ್ತ (ಆಕಾಶವಾಣಿ ವೃತ್ತ)ದ ಬಳಿಯಿ ರುವ ವಿವೇಕಾನಂದ ರಸ್ತೆಯಲ್ಲಿ ಆಸ್ಪತ್ರೆ ಎದುರಿನ ಎರಡು ಮರಗಳಿಗೆ ವಿಧಿ ವಿಧಾನ ಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.

ಆಸ್ಪತ್ರೆ ಎದುರು ರೋಗಿಗಳಿಗೆ ಹಾಗೂ ನಾಗರಿಕರಿಗೆ ನೆರಳಿನ ಆಶ್ರಯ ನೀಡಿ, ಕಳೆದ 40 ವರ್ಷಗಳಿಂದ ಸುತ್ತಮುತ್ತಲಿನ ಜನರಿಗೆ ಶುದ್ಧ ಗಾಳಿಯನ್ನು ನೀಡುತ್ತಾ ಬಂದಿದ್ದ ದೊಡ್ಡ ಗುಲ್‍ಮೊಹರ್ ಮರಗಳನ್ನು ರಾತ್ರೋರಾತ್ರಿ ಕಡಿದು ಹಾಕಲಾಗಿದೆ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದರು.

ಸಾಮಾನ್ಯವಾಗಿ ‘ಅಂತ್ಯಸಂಸ್ಕಾರ’ಕ್ಕೆ ಬಳಸುವ ಸಾಮಗ್ರಿಗಳನ್ನು ಬಳಸಿ ಕತ್ತರಿಸಿದ ಎರಡು ಮರಗಳಿಗೆ ಅರ್ಚಕರೊಬ್ಬರು ‘ಸಂಸ್ಕಾರ’ ಗಳನ್ನು ನಡೆಸಿದರೆ, ನೆರೆದಿದ್ದ ಜನರು ಗುಲಾಬಿ ಹೂ ಮತ್ತು ಹಾರಗಳನ್ನು ಅರ್ಪಿಸಿ ‘ಶ್ರದ್ಧಾಂಜಲಿ’ ಸಲ್ಲಿಸಿದರು. ಕಡಿದ ಮರಗಳು, ಮತ್ತೆ ಜೀವಂತವಾಗಲಿ ಎಂದು ಪ್ರಾರ್ಥಿಸಿ ದರು. ಭವಿಷ್ಯದಲ್ಲಿ ಮರಗಳನ್ನು ಕಡಿಯಲು ಅವಕಾಶ ನೀಡುವುದಿಲ್ಲ ಎಂದು ನೆರೆದಿದ್ದ ವರೆಲ್ಲಾ ಒಕ್ಕೊರಲಿನಿಂದ ಪ್ರತಿಜ್ಞೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂಜಿಪಿಯ ಭಾಮಿ ವಿ.ಶೆಣೈ, ಸಂಪೂರ್ಣ ವಾಗಿ ಬೆಳೆದಿರುವ ಮರಗಳು ನೆಲಕ್ಕುರು ಳುತ್ತಿರುವಾಗ ಅರಣ್ಯ ಇಲಾಖೆ ಮತ್ತು ಇತರ ಸಂಬಂಧಪಟ್ಟ ಸರ್ಕಾರಿ ಸಂಸ್ಥೆಗಳು ಏನು ಮಾಡುತ್ತಿವೆ? ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಯಾವುದೇ ಮರಗಳನ್ನು ಅನುಮತಿ ಇಲ್ಲದೆ ಕಡಿಯಲು ಅವಕಾಶವಿಲ್ಲ. ಹಾಗೇನಾದರೂ ಅನಧಿಕೃತವಾಗಿ ಮರಗಳನ್ನು ಕಡಿಯುವವರಿಗೆ ಪ್ರತಿ ಮರಕ್ಕೆ 50,000 ರೂ. ದಂಡ ವಿಧಿಸಲು ಅವಕಾಶವಿದೆ. ಮರ ಕಡಿಯುವವರಿಗೆ ಮತ್ತು ಕಡಿಸುವ ವರನ್ನು ತಪ್ಪಿತಸ್ಥರೆಂದು ಗುರ್ತಿಸಿ ಅವರಿಗೆ ಮೂರು ಪಟ್ಟು ಹೆಚ್ಚು ದಂಡ ವಿಧಿಸಬೇಕು. ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಮರಗಳನ್ನು ಕಡಿಯುವುದನ್ನು ತಡೆ ಯಲು ಸಂಬಂಧಿಸಿದ ಎಲ್ಲಾ ಅಧಿಕಾರಿ ಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ವಿವೇಚನಾರಹಿತವಾಗಿ ಕಡಿಯುವುದರಿಂದ ನಿಜವಾದ ಅಪಾಯವನ್ನು ಎದುರಿ ಸುತ್ತಿರುವ ಪ್ರಕೃತಿ ಮತ್ತು ಪರಿಸರವನ್ನು ಉಳಿಸಬೇಕು ಎಂದು ಒತ್ತಾಯಿಸಿದರು.
ಮರ ಕಡಿಯಲು ಸರ್ಕಾರ, ಖಾಸಗಿ ಅಥವಾ ಇತರೆ ಸಂಸ್ಥೆಗಳು ಮುಂದಾದರೆ ‘ಅಪ್ಪಿಕೋ’ ಮಾದರಿಯ ಆಂದೋಲನ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಶ್ರೀಕಾಂತ್ ಕೋಟಿವೃಕ್ಷ, ಗ್ರಾಹಕರ ಪರಿಷತ್‍ನ ಪರಶುರಾಮೇಗೌಡ, ಸುಮನ್ ಭಾಮಿ ವಿ.ಶೆಣೈ, ಯಾದವಗಿರಿ ಕಾರ್ಪೊರೇಟರ್ ಡಿ.ವಿ.ರವೀಂದ್ರ, ಪರಿಸರವಾದಿಗಳಾದ ಡಾ.ಎಸ್.ರಂಗನಾಥ್ ಇನ್ನಿತರರು ಉಪಸ್ಥಿತರಿದ್ದರು.

Translate »