ಬಿಡುಗಡೆಗೆ ರಡಿಯಾದ ಗರುಡಾಕ್ಷ
ಸಿನಿಮಾ

ಬಿಡುಗಡೆಗೆ ರಡಿಯಾದ ಗರುಡಾಕ್ಷ

March 20, 2020

ನರಸಿಂಹಮೂರ್ತಿ ಅವರ ನಿರ್ಮಾಣದ ಪ್ರಥಮ ಚಿತ್ರ `ಗರುಡಾಕ್ಷ’ ಇದೀಗ ಬಿಡುಗಡೆಗೆ ಸಿದ್ಧವಾಗಿದ್ದು, ಸೆನ್ಸಾರ್‍ನಿಂದ ಯು/ಎ ಪ್ರಮಾಣ ಪತ್ರ ಪಡೆದಿಕೊಂಡಿದೆ. ಶ್ರೀಧರ್‍ವೈಷ್ಣವ್ ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕ ನರಸಿಂಹ ಮೂರ್ತಿ ಅವರು ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕರಾಗಿದ್ದು, ಸಿನಿಮಾ ಮೇಲಿನ ಪ್ರೀತಿಯಿಂದ ನಿರ್ಮಾಪಕರಾಗಿದ್ದಾರೆ.

ಪ್ರೀತಿ, ವಿಶ್ವಾಸ, ನಂಬಿಕೆ, ಸ್ವಾರ್ಥ, ಹಣ, ದುರಾಸೆಯಂಥ ಮಾನವ ಸಹಜ ಸ್ವಭಾವಗಳ ಸುತ್ತ ಹೆಣೆಯಲಾಗಿರುವ ಕಥೆ ಈ ಚಿತ್ರದಲ್ಲಿದ್ದು, ತಂದೆ, ಮಕ್ಕಳ ನಡುವಿನ ಬಾಂಧವ್ಯದ ಎಳೆಯನ್ನು ಬಿಚ್ಚಿಡÀಲಾಗಿದೆ. ಸಂಬಂಧಗಳ ಮೌಲ್ಯದ ಜೊತೆಗೆ ವಾಸ್ತವ ಜಗತ್ತಿನ ಅನಾವರಣವನ್ನು ಈ ಚಿತ್ರದಲ್ಲಿ ಕಾಣಬಹುದು. ಯುವನಟ ಯದು(ಚೇತನ್) ಈ ಚಿತ್ರದ ಮೂಲಕ ನಾಯಕನಾಗಿ ಹೊರ ಹೊಮ್ಮಿದ್ದು, ಈ ಹಿಂದೆ ಉಡುಂಬ ಚಿತ್ರದಲ್ಲಿ ದ್ವಿತೀಯ ನಾಯಕನಾಗಿ ನಟಿಸಿದ್ದರು. ತನ್ನ ತಂದೆಯ ಸಾವು ಆಕಸ್ಮಿಕವಲ್ಲ ಅದು ಹತ್ಯೆ ಎಂದು ತಿಳಿದ ನಾಯಕ ಅದರ ರಹಸ್ಯವನ್ನು ಹೇಗೆ ಬಯಲಿಗೆಳೆಯುತ್ತಾನೆ ಎನ್ನುವ ಕಥಾಹಂದರ ಈ ಚಿತ್ರದಲ್ಲಿದ್ದು, ಬೆಂಗಳೂರು ಸುತ್ತಮುತ್ತ ಚಿತ್ರದ ಮಾತಿನಭಾಗ ಹಾಗೂ ಚಿಕ್ಕಮಗಳೂರು ಸುತ್ತಮುತ್ತ ಹಾಡುಗಳನ್ನು 35 ದಿನಗಳ ಕಾಲ ಚಿತ್ರೀಕರಿಸಿಕೊಳ್ಳಲಾಗಿದೆ.

ಚಿತ್ರದ ನಾಯಕಿ ರಕ್ಷ ಅವರಿಗೆ ಇದು ಮೊದಲ ಸಿನಿಮಾ. ವಸಂತ್‍ಕುಮಾರ್(ಲಕ್ಷ್ಮಿ ಬಾರಮ್ಮ), ರಫೀಕ್, ಶ್ರೀಧರ್ ವೈಷ್ಣವ್, ಸತ್ಯಾರ್ಜುನ, ವಿಶೃತ್ ಹಾಗೂ ಕುಮುದಾ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶ್ರೀವತ್ಸ ಅವರ ಸಂಗೀತ ಸಂಯೋಜನೆ, ಎನ್‍ಟಿಎ ವೀರೇಶ್ ಅವರ ಛಾಯಾಗ್ರಹಣ, ಎನ್.ಎಂ.ವಿಶ್ವ ಅವರ ಸಂಕಲನ, ಸುರೇಶ್ ನೃತ್ಯ ಸಂಯೋಜನೆ, ವೈಲೆಂಟ್ ವೇಲು ಸಾಹಸ, ಹೇಮಂತ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

Translate »