ಗೌರಿ-ಗಣೇಶ ಹಬ್ಬ; ತರಕಾರಿ, ಹಣ್ಣುಗಳ ಧಾರಣೆ ಅಲ್ಪ ಏರಿಕೆ
ಮೈಸೂರು

ಗೌರಿ-ಗಣೇಶ ಹಬ್ಬ; ತರಕಾರಿ, ಹಣ್ಣುಗಳ ಧಾರಣೆ ಅಲ್ಪ ಏರಿಕೆ

August 21, 2020

ಮೈಸೂರು, ಆ.20(ಆರ್‍ಕೆಬಿ)- ಶುಕ್ರವಾರ ಗೌರಿ, ಶನಿವಾರ ಗಣೇಶ ಹಬ್ಬ ಇರುವುದರಿಂದ ಗುರುವಾರ ಮೈಸೂರಿನ ಪ್ರಮುಖ ದೇವರಾಜ ಮಾರುಕಟ್ಟೆಯಲ್ಲಿ ಉತ್ತಮ ವ್ಯಾಪಾರ ನಡೆಯಿತು. ಹೂವಿನ ಅಂಗಡಿ ಗಳನ್ನು ಜೆ.ಕೆ.ಮೈದಾನಕ್ಕೆ ಸ್ಥಳಾಂತರಿಸಿದ್ದರಿಂದ ದೇವ ರಾಜ ಮಾರುಕಟ್ಟೆಯಲ್ಲಿ ಗುರುವಾರ ಜನಜಂಗುಳಿ ಎಂದಿ ನಂತೆ ಇರಲಿಲ್ಲ. ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣು ಕೊಳ್ಳುವವರಷ್ಟೇ ಇದ್ದರು. ಜನಸಂದಣಿ ಕಡಿಮೆ ಇದ್ದಿದ್ದರಿಂದ ವ್ಯಾಪಾರ ಸರಾಗ ನಡೆಯುತ್ತಿತ್ತು.

ಮಾಮೂಲಿ ದಿನಗಳಿಗಿಂತ ಬಾಳೆಹಣ್ಣು, ತೆಂಗಿನ ಕಾಯಿ, ಬಾಳೆ ಎಲೆ, ಅವರೆಕಾಯಿ ಇನ್ನಿತರೆ ತರಕಾರಿ ಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ತರ ಕಾರಿ ದರದಲ್ಲಿಯೂ ಕೊಂಚ ಏರಿಕೆ ಕಂಡು ಬಂದಿತ್ತು. ಕ್ಯಾರೆಟ್, ಬೀಟ್‍ರೂಟ್, ಟೊಮ್ಯಾಟೊ, ಎಲೆಕೋಸು ಕೆಜಿಗೆ ರೂ.20ರಿಂದ 30ಕ್ಕೆ ಮಾರಾಟವಾಗುತ್ತಿದ್ದವು. ಬೀನ್ಸ್ ಕೆಜಿಗೆ ರೂ. 60, ಬೆಂಡೇಕಾಯಿ ರೂ. 30ರಿಂದ 40, ಹಸಿಮೆಣಸಿನಕಾಯಿ- ರೂ. 60, ದಪ್ಪ ಮೆಣಸಿನ ಕಾಯಿ ರೂ. 40, ಗೋರಿಕಾಯಿ- ರೂ.40, ಅವರೆ ಕಾಯಿ- ರೂ.40, ಬಟಾಣಿ ಕೆಜಿಗೆ ರೂ.140, ಈರುಳ್ಳಿ 2 ಕೆಜಿಗೆ ರೂ.50, ಸೌತೆಕಾಯಿ ಕೆಜಿಗೆ ರೂ.40, ಏಲಕ್ಕಿ ಬಾಳೆ ಕೆಜಿಗೆ ರೂ. 80, ಪಚ್ಚಬಾಳೆ ಕೆಜಿಗೆ ರೂ.30ರಿಂದ 40, ತೆಂಗಿನಕಾಯಿ ಒಂದಕ್ಕೆ ರೂ.20ರಿಂದ 30, ಸೇಬು- ಕೆಜಿಗೆ ರೂ. 160ರಿಂದ 180ಕ್ಕೆ ಮಾರಾಟವಾಗುತ್ತಿತ್ತು. ಇನ್ನೊಂದೆಡೆ ಬಳೆ ಅಂಗಡಿಗಳು ಹೆಣ್ಣು ಮಕ್ಕಳಿಂದ ತುಂಬಿದ್ದವು. ಅಂತರ ಕಾಯ್ದುಕೊಳ್ಳುವುದನ್ನು ಮರೆತ ಮಹಿಳೆಯರು ತಮಗೆ ಬೇಕಾದ ಬಳೆ ಇನ್ನಿತರ ಸೌಂದರ್ಯವರ್ಧಕಗಳನ್ನು ಖರೀದಿಸುತ್ತಿದ್ದರು.

Translate »