ಗೌರವಧನ, ಆಹಾರ ಧಾನ್ಯಕ್ಕೆ ಆಗ್ರಹಿಸಿ ಬಿಸಿಯೂಟ ಕೆಲಸಗಾರರ ಪ್ರತಿಭಟನೆ
ಮೈಸೂರು

ಗೌರವಧನ, ಆಹಾರ ಧಾನ್ಯಕ್ಕೆ ಆಗ್ರಹಿಸಿ ಬಿಸಿಯೂಟ ಕೆಲಸಗಾರರ ಪ್ರತಿಭಟನೆ

August 21, 2020

ಮೈಸೂರು, ಆ.20(ಪಿಎಂ)- ಶಾಲೆ ಪುನಾರಂಭದವರೆಗೂ ಗೌರವಧನ ಪಾವತಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ (ಎಐ ಯುಟಿಯುಸಿ ಸಂಯೋಜಿತ) ಜಿಲ್ಲಾ ಸಮಿತಿಯಿಂದ ಗುರುವಾರ ಮೈಸೂರು ಜಿಪಂ ಕಾರ್ಯಾಲಯದೆದುರು ಪ್ರತಿ ಭಟನೆ ನಡೆಸಲಾಯಿತು.

ಲಾಕ್‍ಡೌನ್ ಆರಂಭಕ್ಕೂ ಮುನ್ನವೇ ರಾಜ್ಯ ಸರ್ಕಾರ ಶಾಲೆಗಳಿಗೆ ರಜೆ ಕೊಟ್ಟಿದೆ. ಈಗ ಲಾಕ್‍ಡೌನ್ ಮುಗಿದರೂ ಶಾಲೆ ಪ್ರಾರಂಭವಾಗಿಲ್ಲ. ಶಾಲೆಗಳಿಗೆ ರಜೆ ಇದ್ದಾಗ ಮನೆಮನೆಗೆ ಆಹಾರ ಧಾನ್ಯ ತಲುಪಿಸುವ ಕೆಲಸ ಮಾಡಿದ್ದೇವೆ. ಶಿಕ್ಷಣ ಇಲಾಖೆ ನೀಡಿದ ಜವಾಬ್ದಾರಿ ನಿಭಾಯಿ ಸಿದ್ದೇವೆ. ಈ ಕಾರ್ಯನಿರ್ವಹಣೆಗಾಗಿ ಏ.15ರವರೆಗೆ ಗೌರವಧನ ನೀಡಲು ಸರ್ಕಾರ ಆದೇಶಿಸಿದ್ದರೂ ಹಣ ಖಾತೆಗೆ ಜಮೆ ಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮೊದಲೆಲ್ಲಾ ಬೇಸಿಗೆ ರಜೆ ವೇಳೆ ಕೂಲಿ ಮಾಡಿಯಾದರೂ ಜೀವನ ಸಾಗಿಸುತ್ತಿ ದ್ದೆವು. ಆದರೆ ಈಗ ಆರ್ಥಿಕ ಚಟುವಟಿಕೆ ಗಳಿಲ್ಲದ ಕಾರಣ ಕೆಲಸವಿಲ್ಲದೇ ಜೀವನ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ಸರ್ಕಾರ ನಮಗೆ ನೆರವಾಗಬೇಕು ಎಂದು ಒತ್ತಾಯಿ ಸಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಉಳಿದ ದಿನಸಿಯನ್ನು ಗುತ್ತಿಗೆ ಸಿಬ್ಬಂದಿಗೆ ಹಂಚಲಾಗಿದೆ. ಅದೇ ರೀತಿ ನಮಗೂ ಶಾಲೆಯಲ್ಲಿ ಉಳಿದಿರುವ ಅಕ್ಷರ ದಾಸೋಹ ಯೋಜನೆಯ ದಿನಸಿ ಪದಾರ್ಥ ಹಂಚಿ ನಮ್ಮ ಕಷ್ಟ ಪರಿಹರಿಸ ಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಸಂಚಾಲಕ ಮುದ್ದು ಕೃಷ್ಣ, ಬಿಸಿಯೂಟದ ಸಿಬ್ಬಂದಿ ಗೀತಾ, ಲಕ್ಷ್ಮಿ, ಗೀತಮ್ಮ, ರಾಜೇಶ್ವರಿ, ಶಂಕರಮ್ಮ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

Translate »