ಆಶ್ರಯ ಯೋಜನೆಗೆ ಜಮೀನು ಪಡೆಯಿರಿ: ಶಾಸಕ ನಾಗೇಂದ್ರ
ಮೈಸೂರು

ಆಶ್ರಯ ಯೋಜನೆಗೆ ಜಮೀನು ಪಡೆಯಿರಿ: ಶಾಸಕ ನಾಗೇಂದ್ರ

January 7, 2021

ಮೈಸೂರು, ಜ. 6(ಆರ್‍ಕೆ)- ಮೈಸೂರು ತಾಲೂಕು ಶಾದನಹಳ್ಳಿ, ಬೆಲವತ್ತ ಹಾಗೂ ಹೆಬ್ಬಾಳು ಗ್ರಾಮದ ಸರ್ವೆ ನಂಬರ್‍ಗಳಲ್ಲಿ ಗುರ್ತಿಸಿರುವ ಸರ್ಕಾರಿ ಜಮೀನುಗಳ ದಾಖಲೆಗಳನ್ನು ಆರ್‍ಟಿಸಿಯಲ್ಲಿ ನಮೂದಿಸಿ ಆಶ್ರಯ ಯೋಜನೆಗೆ ಪಡೆಯುವಂತೆ ಚಾಮ ರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ, ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಆಶ್ರಯ ಸಮಿತಿ ಸಭೆ ನಡೆಸಿದ ಅವರು, ಆಶ್ರಯ ಯೋಜನೆಗೆ ಅಗತ್ಯವಿರುವ ಯುಎಲ್‍ಸಿ ಜಮೀನುಗಳ ಪಟ್ಟಿ ಮಾಡಿ, ಪಾಲಿಕೆ ವಶಕ್ಕೆ ಪಡೆಯಲು ಕ್ರಮ ವಹಿಸಿ, ಹೆಬ್ಬಾಳು ಗ್ರಾಮದ ಸರ್ವೆ ನಂ.141ರ ಜಮೀನುಗಳನ್ನು ಕೂಡಲೇ ಪಾಲಿಕೆ ಸುಪರ್ದಿಗೆ ಪಡೆದು ಸುತ್ತ ತಂತಿ ಬೇಲಿ ಹಾಕಿಸುವಂತೆಯೂ ಸೂಚಿಸಿದರು.

2020ರ ಡಿಸೆಂಬರ್ 18ರ ಸರ್ಕಾರಿ ಆದೇಶ ದಂತೆ ಮಂಜೂರಾಗಿರುವ ಹಂಚ್ಯಾ ಗ್ರಾಮದ ಸರ್ವೆ ನಂ.65ರಲ್ಲಿ 23 ಎಕರೆ ಜಮೀನನ್ನು ಹಸ್ತಾಂತರಿಸಿಕೊಂಡು ಆರ್‍ಟಿಸಿಯಲ್ಲಿ ವಿವರ ನಮೂದಿಸುವಂತೆ ತಹಸೀಲ್ದಾರ್‍ಗೆ ಮನವಿ ಮಾಡು ವಂತೆ ತಿಳಿಸಿದ ಅವರು, ಚಾಮರಾಜ ಕ್ಷೇತ್ರದಲ್ಲಿ ಈಗಾಗಲೇ ಆಶ್ರಯ ಮನೆಗಳಿಗೆ ಅರ್ಜಿ ಸಲ್ಲಿಸಿ ಹಣ ಪಾವತಿಸಿರುವ 2,700ಕ್ಕೂ ಹೆಚ್ಚು ಫಲಾ ನುಭವಿಗಳ ಪಟ್ಟಿ ಪರಿಶೀಲಿಸಿ ಸಮಿತಿ ಸಭೆಗೆ ಮಂಡಿಸುವಂತೆ ಸೂಚಿಸಿದರು. ಶ್ರೀರಾಂಪುರ ದಲ್ಲಿ ನಿರ್ಮಿಸಿರುವ ಆಶ್ರಯ ಬಡಾವಣೆಗೆ ವಿದ್ಯುತ್, ಒಳಚರಂಡಿ, ರಸ್ತೆ, ನೀರಿನ ಸೌಲಭ್ಯ ಗಳಿಲ್ಲದೇ ಜನರು ಪರದಾಡುತ್ತಿರುವುದರಿಂದ ಅಲ್ಲಿಗೆ ಅಗತ್ಯ ಸೌಲಭ್ಯ ಒದಗಿಸಲು ಕ್ರಮ ವಹಿಸಿ ಎಂದು ಅವರು ಹೇಳಿದರು.

ಮುಂದೆ ಪ್ರತೀ 2 ತಿಂಗಳಿಗೊಮ್ಮೆ ಆಶ್ರಯ ಸಮಿತಿ ಸಭೆ ಕರೆದು ಹಿಂದಿನ ಸಭೆಗಳ ತೀರ್ಮಾನವನ್ನು ಪಾಲಿಸಿರುವ ಬಗ್ಗೆ ಮಾಹಿತಿ ನೀಡಬೇಕು ಎಂದು ನಾಗೇಂದ್ರ ಅವರು ಇದೇ ವೇಳೆ ಅಧಿಕಾರಿಗಳಿಗೆ ತಿಳಿಸಿದರು. ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ, ನೋಡಲ್ ಅಧಿಕಾರಿ ಐಶ್ವರ್ಯ, ಆಶ್ರಯ ಸಮಿತಿ ಸದಸ್ಯರಾದ ಕಾಂಚನ ಜೈನ್, ಅನೂಜ್, ಮಹೇಶ್‍ರಾಜೇ ಅರಸ್, ಮಹೇಶ್, ತಹಸೀಲ್ದಾರ್ ಕೆ.ಆರ್. ರಕ್ಷಿತ್, ಮುಡಾ ವಿಶೇಷ ಭೂ ಸ್ವಾಧೀನಾಧಿಕಾರಿ ಚಂದ್ರಮ್ಮ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಮಂಜುನಾಥ್ ಹಾಗೂ ಪಾಲಿಕೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Translate »