ಮೈಸೂರಲ್ಲಿ ಯುದ್ಧ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ
ಮೈಸೂರು

ಮೈಸೂರಲ್ಲಿ ಯುದ್ಧ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ

January 7, 2021

ಮೈಸೂರು, ಜ.6(ಪಿಎಂ)- ವೀರ ಯೋಧರ ಸ್ಮರಣೆಗಾಗಿ ಮೈಸೂರು ನಗರದ ಸೂಕ್ತ ಸ್ಥಳದಲ್ಲಿ ಯುದ್ಧ ಸ್ಮಾರಕ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಮೈಸೂರು ಕನ್ನಡ ವೇದಿಕೆ ವತಿ ಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು, ದೇಶದ ರಕ್ಷಣೆಗೆ ಸದಾ ತಮ್ಮ ಜೀವದ ಹಂಗು ತೊರೆದು ಗಡಿಯಲ್ಲಿ ರಾಷ್ಟ್ರವನ್ನು ಕಾಯುತ್ತಿರುವ ನಮ್ಮ ಭಾರತೀಯ ಯೋಧರು ಇಡೀ ವಿಶ್ವಕ್ಕೆ ಮಾದರಿ. ದೇಶದ ನಾಗರಿಕರು ನೆಮ್ಮದಿಯಿಂದ ಇರಬೇಕಾದರೆ ನಮ್ಮ ಯೋಧರ ನಿಸ್ವಾರ್ಥ ಸೇವೆಯನ್ನು ಪ್ರತಿ ಯೊಬ್ಬರು ಸ್ಮರಿಸಬೇಕು. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಯುದ್ಧ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ಮೈಸೂರಿನ ಇತಿಹಾಸವನ್ನು ಒಮ್ಮೆ ನೆನಪಿಸಿ ಕೊಂಡರೆ ಭಾರತೀಯ ಸೇನೆಗೆ ತನ್ನದೇ ಆದ ಕೊಡುಗೆ ನೀಡಿರುವುದು ಅರಿವಾಗುತ್ತದೆ. ಕೊಡ ಗಿನ ವೀರ ಸೇನಾನಿ ಜನರಲ್ ಕೆ.ಎಂ.ಕಾರಿಯಪ್ಪ ಅವರ ಹೆಸರು ಪ್ರತಿಯೊಬ್ಬ ಕನ್ನಡಿಗರಲ್ಲಿ ದೇಶಾ ಭಿಮಾನ ಮೂಡಿಸುತ್ತದೆ. ಮೈಸೂರಿನಲ್ಲಿ ಕಳೆದ 20 ವರ್ಷಗಳ ಹಿಂದೆಯೇ ಯುದ್ಧ ಸ್ಮಾರಕ ನಿರ್ಮಾಣಕ್ಕೆ ಬೇಡಿಕೆ ಮುಂದಿಟ್ಟಿದ್ದರೂ ವಿಳಂಬ ಧೋರಣೆ ತಾಳಿರುವುದು ಸರಿಯಲ್ಲ. ಕೂಡಲೇ ಸ್ಮಾರಕ ನಿರ್ಮಾಣ ಸಂಬಂಧ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ಮುಖಂಡರಾದ ನಾಲಾಬೀದಿ ರವಿ, ಬೋಗಾದಿ ಸಿದ್ಧೇಗೌಡ, ಪ್ಯಾಲೇಸ್‍ಬಾಬು, ಗೋಪಿ, ಅರವಿಂದ, ಬೀಡಾಬಾಬು, ಕಾವೇರಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »