ಮೈಸೂರು,ಅ.12-ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ ಎಚ್ಚರಿಸುವುದರ ಜೊತೆಗೆ ಅವರಿಗೊಂದು ಮಾಸ್ಕ್ ನೀಡುವ ಮೂಲಕ ಜಾಗೃತಿ ಮೂಡಿಸ ಬೇಕೆಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಸಲಹೆ ನೀಡಿದ್ದಾರೆ.
ಕೊರೊನಾಗೆ ಯಾವುದೇ ಲಸಿಕೆ ಲಭ್ಯವಿಲ್ಲದ ಪ್ರಸ್ತುತ ಸಂದರ್ಭ ದಲ್ಲಿ ಮಾಸ್ಕ್ ಒಂದೇ ಜೀವರಕ್ಷಕವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು. ಒಬ್ಬರ ನಿರ್ಲಕ್ಷದಿಂದ ಹತ್ತಾರು ಜನರಿಗೆ ತೊಂದರೆಯಾಗಬಹುದು. ಹಾಗಾಗಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಮೂಲಕ ಎಚ್ಚರಿಸಲಾಗುತ್ತಿದೆ. ಪೊಲೀಸರು ನಗರ ಪ್ರದೇಶದಲ್ಲಿ 250ರೂ. ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 100 ರೂ. ದಂಡ ವಸೂಲಿ ಮಾಡುತ್ತಿದ್ದಾರೆ. ಕೊರೊನಾ ನಿಯಂತ್ರಿಸುವ ಉದ್ದೇಶದಿಂದ ದಂಡ ವಿಧಿಸುವುದಕ್ಕೆ ವಿರೋಧವಿಲ್ಲ. ಆದರೆ ಹೀಗೆ ದಂಡ ವಿಧಿಸಿದ ಕ್ಷಣವೇ ಅವರಿಗೆ ಉತ್ತಮ ಗುಣಮಟ್ಟದ ಮಾಸ್ಕ್ ನೀಡಿದರೆ ಒಳ್ಳೆಯದು. ಆಗ ಮಾಸ್ಕ್ ನೆಪದಲ್ಲಿ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಸರಿಯಾದ ಉತ್ತರ ಕೊಟ್ಟಂತಾಗುತ್ತದೆ. ಜೊತೆಗೆ ಜನರ ಆರೋಗ್ಯದ ಬಗೆಗಿನ ನಿಜವಾದ ಕಾಳಜಿ ವ್ಯಕ್ತಪಡಿಸಿದಂತಾಗುತ್ತದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.