ಮೈಸೂರು,ಆ.3(ಆರ್‍ಕೆಬಿ)-ಸರ್ಕಾರಿ ಪಡಿತರ ವಿತರಕರಿಗೆ ಸರ್ಕಾರವು ಕಮಿಷನ್ ಹೆಚ್ಚಳ ಮಾಡಿ ಕೊರೊನಾ ವೈರಸ್ ನಿಂದ ನಿಧನರಾದವರಿಗೆ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಇಂದಿಲ್ಲಿ ಸರ್ಕಾರವನ್ನು ಆಗ್ರಹಿಸಿದರು.
ರಾಜ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ಪಡಿತರ ವಿತರಕ ರಿದ್ದು, 4,45,00,000 ಕಾರ್ಡುದಾರರಿಗೆ ಪಡಿತರ ಅಂಗಡಿ ಮಾಲೀಕರು ಜೀವದ ಹಂಗು ತೊರೆದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳಡಿ ಆಹಾರ ಪದಾರ್ಥ ಗಳನ್ನು ವಿತರಿಸುತ್ತಿದ್ದೇವೆ. ಈಗಾಗಲೇ ರಾಜ್ಯದಲ್ಲಿ ಸುಮಾರು 6 ಮಂದಿ ಪಡಿತರ ಅಂಗಡಿ ಮಾಲೀಕರು ಹಾಗೂ ಸಹಾ ಯಕರು ಕೊರೊನಾ ವೈರಸ್‍ಗೆ ಸಾವಿಗೀಡಾಗಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ 3-4 ಬಾರಿ ಪತ್ರ ಬರೆದು ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದ್ದರೂ ಸರ್ಕಾರ ಗಮನ ಹರಿಸಿಲ್ಲ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಪ್ರತೀ ಕ್ವಿಂಟಾಲ್‍ಗೆ ಕೇವಲ 100 ರೂ. ಕಮಿಷನ್ ಕೊಡುತ್ತಿದ್ದು, ಮೈಸೂರು ಜಿಲ್ಲೆಯಲ್ಲಿ ಕಳೆದ 3 ತಿಂಗಳಿಂದ ಅದನ್ನೂ ಕೊಡುವಲ್ಲಿ ಆಹಾರ ಇಲಾಖೆ ವಿಫಲ ವಾಗಿದೆ. ಮುಂದಿನ ತಿಂಗಳೊಳಗೆ ಕಮಿಷನ್ ಹಣ ಹಾಗೂ ಇಕೆವೈಸಿ ಹಣವನ್ನು ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು 5ನೇ ದಿನಾಂಕದೊಳಗೆ ಮಾಲೀಕರಿಗೆ ಕಮಿಷನ್ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಜಿಲ್ಲಾಡಳಿತದ ವಿರುದ್ಧ ಪ್ರತಿ ಭಟನೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೊರೊನಾ ವೈರಸ್‍ನಿಂದ ಇಲಾಖೆ ಅಧಿಕಾರಿಗಳು ಹಾಗೂ ಸಗಟು ಮಳಿಗೆಗಳಲ್ಲಿ ಕೆಲಸ ಮಾಡುವ ಹಮಾಲಿಗಳಿಗೂ ರಕ್ಷಣೆ ನೀಡಬೇಕು ಎಂದೂ ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಪಡಿತರ ವಿತರಕರ ಸಂಘದ ಮೈಸೂರು ತಾಲೂಕು ಅಧ್ಯಕ್ಷ ರಾಜು, ಕಾರ್ಯದರ್ಶಿ ರವಿಕುಮಾರ್, ನಗರ ಕಾರ್ಯದರ್ಶಿ ರವಿಮಂಜೇಗೌಡ, ರಾಜ್ಯ ಸಮಿತಿ ಸದಸ್ಯ ಎ.ಟಿ.ಗೋಪಾಲ್ ಇದ್ದರು.