ಭಾನುವಾರದ ಲಾಕ್‍ಡೌನ್‍ಗೆ ಮೈಸೂರು ಸ್ತಬ್ಧ
ಮೈಸೂರು

ಭಾನುವಾರದ ಲಾಕ್‍ಡೌನ್‍ಗೆ ಮೈಸೂರು ಸ್ತಬ್ಧ

July 6, 2020

ಮೈಸೂರು,ಜು.5(ಎಂಟಿವೈ)- ರಾಜ್ಯದಲ್ಲಿ ದಿನ ದಿಂದ ದಿನಕ್ಕೆ ಅಟ್ಟಹಾಸ ಮೆರೆಯುತ್ತಿರುವ ಮಹಾ ಮಾರಿ ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿ ನಲ್ಲಿ ವಾರಾಂತ್ಯದಲ್ಲಿ ಲಾಕ್‍ಡೌನ್ ಮಾಡಿರುವ ಸರ್ಕಾ ರದ ಆದೇಶಕ್ಕೆ ಮೈಸೂರಿನ ಜನತೆ ಸ್ವಯಂ ಪ್ರೇರಣೆ ಯಿಂದ ಪೂರ್ಣ ಪ್ರಮಾಣ ಬೆಂಬಲ ನೀಡಿದ್ದು, ಭಾನುವಾರ ಜನ ಹಾಗೂ ವಾಹನ ಸಂಚಾರವಿಲ್ಲದೆ ಸಾಂಸ್ಕøತಿಕ ನಗರಿ ಮೈಸೂರು ಬಿಕೋ ಎನ್ನುತ್ತಿತ್ತು.

ವಾರಾಂತ್ಯ ದಿನ ಭಾನುವಾರದಂದು ಜನಸಂದಣಿ ಯಿಂದ ಕೂಡಿರುತ್ತಿದ್ದ ಸಾಂಸ್ಕøತಿಕ ನಗರಿ ಮೈಸೂರು ಇಂದು ಅಕ್ಷರಶಃ ಮೌನಕ್ಕೆ ಶರಣಾಗಿತ್ತು. ಕೊರೊನಾ ಮಿತಿ ಮೀರಿದ ವೇಗದಲ್ಲಿ ಹರಡುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ವೈರಾಣು ನಿಯಂತ್ರಣಕ್ಕೆ ಹಲವು ಕಟ್ಟುಪಾಡು ವಿಧಿಸಿ ದ್ದರೂ ಜನರು ನಿಯಮ ಗಾಳಿಗೆ ತೂರುತ್ತಿರುವುದ ರೊಂದಿಗೆ ಬೇರೆ ರಾಜ್ಯದಿಂದ ವಾಪಸ್ಸಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯದಲ್ಲಿ ಇಂದಿನಿಂದ(ಜು.5) ಆ.2ರವರೆಗೆ 5 ಭಾನು ವಾರ ಸಂಪೂರ್ಣವಾಗಿ ಲಾಕ್‍ಡೌನ್ ಮಾಡಲು ಸರ್ಕಾರ ನಿರ್ಧರಿಸಿದ್ದು, ಮೊದಲ ಲಾಕ್‍ಡೌನ್‍ಗೆ ಜಿಲ್ಲೆಯ ಜನ ರಿಂದ ಉತ್ತಮ ಪ್ರತಿಕ್ರಿಯೆವ್ಯಕ್ತವಾಗಿದೆ. ಶನಿವಾರ (ಜು.4) ಸಂಜೆ 6 ಗಂಟೆಯಿಂದ ಸೋಮವಾರ (ಜು.6) ಮುಂಜಾನೆ 5 ಗಂಟೆವರೆಗೆ 35 ಗಂಟೆಗಳ ಲಾಕ್‍ಡೌನ್ ಯಶಸ್ವಿಯಾಗಿದ್ದು, ಎಲ್ಲೆಡೆ ಬಿಕೋ ಎನ್ನುವ ವಾತಾವರಣ ನಿರ್ಮಾಣವಾಗಿತ್ತು.

ದಿನಸಿ ಅಂಗಡಿಗಳೂ ಬಂದ್: ಇಂದಿನ ಲಾಕ್‍ಡೌನ್ ನಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ವಿನಾಯಿತಿ ನೀಡಲಾಗಿತ್ತು. ಮೆಡಿಕಲ್ ಶಾಪ್, ಹಾಲಿನ ಡೈರಿ, ಕೆಲವು ಹೋಟೆಲ್, ಪೆಟ್ರೋಲ್ ಬಂಕ್, ಹಾಪ್‍ಕಾಮ್ಸ್, ಮಾಂಸದ ಅಂಗಡಿ, ತರಕಾರಿ ಅಂಗಡಿಗಳಿಗೆ ವಿನಾಯಿತಿ ನೀಡ ಲಾಗಿತ್ತು. ದಿನಸಿ ಅಂಗಡಿ ತೆರೆಯಲು ಹಾಗೂ ಎಪಿ ಎಂಎಸಿಯಲ್ಲಿ ವಹಿವಾಟು ನಡೆಸಲು ಅವಕಾಶ ನೀಡಲಾಗಿತ್ತಾದರೂ ವ್ಯಾಪಾರಿಗಳು ಮಾತ್ರ ವಹಿವಾಟು ನಡೆಸಲು ಮುಂದಾಗದೇ ಅಂಗಡಿ ಬಂದ್ ಮಾಡಿ ಲಾಕ್‍ಡೌನ್‍ಗೆ ಬೆಂಬಲ ನೀಡಿದರು. ಅದರಲ್ಲೂ ಸಂತೇಪೇಟೆ, ಚಿಕ್ಕಗಡಿಯಾರ ಸುತ್ತಮುತ್ತಲಿನ ದಿನಸಿ ಅಂಗಡಿಗಳು ತೆರೆಯಲೇ ಇಲ್ಲ. ಕೆಲವು ಬಡಾವಣೆಗಳಲ್ಲಿ ಬೆರಳೆಣಿಕೆಯಷ್ಟು ಸಣ್ಣಪುಟ್ಟ ಕಿರಾಣಿ ಅಂಗಡಿಗಳು ತೆರೆದಿದ್ದನ್ನು ಹೊರತುಪಡಿಸಿದರೆ ಬಹುತೇಕ ಎಲ್ಲಾ ಕಡೆಗಳಲ್ಲೂ ದಿನಸಿ ಅಂಗಡಿಗಳಿಗೂ ಬೀಗ ಹಾಕಲಾಗಿತ್ತು. ಕೊರೊನಾಗೆ ಹೆದರಿ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕಿದ್ದರಿಂದ ಗ್ರಾಹಕರ ಸಂಖ್ಯೆ ಕ್ಷೀಣಿಸಿದ್ದರಿಂದ ವ್ಯಾಪಾರ ಆಗದೇ ಇರುವುದನ್ನು ಮನಗಂಡು ವ್ಯಾಪಾರಿಗಳು ಅಗತ್ಯ ವಸ್ತುಗಳ ಅಂಗಡಿಯನ್ನು ತೆರೆಯಲು ಮುಂದೆ ಬರಲ್ಲಿಲ್ಲ.

ವಾಣಿಜ್ಯ ಮಳಿಗೆಗಳೂ ಇರಲಿಲ್ಲ: ಪ್ರಮುಖ ವಾಣಿಜ್ಯ ರಸ್ತೆಗಳಾದ ಡಿ.ದೇವರಾಜ ಅರಸ್ ರಸ್ತೆ, ಅಶೋಕರಸ್ತೆ, ಸಯ್ಯಾಜಿರಾವ್ ರಸ್ತೆ, ಕಾಳಿದಾಸ ರಸ್ತೆ, ಕೈಗಾರಿಕಾ ಪ್ರದೇಶಗಳಲ್ಲೂ ಲಾಕ್‍ಡೌನ್‍ಗೆ ಪೂರ್ಣ ಬೆಂಬಲ ದೊರೆಯಿತು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳೂ ಒಳಗೊಂಡಂತೆ ಬಹುತೇಕ ಕೈಗಾರಿಕೆಗಳು ಬಂದ್ ಆಗಿದ್ದವು. ಇದರಿಂದ ಲಾಕ್‍ಡೌನ್ ಯಶಸ್ವಿಗೆ ಸಹಕಾರಿಯಾಯಿತು.

ಮಾಂಸ ಮಾರಾಟವೂ ಡಲ್: ಭಾನುವಾರ ಮಾಂಸಾಹಾರ ಸೇವನೆಗೆ ಮುಗಿಬೀಳುತ್ತಿದ್ದ ಜನತೆ ಸಂಪೂರ್ಣ ಲಾಕ್‍ಡೌನ್ ಹಿನ್ನೆಲೆಯಲ್ಲಿ ಇಂದು ಮಾಂಸ ಖರೀದಿಗೂ ಹಿಂದೇಟು ಹಾಕಿದರು. ಮೈಸೂರಲ್ಲಿ ಸುಮಾರು 500 ಮಾಂಸ ಮಾರಾಟ ಮಳಿಗೆಗಳಿದ್ದು, ಅವುಗಳಲ್ಲಿ ಹಲವು ಮಾಂಸದ ಅಂಗಡಿಗಳು ಬಂದ್ ಆಗಿದ್ದವು. ತೆರೆದಿದ್ದ ಮಳಿಗೆಗಳಲ್ಲಿ ಮಾಂಸ ಮಾರಾಟ ಡಲ್ ಆಗಿತ್ತು. ಶೇ.50ರಷ್ಟು ಗ್ರಾಹಕರು ಮಾಂಸದ ಅಂಗಡಿಗಳತ್ತ ಸುಳಿಯದಿರುವುದರಿಂದ ವ್ಯಾಪಾರಿಗಳು ಸಂಜೆವರೆಗೂ ಗ್ರಾಹಕರಿಗಾಗಿ ಕಾಯುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ಭಣಗುಟ್ಟ ಮಾರುಕಟ್ಟೆ: ಮೈಸೂರಿನ ದೇವರಾಜ ಮಾರುಕಟ್ಟೆ, ವಾಣಿವಿಲಾಸ, ಮಂಡಿ ಮಾರುಕಟ್ಟೆ ಸೇರಿದಂತೆ ಎಲ್ಲಾ ಮಾರುಕಟ್ಟೆಯಲ್ಲಿ ವ್ಯಾಪಾರಿಗಳ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಬಹುತೇಕ ಎಲ್ಲಾ ಮಳಿಗೆಗಳನ್ನು ಬಂದ್ ಮಾಡಿದ್ದ ವ್ಯಾಪಾರಿಗಳು ವಿಶ್ರಾಂತಿಗೆ ಮೊರೆ ಹೋಗಿದ್ದರು. ವಾಹನ ಸಂಚಾರಕ್ಕೆ ಅವಕಾಶವಿಲ್ಲದ ಕಾರಣ ಜನರು ಮನೆಯಿಂದ ಹೊರ ಬರದೇ ಇದ್ದ ಕಾರಣ ವ್ಯಾಪಾರ ನಡೆಯುವುದಿಲ್ಲ ಎನ್ನುವುದನ್ನು ಅರಿತ ವ್ಯಾಪಾರಿಗಳು ಮಳಿಗೆ ತೆರೆಯದೇ ಇರುವುದೇ ಲೇಸೆಂದು ನಿರ್ಧರಿಸಿದ್ದರಿಂದ ಮಾರುಕಟ್ಟೆಗೂ ಲಾಕ್‍ಡೌನ್ ಬಿಸಿ ತಟ್ಟಿತ್ತು.

ಬಸ್ ನಿಲ್ದಾಣದಲ್ಲೂ ನೀರವ ಮೌನ: ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಿಂದ ಬೇರೆ ಬೇರೆ ನಗರ, ಜಿಲ್ಲೆಗಳಿಗೆ ಪ್ರಯಾಣಿಸುತ್ತಿದ್ದ ಸಾರಿಗೆ ಬಸ್‍ಗಳು ಹಾಗೂ ಮೈಸೂರು ನಗರ ಬಸ್ ನಿಲ್ದಾಣದಿಂದ ನಗರದ ವಿವಿಧ ಬಡಾವಣೆ ಹಾಗೂ ಗ್ರಾಮೀಣ ಪ್ರದೇ ಶಕ್ಕೆ ಸಂಚರಿಸುತ್ತಿದ್ದ ಎಲ್ಲಾ ಬಸ್‍ಗಳ ಸಂಚಾರ ನಿರ್ಬಂಧಿಸಲಾಗಿತ್ತು. ಬಸ್‍ಗಳ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದ್ದರಿಂದ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು.

Translate »