ಪುರಭವನದಲ್ಲಿ ಕೊರೊನಾ ಪರೀಕ್ಷೆಗೆ ಉತ್ತಮ ಪ್ರತಿಕ್ರಿಯೆ
ಮೈಸೂರು

ಪುರಭವನದಲ್ಲಿ ಕೊರೊನಾ ಪರೀಕ್ಷೆಗೆ ಉತ್ತಮ ಪ್ರತಿಕ್ರಿಯೆ

August 28, 2020

ಮೈಸೂರು, ಆ.27(ಆರ್‍ಕೆ)- ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ಮೈಸೂರಿನಲ್ಲಿ ಪರೀಕ್ಷೆಯನ್ನು ತೀವ್ರಗೊಳಿಸಲಾಗಿದೆ.

ಜಿಲ್ಲಾಡಳಿತ, ಮೈಸೂರು ಮಹಾನಗರ ಪಾಲಿಕೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮೈಸೂರಿನ ಪುರಭವನದಲ್ಲಿ ಇಂದು ನಡೆದ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷಾ ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಉದ್ದುದ್ದ ಸರತಿ ಸಾಲಿನಲ್ಲಿ ನಿಂತು ಕೊರೊನಾ ಪರೀಕ್ಷೆ ಮಾಡಿಸಿಕೊಂಡರು.

ಆಧಾರ್ ಕಾರ್ಡ್ ನಂಬರ್, ಮೊಬೈಲ್ ನಂಬರ್, ವಾಸದ ವಿಳಾಸ ಪಡೆದು ವೈದ್ಯರು ಹಾಗೂ ನರ್ಸ್‍ಗಳು ಸಾರ್ವಜನಿಕರ ಸ್ವ್ಯಾಬ್ ತೆಗೆದು ರ್ಯಾಪಿಡ್ ಆ್ಯಂಟಿಜೆನ್ ಕಿಟ್ ಮೂಲಕ ಕೊರೊನಾ ಪರೀಕ್ಷೆ ನಡೆಸಿ ಸ್ಥಳದಲ್ಲೇ ಫಲಿತಾಂಶ ನೀಡಿದರು.
ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಿ ನಡೆಸಿದ ಪರೀಕ್ಷೆಯಲ್ಲಿ ಇಂದು 300ಕ್ಕೂ ಹೆಚ್ಚು ಮಂದಿ ಸ್ವ್ಯಾಬ್ ನೀಡಿದರು. ನಂತರ ಕೇವಲ 30 ನಿಮಿಷದಲ್ಲೇ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ಚೀಟಿಯಲ್ಲಿ ಕೊರೊನಾ ಫಲಿತಾಂಶದ ಲಿಖಿತ ವರದಿ ನೀಡಲಾಯಿತು.

ಇಂದಿನ ಶಿಬಿರದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ಕೋವಿಡ್ ಪರೀಕ್ಷೆ ಮಾಡಿಕೊಳ್ಳುತ್ತಿದ್ದುದು ಕಂಡು ಬಂದಿತು. ನಾಲ್ವರು ವೈದ್ಯರು, 6 ಮಂದಿ ನರ್ಸ್‍ಗಳು ಪಿಪಿಇ ಕಿಟ್ ಧರಿಸಿ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಸ್ವ್ಯಾಬ್ ತೆಗೆದು ಪರೀಕ್ಷೆ ನಡೆಸಿದರು.

ದೇವರಾಜ ಠಾಣೆ ಇನ್‍ಸ್ಪೆಕ್ಟರ್ ಪ್ರಸನ್ನಕುಮಾರ್, ಸಬ್ ಇನ್‍ಸ್ಪೆಕ್ಟರ್ ರಾಜು ಅವರು ಸಿಬ್ಬಂದಿ ನಿಯೋಜಿಸಿ, ಪರೀಕ್ಷೆಗೆ ಬಂದವರನ್ನು ಮಾಸ್ಕ್ ಧರಿಸುವಂತೆ ಹೇಳಿ ದೂರ ದೂರ ನಿಲ್ಲಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನೆರವಾದರು. ಸ್ಥಳದಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿತ್ತು. ಮೈಸೂರು ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ನಗರದಾದ್ಯಂತ ಆಯ್ದ ಸಾರ್ವಜನಿಕ ಸ್ಥಳಗಳಲ್ಲಿ ಶಿಬಿರಗಳನ್ನು ಏರ್ಪಡಿಸುತ್ತಿರುವುದರಿಂದ ಜನರಿಗೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಅನುಕೂಲವಾಗುತ್ತದೆ.

Translate »