ಮೈಸೂರು, ಆ.26(ಪಿಎಂ)- ಕೃಷ್ಣರಾಜ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 14 ದೇವಾಲಯಗಳ ಜೀರ್ಣೋ ದ್ಧಾರಕ್ಕಾಗಿ ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ಒಟ್ಟಾರೆ 11.67 ಲಕ್ಷ ರೂ.ಗಳನ್ನು ಕ್ಷೇತ್ರದ ಆರಾಧನಾ ಸಮಿತಿ ಸಭೆಯಲ್ಲಿ ಬುಧವಾರ ಹಂಚಿಕೆ ಮಾಡಲಾಯಿತು.
ಮೈಸೂರು ತಾಲೂಕು ಕಚೇರಿಯ ಕೊಠಡಿ 107ರ ಸಭಾಂಗಣದಲ್ಲಿ ಆರಾಧನಾ ಸಮಿತಿ ಅಧ್ಯಕ್ಷರೂ ಆದ ಶಾಸಕ ಎಸ್.ಎ.ರಾಮದಾಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ಷೇತ್ರ ವ್ಯಾಪ್ತಿಯ ದೇವಾಲಯಗಳಿಗೆ ಅನುದಾನ ಹಂಚಿಕೆ ಮಾಡಲಾಯಿತು.
2017-18ನೇ ಸಾಲಿನ ಬಾಕಿ 89,200 ರೂ. ಅನು ದಾನ ಹಾಗೂ 2019-20ನೇ ಸಾಲಿನ 3,18,000 ರೂ. ಅನುದಾನ ಸೇರಿದಂತೆ ಒಟ್ಟು 4,07,200 ರೂ.ಗಳ ಆರಾ ಧನಾ ಯೋಜನೆ ಅನುದಾನವನ್ನು 6 ದೇವಸ್ಥಾನಗಳಿಗೆ ಹಂಚಿಕೆ ಮಾಡಲಾಯಿತು. ಈ ಪೈಕಿ ಬನುಮಯ್ಯ ರಸ್ತೆಯ ವೀರಭದ್ರೇಶ್ವರ ದೇವಸ್ಥಾನಕ್ಕೆ 50 ಸಾವಿರ ರೂ., ಸಿವೇಜ್ ಫಾರಂ ರಸ್ತೆಯ ಕರುಮಾರಿಯಮ್ಮ ದೇವ ಸ್ಥಾನಕ್ಕೆ 50 ಸಾವಿರ ರೂ., ಜಯನಗರದ ರಾಮಮಂದಿ ರಕ್ಕೆ 57 ಸಾವಿರ ರೂ., ಕುವೆಂಪು ನಗರ ಎಂ ಬ್ಲಾಕ್‍ನ ಗಣಪತಿ ದೇವಸ್ಥಾನಕ್ಕೆ 1 ಲಕ್ಷ ರೂ., ಸಿದ್ಧಾರ್ಥ ನಗರದ ಮಹಾಗಣಪತಿ ದೇವಸ್ಥಾನಕ್ಕೆ 50 ಸಾವಿರ ರೂ. ಹಾಗೂ ಇಟ್ಟಿಗೆಗೂಡು ಕರಗ ದೇವಸ್ಥಾನಕ್ಕೆ 1 ಲಕ್ಷ ರೂ. ಹಂಚಿಕೆ ಮಾಡಿ ತೀರ್ಮಾನ ಕೈಗೊಳ್ಳಲಾಯಿತು.
ಎಸ್‍ಸಿಪಿ ಯೋಜನೆಯ 2017-18ನೇ ಸಾಲಿನ 5,92,000 ರೂ. ಹಾಗೂ 2019-20ನೇ ಸಾಲಿನ 1,69,000 ರೂ. ಸೇರಿದಂತೆ ಒಟ್ಟು 7,61,000 ರೂ. ಅನುದಾನವನ್ನು ವಾರ್ಡ್ 60ರಲ್ಲಿನ ಐದು ದೇವಸ್ಥಾನಗಳಿಗೆ ತಲಾ 1 ಲಕ್ಷ ರೂ.ನಂತೆ ಹಂಚಿಕೆ ಮಾಡಲಾಯಿತು. ಅಶೋಕ ಪುರಂನ 6ನೇ ಕ್ರಾಸ್‍ನ ರಾಮಮಂದಿರ, 1ನೇ ಕ್ರಾಸ್‍ನ ಶಂಭುಲಿಂಗೇಶ್ವರ ದೇವಸ್ಥಾನ, 13ನೇ ಕ್ರಾಸ್‍ನ ಕತ್ತಿ ಮುನೇಶ್ವರ ದೇವಸ್ಥಾನ, ಇಲ್ಲಿನ ರಾಜೀವ್ ಗಾಂಧಿ ಕಾಲೋ ನಿಯ ಆದಿಶಕ್ತಿ ಪಟ್ಟಲದಮ್ಮ ದೇವಸ್ಥಾನ, ವೀವರ್ಸ್ ಕಾಲೋನಿಯ ಚಾಮುಂಡೇಶ್ವರಿ ದೇವಸ್ಥಾನಕ್ಕೆ 5 ಲಕ್ಷ ರೂ. ಅನುದಾನ ಹಂಚಿಕೆ ಮಾಡಲಾಯಿತು.
ಟಿಎಸ್‍ಪಿ ಯೋಜನೆಯಲ್ಲಿ 2016-17ನೇ ಸಾಲಿನ 50,800 ರೂ. ಅನುದಾನ, 2017-18ನೇ ಸಾಲಿನ 1,33, 600 ರೂ. ಅನುದಾನ ಹಾಗೂ 2019-20ನೇ ವರ್ಷದ 76,200 ರೂ. ಅನುದಾನ ಸೇರಿದಂತೆ ಒಟ್ಟು 2,60,600 ರೂ. ಅನುದಾನದಲ್ಲಿ ಚಿಕ್ಕಹರದನಹಳ್ಳಿಯ ಬೇಡರಕಣ್ಣಪ್ಪ ದೇವಸ್ಥಾನಕ್ಕೆ 1 ಲಕ್ಷ ರೂ., ಸುಣ್ಣದಕೇರಿಯ 4ನೇ ಕ್ರಾಸ್‍ನ ಸಿದ್ದಪ್ಪಾಜಿ ದೇವಸ್ಥಾನಕ್ಕೆ 60 ಸಾವಿರ ರೂ. ಹಾಗೂ ಸುಣ್ಣದಕೇರಿಯ ಶನೇಶ್ವರ ದೇವಸ್ಥಾನಕ್ಕೆ 1 ಲಕ್ಷ ರೂ. ಹಂಚಿಕೆ ಮಾಡಿ ನಿರ್ಣಯ ಕೈಗೊಳ್ಳಲಾಯಿತು. ಸಮಿತಿ ಸದಸ್ಯರಾದ ಕೆ.ರಮೇಶ್, ಸಿ.ಆರ್.ಉಮಾ, ಪಾಂಡು, ಬಿ.ಮಂಜುನಾಥ್ ಮತ್ತಿತರರು ಸಭೆಯಲ್ಲಿದ್ದರು.