ಹನೂರು,ಮಾ.1(ಸೋಮ)- ಕೇಂದ್ರ ಸರ್ಕಾರ ಮೂಲ ನಿವಾಸಿಗಳ ಪಟ್ಟಿಯಲ್ಲಿ ಜೇನುಕುರುಬ ಮತ್ತು ಕೊರಗ ಸಮುದಾಯವನ್ನು ಮಾತ್ರ ಸೇರ್ಪಡೆ ಮಾಡಿರುವುದರಿಂದ ಸೋಲಿಗ ಸಮುದಾಯಕ್ಕೆ ದೊರೆಯಬೇಕಾದ ಹಲವು ಸೌಲಭ್ಯಗಳು ದೊರಕುತ್ತಿಲ್ಲ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ವಿಷಾದಿಸಿದರು.
ತಾಲೂಕಿನ ಪೊನ್ನಾಚಿಯಲ್ಲಿ ನಡೆದ ಸೋಲಿಗ ಅಭಿ ವೃದ್ಧಿ ಸಂಘದ ಬೆಳ್ಳಿಹಬ್ಬ ಮಹೋತ್ಸವ ಸಮಾರೋಪದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 56 ಬುಡಕಟ್ಟು ಜನಾಂಗಗಳಿವೆ. ಸೋಲಿಗ ಸಮುದಾಯವನ್ನು ಕೇಂದ್ರ ಸರ್ಕಾರದ ಮೂಲ ನಿವಾಸಿಗಳ ಪಟ್ಟಿಗೆ ಸೇರ್ಪಡೆಗೊಳಿ ಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬೇಡಿಕೆ ಈಡೇರಿಕೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ. ಈ ನಿಟ್ಟಿನಲ್ಲಿ ಈಗಾಗಲೇ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಈ ಪ್ರಸ್ತಾವನೆ ಇನ್ನೂ ಅನುಮೋ ದನೆಯಾಗಿಲ್ಲ. ಈ ದಿಸೆಯಲ್ಲಿ ಸೋಲಿಗ ಸಮುದಾಯ, ಸಂಘ ಸಂಸ್ಥೆಗಳು ಎಲ್ಲರೂ ಒಟ್ಟಾಗಿ ಕೇಂದ್ರ ಸರ್ಕಾರ ವನ್ನು ಒತ್ತಾಯಿಸಬೇಕು ಎಂದು ಮನವಿ ಮಾಡಿದರು.
ವಿವೇಕಾನಂದ ಗಿರಿಜನ ಕೇಂದ್ರದ ಅಧ್ಯಕ್ಷ, ಪ್ರಾಧ್ಯಾಪಕ ಡಾ.ಜಡೇಗೌಡ ಮಾತನಾಡಿ, ನಾನೂ ಕೂಡ ಓರ್ವ ಸೋಲಿಗ ಸಮುದಾಯದವನಾಗಿದ್ದು ಉತ್ತಮ ಶಿಕ್ಷಣ ಪಡೆದ ಹಿನ್ನೆಲೆ ಇಂದು ಉತ್ತಮ ಹುದ್ದೆ ಪಡೆದಿದ್ದೇನೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ಸೋಲಿಗ ಸಮುದಾಯದ ಮಕ್ಕಳ ಸ್ಫರ್ಧಾತ್ಮಕ ಪರೀಕ್ಷೆಗಾಗಿ ಅವರಿಗೆ ತರಬೇತಿ ನೀಡುವ ಉದ್ದೇಶದಿಂದ ಮೈಸೂರಿನಲ್ಲಿ ಒಂದು ತರಬೇತಿ ಕೇಂದ್ರ ತೆರೆಯುವ ಉದ್ದೇಶ ಹೊಂದಿದ್ದು ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಕೇಂದ್ರ ತೆರೆಯುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ತಾಪಂ ಸದಸ್ಯ ರಾಜು, ಜಿಪಂ ಮಾಜಿ ಸದಸ್ಯರಾದ ಮಹದೇವ ನಾಯ್ಕ, ಕೇತಮ್ಮ, ತಾಲೂಕು ಪರಿಶಿಷ್ಠ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ರಂಗೇಗೌಡ, ಉಪಾಧ್ಯಕ್ಷೆ ಮುನಿ ಮಾದಮ್ಮ, ಕಾರ್ಯದರ್ಶಿ ವಿ.ಮುತ್ತಯ್ಯ, ಮುಖಂಡರಾದ ಮಂಗಲ ಪುಟ್ಟರಾಜು, ಶೀಲಾ ಖರೆ, ಜ್ಯೋತಿ, ಡಾ.ಮಾದೇ ಗೌಡ, ವೆಂಕಟ್ ನಾರಾಯಣ್ ಇನ್ನಿತರರಿದ್ದರು.